ಚಂದ್ರವಳ್ಳಿ ನ್ಯೂಸ್, ಹಿರಿಯೂರು:
೨೦೨೩-೨೪ನೇ ಸಾಲಿನ ಮುಂಗಾರು, ಹಾಗೂ ಹಿಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೊಂದಣಿ ಮಾಡಿಕೊಂಡ ರೈತರ ಪ್ರಸ್ತಾವನೆಗಳನ್ನು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ಹೋಲಿಕೆ ಮಾಡಿದಾಗ ತಾಳೆಯಾಗದೇ ಇರುವ ಒಟ್ಟು ೪೧೪ ರೈತರ ಪ್ರಸ್ತಾವಗಳು ತಿರಸ್ಕೃತಗೊಂಡಿವೆ ಎಂದು ಹಿರಿಯೂರು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರಲ್ಲಿ ಮುಂಗಾರು ಹಂಗಾಮಿನ ೩೭೩ ಪ್ರಸ್ತಾವನೆಗಳು ಹಾಗೂ ಹಿಂಗಾರು ಹಂಗಾಮಿನ ೪೧ ಪ್ರಸ್ತಾವನೆಗಳು ತಿರಸ್ಕತಗೊಂಡಿರುತ್ತದೆ. ತಿರಸ್ಕೃತಗೊಂಡಿರುವ ರೈತರ ಮಾಹಿತಿಯನ್ನು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ನೋಟೀಸ್ ಬೋರ್ಡ್‌ಗಳಲ್ಲಿ ಪ್ರಕಟಿಸಲಾಗಿದೆ. ಫೆಬ್ರವರಿ-೨೭ ರ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಅವಕಾಶ ನೀಡಲಾಗಿದೆ.
ಆಕ್ಷೇಪಣೆ ಸಲ್ಲಿಸುವ ರೈತರು ಅರ್ಜಿಯೊಂದಿಗೆ ೨೦೨೩-೨೪ನೇ ಸಾಲಿನ ಬೆಳೆವಿಮೆಗೆ ನೊಂದಾಯಿಸಿರುವ ಬೆಳೆ ನಮೂದಾಗಿರುವ ಪಹಣಿ ಅಥವಾ ಬೆಂಬಲ ಬೆಲೆ ಪ್ರಯೋಜನಾ ಪಡೆದಿದ್ದಲ್ಲಿ ಇದರ ರಶೀದಿ ಅಥವಾ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡಿದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬೇಕೆಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಪ್ರಕಟಣೆಯಲ್ಲಿ ತಾಲ್ಲೂಕಿನ ರೈತರಿಗೆ ಮನವಿ ಮಾಡಲಾಗಿದೆ.