Ad imageAd image

ಮೃತ ಬಾಣಂತಿಯರ ಕುಟುಂಬಗಳಿಗೆ 5 ಲಕ್ಷ ಪರಿಹಾರ

News Desk

ಚಂದ್ರವಳ್ಳಿ ನ್ಯೂಸ್, ಸಂಡೂರು:
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಣೆ ಮಾಡಿದ್ದಾರೆ.

ಸಂಡೂರಿನಲ್ಲಿ ನಡೆದ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ಈಗಾಗಲೇ 2 ಲಕ್ಷ ರೂ. ಪರಿಹಾರ ಘೋಷಣೆ ಆಗಿದೆ. ಜೊತೆಗೆ 3 ಲಕ್ಷ ರೂ. ಕೊಡುತ್ತೇವೆ ಎಂದು ತಿಳಿಸಿದರು.

ಬಳ್ಳಾರಿ ಬಿಮ್ಸ್​ನಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದಾರೆ, ಇದು ದುರದೃಷ್ಟ. ಮೃತ ಬಾಣಂತಿಯರೆಲ್ಲರೂ ಬಡ ಕುಟುಂಬದವರು. ಹೀಗಾಗಿ, ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಹೇಳಿದರು.

ಏನಿದು ಪ್ರಕರಣ-
ಬಿಮ್ಸ್​ಗೆ ದಾಖಲಾಗಿದ್ದ ಒಂಬತ್ತೂ ಗರ್ಭಿಣಿಯರಿಗೆ ನವೆಂಬರ್​ 09 ರಂದೇ ಸಿಸೇರಿಯನ್​ ಮೂಲಕ ಹೆರಿಗೆ ಮಾಡಲಾಗಿತ್ತು. ನಂದಿನಿ, ಲಲಿತಮ್ಮ, ಸುಮಯಾ, ರೋಜಾ, ಮುಸ್ಕಾನ್, ಅಮೃತಾ, ಮಹಾಲಕ್ಷ್ಮೀ, ರಾಜೇಶ್ವರಿ, ಸುಮಲತಾ ಎಂಬುವರಿಗೆ ಹೆರಿಗೆ ಮಾಡಲಾಗಿತ್ತು. ಇವರಲ್ಲಿ ನಂದಿನಿ, ಲಲಿತಮ್ಮ, ರೋಜಾ, ಮುಸ್ಕಾನ್ ಹಾಗೂ ಸುಮಯಾ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರು ಬಾಣಂತಿಯರು ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.

ಹೆರಿಗೆ ಬಳಿಕ ಬಾಣಂತಿಯರಿಗೆ IV ದ್ರಾವಣ ನೀಡಲಾಗಿತ್ತು. ಈ ದ್ರಾವಣ ಹಾಕಿ ಎರಡೇ ಗಂಟೆಯಲ್ಲಿ ಬಾಣಂತಿಯರು ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ಏಳು ಮಂದಿ ಬಾಣಂತಿಯರು ಕಿಡ್ನಿ ಮತ್ತು ಬಹು ಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿದ್ದರು. ಕೂಡಲೇ ಇವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಿಮ್ಸ್​ನಲ್ಲಿ ಪರೀಕ್ಷಿಸಿದಾಗ ಏಳು ಮಂದಿ ಬಾಣಂತಿಯರ ಪೈಕಿ ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿತ್ತು. ಕಿಡ್ನಿ ವೈಫಲ್ಯ ಮತ್ತು ಇಲಿ ಜ್ವರದಿಂದ ಬಳಲುತ್ತಿದ್ದ ಮೃತ ಸುಮಯಾ ನವೆಂಬರ್​ 12ರಿಂದ ಇಲ್ಲಿಯವರೆಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಗುರುವಾರ (ಡಿ.05) ಚಿಕಿತ್ಸೆ ಫಲಿಸದೆ ಸುಮಯಾ ಮೃತಪಟ್ಟಿದ್ದಾರೆ. ಮೃತ ಬಾಣಂತಿಯರೆಲ್ಲರೂ 25 ವರ್ಷದೊಳಗಿನವರು ಎಂಬ ಅಂಶ ತಿಳಿದುಬಂದಿತ್ತು.

 

 

 

 

- Advertisement -  - Advertisement - 
Share This Article
error: Content is protected !!
";