ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಾಲ್ಮೀಕಿ ಜಯಂತಿ ದಿನ ಚಿತ್ರದುರ್ಗ ಡಿಡಿಪಿಐ ಕಚೇರಿಯ ಅಧೀಕ್ಷಕ, ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ಒಟ್ಟು 5 ಮಂದಿ ನೌಕರರನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಮತ್ತು ಡಿಡಿಪಿಐ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಸರ್ಕಾರಿ ಕಚೇರಿಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದ ಅಧೀಕ್ಷಕ, ಪ್ರಥಮ ದರ್ಜೆ ನೌಕರರನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಮಾನತುಗೊಳಿಸಿದರೆ, ಡಿಡಿಪಿಐ ಮಂಜುನಾಥ್ ಅವರು ಇತರೆ ಮೂರು ಮಂದಿ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಡಿಡಿಪಿಐ ಕಚೇರಿಯ ಅಧೀಕ್ಷಕ ಸುನೀಲ್, ಪ್ರಥಮ ದರ್ಜೆ ಸಹಾಯಕರಾದ ಗಣೇಶ್, ಸ್ವಾಮಿ, ವಾಹನ ಚಾಲಕ ರವಿ, ಡಿ ದರ್ಜೆ ನೌಕರ ತಿಪ್ಪೇಸ್ವಾಮಿ ಅಮಾನತುಗೊಂಡು ಅಧಿಕಾರಿಗಳಾಗಿದ್ದಾರೆ.

ಏನಿದು ಪ್ರಕರಣ-
ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲಿ ಸ್ನೇಹಿತರು ಸೇರಿಕೊಂಡು ವಾಲ್ಮೀಕಿ ಜಯಂತಿ ದಿನ ಫುಲ್ ಬಾಟಲ್ ಗಳನ್ನು 25 ಲೀಟರ್ ಕ್ಯಾನಿಗೆ ಸುರಿದು ಎಣ್ಣೆ ಪಾರ್ಟಿ ಮಾಡಿದ್ದು ಪೋಟೋ ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಡಿಡಿಪಿಐ ಕಚೇರಿ ನೌಕರನೊಬ್ಬ ಹೊಸ ಕಾರು ಖರೀದಿ ಮಾಡಿದ ಪ್ರಯುಕ್ತ ಕಚೇರಿಯಲ್ಲೇ ಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿದ್ದರು. ಸಿಬ್ಬಂದಿ ಮದ್ಯದ ಪಾರ್ಟಿಗೆ ಸರ್ಕಾರಿ ಕಚೇರಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಡಿಡಿಪಿಐ ಮಂಜುನಾಥ್ ಕಾರು ಚಾಲಕ ಮತ್ತಿತರ ಸಿಬ್ಬಂದಿ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ.
“ವಾಲ್ಮೀಕಿ ಜಯಂತಿ ಮತ್ತು ಜಾತಿ ಗಣತಿ ಇದ್ದುದರಿಂದ ನಾವು ಕಚೇರಿಯಲ್ಲಿ ಇಲ್ಲದ ಸಮಯ ನೋಡಿ ಮದ್ಯವನ್ನು ನೀರಿನ ಕ್ಯಾನ್ ಗೆ ಸೇರಿಸಿರುವ ದೃಶ್ಯಗಳು ವೈರಲ್ ಆಗಿದ್ದು ಜಿಲ್ಲಾಧಿಕಾರಿಗಳು ಮತ್ತು ತಾವು ಸೇರಿ ಒಟ್ಟು 5 ಮಂದಿ ನೌಕರರನ್ನು ಅಮಾನತುಗೊಳಿಸಲಾಗಿದೆ. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲಾಗುತ್ತದೆ”.
ಎಂ.ಆರ್.ಮಂಜುನಾಥ್, ಡಿಡಿಪಿಐ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರದುರ್ಗ.

