ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಕೃಷಿ ಇಲಾಖೆಯು ಜಲಾನಯನ ಕಾರ್ಯಕ್ರಮಗಳಾದ ಮಣ್ಣು ಮಾದರಿಗಳ ಸಂಗ್ರಹಣೆ ಮತ್ತು ವಿಶ್ಲೇಷಣೆ, ಉದ್ಯೋಗಖಾತ್ರಿ ಯೋಜನೆ, ಕೃಷಿಕರಿಗೆ ತರಬೇತಿ ಮತ್ತು ರಾಷ್ಟ್ರೀಯ ಸುಸ್ಥಿರ ಕೃಷಿ ಯೋಜನೆಗಳನ್ನು 2024-25 ನೇ ಸಾಲಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಪ್ರಶಸ್ತಿ ಗಳಿಸಿದೆ.
ಕೃಷಿ ಇಲಾಖೆ ವತಿಯಿಂದ ಕಳೆದ ಏಪ್ರಿಲ್ 16 ಮತ್ತು 17 ರಂದು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಮುಂಗಾರು ಹಂಗಾಮು ಕಾರ್ಯಾಗಾರದಲ್ಲಿ ಕೃಷಿ ಸಚಿವರು, ಕೃಷಿ ಆಯುಕ್ತರು ಮತ್ತು ಕೃಷಿ ನಿರ್ದೇಶಕರು ಚಿತ್ರದುರ್ಗ ಜಿಲ್ಲೆಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ.
ಜಲಾನಯನ ಕಾರ್ಯಕ್ರಮಗಳಡಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗಿಂತಲೂ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ, ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ.
ಎನ್ಎಂಎಸ್ಎ (ಆರ್ಎಡಿ)- ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ (ಮಳೆಯಾಶ್ರಿತ ಪ್ರದೇಶ ಅಭಿವೃದ್ದಿ) ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೊಳಕಾಲ್ಮೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳಲ್ಲಿ ಒಟ್ಟು 60 ಆಯ್ದ ಗ್ರಾಮಗಳಲ್ಲಿ ಪ್ರತಿ ಫಲಾನುಭವಿಗೆ ರೂ.20,000/- ಗರಿಷ್ಟ ಸಹಾಯಧನ ಯೋಜನೆಯಡಿಯಲ್ಲಿ ಹಸು ವಿತರಣೆ ಮಾಡಿದ್ದು, ರೂ.404.71 ಲಕ್ಷಗಳಲ್ಲಿ ಅನುದಾನ ಭರಿಸಿ 2 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಸುಗಳ ವಿತರಣೆ ಮಾಡಿ ರಾಜ್ಯದಲ್ಲಿಯೇ ಮಾದರಿಯಾಗಿದ್ದು, ಈ ಕಾರ್ಯಕ್ಕೂ ಮೊದಲ ಸ್ಥಾನವನ್ನು ಚಿತ್ರದುರ್ಗ ಜಿಲ್ಲೆ ಪಡೆದುಕೊಂಡಿದೆ.
ಅದೇ ರೀತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೃಷಿ ಇಲಾಖೆ, ಜಲಾನಯನ ಅಭಿವೃದ್ದಿ ವಿಭಾಗದಲ್ಲಿ 7,68,421 ಮಾನವ ದಿನಗಳನ್ನು ಸೃಜಿಸಲಾಗಿದ್ದು, ಮುಖ್ಯವಾಗಿ ರೈತರ ಜಮೀನಿನಲ್ಲಿ ಬದು ಮತ್ತು ಕೃಷಿಹೊಂಡ ನಿರ್ಮಾಣ ಮಾಡಿಕೊಂಡಿದ್ದು, ರಾಜ್ಯದಲ್ಲಿಯೇ ಎರಡನೇ ಸ್ಥಾನ ಲಭಿಸಿದೆ. ಒಟ್ಟಾರೆಯಾಗಿ ಬೆಂಗಳೂರು ವಿಭಾಗದಲ್ಲಿ ಜಲಾನಯನ ಯೋಜನೆಯ ಅನುಷ್ಟಾನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ.
ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ:
2024-25ನೇ ಸಾಲಿನಲ್ಲಿ ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಮಣ್ಣು ಪರೀಕ್ಷಾ ಪ್ರಯೋಗಾಲಯಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಚಿತ್ರದುರ್ಗ ಜಿಲ್ಲೆಯ ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಲಭಿಸಿದೆ.
“ನಾವು ಸತ್ತರೆ ಮಣ್ಣಿಗೆ, ಮಣ್ಣು ಸತ್ತರೆ ಎಲ್ಲಿಗೆ, ಮಣ್ಣಿನ ಆರೋಗ್ಯದಿಂದ ಬೆಳೆಗಳ ಆರೋಗ್ಯ – ನಮ್ಮ ಆರೋಗ್ಯ” ಈ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಮಣ್ಣು ಪರೀಕ್ಷೆ ಮಹತ್ವ, ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರ ಸಮರ್ಥ ಬಳಕೆ ಕುರಿತು ಸಕಾಲದಲ್ಲಿ 29,665 ಜಿಲ್ಲೆಯ ರೈತರಿಗೆ ಮಣ್ಣು ಆರೋಗ್ಯ ಚೀಟಿ ನೀಡಿರುವ ಪ್ರಯುಕ್ತ 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ ರಾಜ್ಯದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಕ್ಕೆ ಭಾಜನವಾಗಿರುವುದು ಹೆಮ್ಮೆಯ ವಿಷಯವಾಗಿದೆ.
ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ ಪ್ರಶಸ್ತಿ:
ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರವು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತೋರಿದ ಅತ್ಯುತ್ತಮ ಸಾಧನೆ ಗುರುತಿಸಿ, ಕೃಷಿ ಇಲಾಖೆಯು 2024-25ನೇ ಸಾಲಿನ ರಾಜ್ಯಮಟ್ಟದ ದ್ವಿತೀಯ ಪ್ರಶಸ್ತಿ ನೀಡಿದೆ.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜಿಲ್ಲೆಯ ರೈತಬಾಂಧವರಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳು ಹಾಗೂ ಆರೋಗ್ಯಕರ ಆಹಾರ ಪದ್ದತಿ ಮತ್ತು ಜೀವನ ಶೈಲಿ ಕುರಿತು ಸಾಂಸ್ಥಿಕ, ಹೊರಾಂಗಣ, ಗೂಗಲ್ ಮೀಟ್ ಮೂಲಕ ಅಂತರಜಾಲ ತರಬೇತಿಗಳನ್ನು ವ್ಯಾಪಕ ಪ್ರಚಾರ ನೀಡಿ, ರೈತರು ಸ್ವ ಆಸಕ್ತಿಯಿಂದ ತರಬೇತಿಯನ್ನು ಪಡೆಯಲು ಅನುಕೂಲಕರವಾಗಿದೆ. ಅಲ್ಲದೆ ಯುವ ರೈತರನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಮಾಜಿಕ ಜಾಲತಾಣ ಬಳಸಿಕೊಂಡು ಅವರ ಬೆರಳ ತುದಿಯಲ್ಲಿಯೇ ತಾಂತ್ರಿಕ ಮಾಹಿತಿಯನ್ನು ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನಲ್ ಮೂಲಕ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಆರ್. ರಜನೀಕಾಂತ ಅವರು ನೀಡುತ್ತಿರುವ ವಿನೂತನ ಕಾರ್ಯದಕ್ಷತೆ ಗುರುತಿಸಿ ಕೃಷಿ ಇಲಾಖೆಯ 2025-26 ನೇ ಸಾಲಿನ ರಾಜ್ಯ ಮಟ್ಟದ ಮುಂಗಾರು ಹಂಗಾಮಿನ ಕಾರ್ಯಗಾರದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಅತ್ಯುತ್ತಮ ಸಾಧನೆಗೆ ದ್ವಿತೀಯ ಸ್ಥಾನದ ಪ್ರಶಸ್ತಿ ನೀಡಲಾಗಿದೆ.
2024-25ನೇ ಸಾಲಿನ ವಿವಿಧ ಜಲಾನಯನ ಅಭಿವೃದ್ಧಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿರುವ ಪ್ರಯುಕ್ತ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹಾಗೂ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಅವರು ಹರ್ಷ ವ್ಯಕ್ತಪಡಿಸಿ ಕೃಷಿ ಇಲಾಖೆ ಅಧಿಕಾರಿಗಳನ್ನು ಅಭಿನಂದಿಸಿದ್ದು, ಬರುವ ದಿನಗಳಲ್ಲಿ ಕೃಷಿ ಇಲಾಖೆಯು ಇನ್ನಷ್ಟು ಜವಾಬ್ದಾರಿಯುತವಾಗಿ, ರೈತೋಪಯೋಗಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಮನವಿ ಮಾಡಿದ್ದಾರೆ.