ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹನಿಟ್ರ್ಯಾಪ್ ಪ್ರಕರಣ ಹಿಟ್ ಅಂಡ್ ರನ್ ರೀತಿ ಇದೆ. ಈ ಬಗ್ಗೆ ಗುರುವಾರದಂದೇ ಪೊಲೀಸರಿಗೆ ದೂರು ನೀಡಲಿ ಎಂದು ನಾನು ಸಲಹೆ ನೀಡಿದ್ದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಭಾಗಮಂಡಲದ ಹೆಲಿಪ್ಯಾಡ್ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ಶೀಘ್ರ ತನಿಖೆಯಾಗಬೇಕು, ಕ್ರಮ ತೆಗೆದುಕೊಳ್ಳಲು ತಡ ಮಾಡಬಾರದು ಎಂದು ನಾನೂ ಒತ್ತಾಯ ಮಾಡುತ್ತಿದ್ದೇನೆ ಎಂದು ಹೇಳಿದರು.
48 ಶಾಸಕರು ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ ಎಂದು ಅವರು ತಿಳಿಸಿದರು. ಸರ್ಕಾರದ ಸಚಿವರಿಗೆ ರಕ್ಷಣೆ ಇಲ್ಲವೇ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ, ರಕ್ಷಣೆಯಿಲ್ಲವೆಂದು ಯಾರು ಹೇಳಿದ್ದು? ಹನಿಟ್ರ್ಯಾಪ್ ಮಾಡುವವರು ಸುಮ್ಮನೆ ನಿಮ್ಮ ಬಳಿ ಬರುತ್ತಾರೆಯೇ? ನೀವು ಹಲೋ ಎಂದರೆ ಅವರು ಹಲೋ ಎನ್ನುತ್ತಾರೆ. ನೀವು ಪ್ರತಿಕ್ರಿಯೆ ನೀಡಲಿಲ್ಲ ಎಂದರೆ ಯಾರಾದರೂ ಮಾತನಾಡಿಸುತ್ತಾರಾ? ಮಾಧ್ಯಮದವರು ಮಾತಾನಾಡಿಸಿದರೆ ನಾನು ಮಾತನಾಡಿಸುತ್ತೇನೆ ಎಂದು ಡಿಸಿಎಂ ಕಾಲೆಳೆದ ಪ್ರಸಂಗವೂ ಜರುಗಿತು.
ಹನಿಟ್ರ್ಯಾಪ್ ಹಿಂದೆ ಡಿ.ಕೆ.ಶಿವಕುಮಾರ್:
ಹನಿಟ್ರ್ಯಾಪ್ ಹಿಂದೆ ಡಿ.ಕೆ.ಶಿವಕುಮಾರ್ ತಂಡವಿದೆ ಎಂದು ಶಾಸಕ ಮುನಿರತ್ನ ಮಾಡಿರುವ ಆರೋಪದ ಬಗ್ಗೆ ಪ್ರಶ್ನಿಸಿದಾಗ, ಅವರು ವಿಧಾನಸೌಧದಲ್ಲಿ ಏನೆಲ್ಲಾ ಮಾಡಿದ್ದರು ಎನ್ನುವುದು ಪೊಲೀಸ್ ದೂರಿನಲ್ಲಿ ಇದೆಯಲ್ಲವೇ? ಆರ್. ಅಶೋಕ್ಗೆ, ಯಡಿಯೂರಪ್ಪ ಅವರಿಗೆ ಏನೋ ಆಯಿತು ಎಂದು ಬಿಜೆಪಿಯವರೇ ಮಾತನಾಡುತ್ತಿದ್ದರಲ್ಲವೇ? ಅವರ ನೋವನ್ನು ಅವರು ಹೇಳಿಕೊಂಡಿದ್ದಾರೆ. ಮಾಡಿದ್ದುಣ್ಣೋ ಮಾರಾಯ. ಅವರ ಪಕ್ಷದವರಿಗೆ ಹೇಳಿ ಒಂದೊಳ್ಳೆ ಆಸ್ಪತ್ರೆಗೆ ಸೇರಿಸಿ ಪರೀಕ್ಷೆ ಮಾಡಿಸಲಿ. ಅವರಿಗೆ ಒಂದಷ್ಟು ತೊಂದರೆಗಳಿವೆ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.
ಬಂದ್ ಅವಶ್ಯಕತೆಯಿಲ್ಲ: ಮಾ.22 ರಂದು ಕರ್ನಾಟಕ ಬಂದ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ರಾಜ್ಯದ ಹಿತಕ್ಕಾಗಿ ಒಳ್ಳೆ ಕೆಲಸ ಏನಿದ್ದರೂ ನಾವು ಬೆಂಬಲ ನೀಡುತ್ತೇವೆ. ಕಾನೂನಿನಲ್ಲಿ ಇರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಯಾವ ಗಲಾಟೆಗಳನ್ನೂ ಮಾಡದೆ, ಯಾವ ಬಂದ್ ಕೂಡ ಮಾಡದೇ, ದಯವಿಟ್ಟು ಎಲ್ಲರೂ ಶಾಂತ ರೀತಿಯಿಂದ ಇರಬೇಕು ಎಂದು ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದರು.