ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹುಲಿಗಳ ನಾಡು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳ ಹತ್ಯೆ ನಿಜಕ್ಕೂ ಕಳವಳಕಾರಿ ಘಟನೆಯಾಗಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ತಾಯಿ ಹುಲಿ ಜೊತೆ 3 ಹೆಣ್ಣು ಮತ್ತು ಒಂದು ಗಂಡು ಹುಲಿ ಸಾವಿಗೆ ವಿಷ ಪ್ರಾಶನದ ಶಂಕೆ ವ್ಯಕ್ತವಾಗಿದ್ದು, ಅಪರೂಪದ ಹುಲಿ ಕುಟುಂಬವೇ ಸರ್ವನಾಶವಾಗಿದೆ.
ಹುಲಿ ಸಂರಕ್ಷಿತ ತಾಣದಲ್ಲೇ ಹುಲಿಗಳ ಮಾರಣಹೋಮ ನಡೆದಿರುವುದು ರಾಜ್ಯಕ್ಕೆ ಕಳಂಕ. ಈ ಘೋರ ದುರಂತಕ್ಕೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಮತ್ತು ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ.
ಹುಲಿಗಳ ಸಾವಿಗೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಜರಗಿಸಬೇಕು ಹಾಗೂ ಹುಲಿಗಳ ಸಂರಕ್ಷಣೆ ಹಾಗೂ ಸುರಕ್ಷತೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಜೆಡಿಎಸ್ ಸರ್ಕಾರಕ್ಕೆ ಆಗ್ರಹಿಸಿದೆ.