ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾರಾಗೃಹದಲ್ಲಿನ ಸಹ ಕೈದಿಗಳನ್ನ ಭಯೋತ್ಪಾದಕ ಕೃತ್ಯಗಳತ್ತ ಪ್ರೇರೇಪಿಸುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ಪತ್ತೆಗಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಗದು ಬಹುಮಾನ ಘೋಷಿಸಿದೆ.
ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಕುಖ್ಯಾತಿ ಪಡೆದಿರುವ ಲಷ್ಕರ್-ಎ-ತೈಬಾ ಸಂಘಟನೆಯೊಂದಿಗೆ ಸೇರಿದ ಜುನೈದ್ ಅಹಮದ್(33) ಪತ್ತೆಗಾಗಿ 5 ಲಕ್ಷ ನಗದು ಬಹುಮಾನವನ್ನ ಎನ್ಐಎ ಘೋಷಿಸಿದೆ.
ಪ್ರಕರಣದಲ್ಲಿ ಇತ್ತೀಚಿಗೆ ಎರಡನೇ ಪೂರಕ ದೋಷಾರೋಪಣೆ ಸಲ್ಲಿಸಿದ್ದ ಎನ್ಐಎ ಜುನೈದ್ ಅಹಮದ್‌ನ ತಾಯಿ ಅನೀಸ್ ಫಾತಿಮಾ, ಎಎಸ್ಐ ಚಾನ್ ಪಾಷಾ ಎ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವೈದ್ಯನಾಗಿದ್ದ ಡಾ.ನಾಗರಾಜ್ ಎಸ್ ವಿರುದ್ಧ ಐಪಿಸಿ, ಯುಎ(ಪಿ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಕರ್ನಾಟಕ ಕಾರಾಗೃಹ ಕಾಯ್ದೆಯ ವಿವಿಧ ವಿಭಾಗಗಳಡಿಯಲ್ಲಿ ಆರೋಪಿಗಳು ಎಂದು ಉಲ್ಲೇಖಿಸಿತ್ತು.
ಏನಿದು ಪ್ರಕರಣ:
ಬೆಂಗಳೂರಿನಲ್ಲಿ ಉಗ್ರ ಕೃತ್ಯ ನಡೆಸಿ ಭಾರತದ ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ತರುವ ಹುನ್ನಾರವನ್ನ 2023ರಲ್ಲಿ ಬೆಂಗಳೂರು ಪೊಲೀಸರು ಬಯಲಿಗೆಳೆದಿದ್ದರು.
ವಿವಿಧ ಕಾರಣಗಳಿಂದ ಜೈಲು ಸೇರಿದ್ದ ಸ್ಥಳೀಯ ಕೆಲ ಆರೋಪಿಗಳು ಜೈಲು ಶಿಕ್ಷೆ ಅನುಭವಿಸುವಾಗ ಉಗ್ರರ ಸಂಪರ್ಕ ಹೊಂದಿದ್ದರು. ಅವರಿಂದ ಪ್ರೇರೇಪಣೆ ಪಡೆದು ಭಯೋತ್ಪಾದಕ ಕೃತ್ಯ ನಡೆಸಲು ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಡಿಜಿಟಲ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಟಿ.ನಸೀರ್‌ನನ್ನ ನ್ಯಾಯಾಲಯಕ್ಕೆ ಕರೆದೊಯ್ಯುವ ಮಾರ್ಗದಲ್ಲಿ ತಪ್ಪಿಸಿಕೊಳ್ಳಲು ನೆರವಾಗುವಂತೆ ಆರೋಪಿಗಳು ಸಿದ್ಧತೆ ನಡೆಸಿದ್ದರು.
ಬೆಂಗಳೂರು ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣವನ್ನ 2023ರ ಅಕ್ಟೋಬರ್‌ನಲ್ಲಿ ಕೈಗೆತ್ತಿಕೊಂಡಿದ್ದ ಎನ್‌ಐಎ, ಈ ಹಿಂದೆ ಪರಾರಿಯಾಗಿದ್ದ ಜುನೈದ್ ಅಹ್ಮದ್ ಸೇರಿದಂತೆ ಒಂಬತ್ತು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಆರೋಪಿ ಜುನೈದ್‌ನ ತಾಯಿ ಅನೀಸ್ ಫಾತಿಮಾ, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಟಿ. ನಸೀರ್‌ಗೆ ಲಾಜಿಸ್ಟಿಕಲ್ ಬೆಂಬಲ ಮತ್ತು ಹಣವನ್ನು ಒದಗಿಸಿದ್ದಳು.
ಮಗನ ನಿರ್ದೇಶನದ ಮೇರೆಗೆ ಹ್ಯಾಂಡ್ ಗ್ರೆನೇಡ್‌ಗಳು ಮತ್ತು ವಾಕಿ-ಟಾಕಿಗಳನ್ನು ಸಂಗ್ರಹಿಸಿ ಪ್ರಕರಣದ ವಿವಿಧ ಆರೋಪಿಗಳ ನಡುವೆ ಸಂವಹನ ಸುಗಮಗೊಳಿಸಿದ್ದಳು. ಅಲ್ಲದೆ ಪ್ರಮುಖ ಆರೋಪಿ ಸಲ್ಮಾನ್ ಖಾನ್‌ಗೆ ಆಶ್ರಯ ನೀಡುವಲ್ಲಿ ಮತ್ತು ಅವನ ಪ್ರಯಾಣ ದಾಖಲೆಗಳನ್ನು ವ್ಯವಸ್ಥೆ ಮಾಡುವ ಮೂಲಕ ದುಬೈಗೆ ಪರಾರಿಯಾಗಲು ಸಹಾಯ ಮಾಡಿದ್ದಳು ಎಂಬುದು ಎನ್ಐಎ ತನಿಖೆಯಿಂದ ಬಹಿರಂಗವಾಗಿತ್ತು. ನಂತರ ಆಫ್ರಿಕಾದ ರುವಾಂಡಾ ರಿಪಬ್ಲಿಕ್‌ನಲ್ಲಿದ್ದ ಸಲ್ಮಾನ್ ಖಾನ್‌ನನ್ನ ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು.
ಆರೋಪಿ ಜುನೈದ್ ಅಹಮದ್ ಸದ್ಯ ನಾಪತ್ತೆಯಾಗಿದ್ದು ಪತ್ತೆಗಾಗಿ ಬಹುಮಾನ ಘೋಷಿಸಲಾಗಿದೆ. ಸುಳಿವು ನೀಡಿದವರ ಮಾಹಿತಿಯನ್ನ ಗೌಪ್ಯವಾಗಿರಿಸಲಾಗುವುದು ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ.

