ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಅಕ್ರಮವಾಗಿ ಯೂರಿಯಾ ರಸ ಗೊಬ್ಬರ ಸಂಗ್ರಹಿಸಿದ್ದ ಗೋಡೌನ್ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ತಂಡ ದಾಳಿ ನಡೆಸಿರುವ ಘಟನೆ ಬಳ್ಳಾರಿ ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಜರುಗಿದೆ.
ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ನಾಲ್ಕು ಸಾವಿರಕ್ಕೂ ಅಧಿಕ ಚೀಲಗಳಲ್ಲಿದ್ದ ಯೂರಿಯಾ ರಸ ಗೊಬ್ಬರ ವಶಪಡಿಸಿಕೊಂಡಿದ್ದಾರೆ. ಎಡ್ವಿನ್ ಎಂಬವರ ಮಾಲೀಕತ್ವದ ಗೋಡೌನ್ನಲ್ಲಿ ರಸ ಗೊಬ್ಬರದ ಚೀಲಗಳು ಪತ್ತೆಯಾಗಿವೆ.
ಕಾಳ ಸಂತೆಯಲ್ಲಿ ಮಾರಾಟ ಶಂಕೆ:
ರೈತರಿಗೆ ವಿತರಿಸಬೇಕಾದ ಯೂರಿಯಾ ರಸ ಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದ್ದು ಈ ರಸ ಗೊಬ್ಬರವನ್ನು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹುನ್ನಾರ ನಡೆದಿರುವುದು ಬೆಳಕಿಗೆ ಬಂದಿದೆ. ಗೋಡೌನ್ ಮಾಲೀಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಸ್ತುತ ಟಿಬಿ ಡ್ಯಾಂ ಗೇಟ್ ರಿಪೇರಿ ಹಿನ್ನೆಲೆಯಲ್ಲಿ ಎರಡನೇ ಬೆಳೆಗೆ ನೀರಿನ ಕೊರತೆ ಇರುವುದರಿಂದ ಬಳ್ಳಾರಿಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಕಡಿಮೆಯಾಗಿದೆ. ಈ ಸಂದರ್ಭದಲ್ಲೇ ಯೂರಿಯಾ ಸಂಗ್ರಹಿಸಿಡಲಾಗಿದೆ. ಜೂನ್ ತಿಂಗಳ ಮುಂಗಾರು ವೇಳೆ ಯೂರಿಯಾ ಗೊಬ್ಬರಕ್ಕೆ ಭಾರಿ ಬೇಡಿಕೆ ಉಂಟಾಗುವ ಸಾಧ್ಯತೆ ಇದ್ದು ಈಗಿನಿಂದಲೇ ಅಕ್ರಮವಾಗಿ ಸಂಗ್ರಹ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

