ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ಡಿ.ಕೆ ಶಿವಕುಮಾರ್ ಮತ್ತು ನನ್ನ ಮಧ್ಯ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಂಪೂರ್ಣ 5 ವರ್ಷ ನಾನೇ ಸಿಎಂ ಆಗಿರ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಐತಿಹಾಸಿಕ ನಂದಿಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಡೆಯಲ್ಲಿದ್ದು, ಇದಕ್ಕೂ ಮುನ್ನ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟದ ಸದಸ್ಯರು ಭೋಗ ನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಸ್ಥಾನದ ಮುಂಭಾಗ ಸಚಿವ ಸಂಪುಟ ಸದಸ್ಯರ ಫೋಟೋ ಶೂಟ್ ಸಹ ನಡೆಯಿತು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ಸೆಪ್ಟೆಂಬರ್ನಲ್ಲಿ ಪತನವಾಗಲಿದೆ ಎಂಬ ಬಿಜೆಪಿಗರ ಮಾತುಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿಯವರು ಶುದ್ಧ ಸುಳ್ಳು ಹೇಳುತ್ತಾರೆ. ನಾನು ಈಗಾಗಲೇ ಮೈಸೂರಿನಲ್ಲಿ ಹೇಳಿದ್ದೇನೆ.
ನಮ್ಮ ಸರ್ಕಾರ ಬಂಡೆಯಂತೆ ದೃಢವಾಗಿ ಇರಲಿದೆ. ನಾವೆಲ್ಲರೂ ಒಗ್ಗಟ್ಟಿನಲ್ಲಿ ಇದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಅವರು ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಅವರ ಸೇವೆ ಏನೆಂಬುದನ್ನು ಅವರೇ ತಿಳಿಸಲಿ. ಮೊದಲು ಬಿಜೆಪಿಯವರು ಹಗಲು ಕನಸು ಕಾಣುವುದನ್ನು ಬಿಡಲಿ ಎಂದು ಸಿಎಂ ಕುಟುಕಿದರು.
ರಾಜ್ಯದ ಪ್ರತೀ ವಿಭಾಗಗಳಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿದ್ದೇವೆ. ಬೆಂಗಳೂರು ವಿಭಾಗದ ಸಚಿವ ಸಂಪುಟ ಸಭೆ ನಡೆಸುತ್ತಿದ್ದೇವೆ. ಈ ಸಭೆ ಕೇವಲ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಸೀಮಿತವಲ್ಲ. ಬೆಂಗಳೂರು ವಿಭಾಗದ ಎಲ್ಲಾ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು ಎಂದು ಸಿಎಂ ತಿಳಿಸಿದರು.
ಒಳಮೀಸಲಾತಿ ಸಮೀಕ್ಷೆ ಕುರಿತು ಮಾತನಾಡಿ, ಪರಿಶಿಷ್ಟ ಸಮುದಾಯಕ್ಕೆ ಸಹಕಾರಿಯಾಗುವಂತೆ 3 ಹಂತಗಳಲ್ಲಿ ಜಾತಿ ಸಮೀಕ್ಷೆ ಮಾಡಲಾಗುತ್ತಿದೆ. ಮನೆಬಾಗಿಲಿಗೆ ಅಧಿಕಾರಿಗಳ ಮೂಲಕ ಇಲ್ಲವೇ ಬೂತ್ ಮಟ್ಟದ ಸಭೆಗಳ ಮೂಲಕ ಅಲ್ಲದೆ ಆನ್ಲೈನ್ನಲ್ಲೂ ಸಮೀಕ್ಷೆ ನಡೆಸುತ್ತಿದ್ದು ಜನರಿಗೆ ಯಾವುದು ಅನುಕೂಲವೋ ಆ ಮಾರ್ಗದಲ್ಲಿ ತಮ್ಮ ಜಾತಿ ನೋಂದಣಿ ಮಾಡಿಸಲಿ ಎಂದು ಸಿಎಂ ಹೇಳಿದರು.

