ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸೂಪರ್ ಸಿಎಂ ಸುರ್ಜೇವಾಲಾ ಅವರು ಶಾಸಕರೊಂದಿಗೆ ನಡೆಸಿದ ಸಭೆ ನಂತರ ಬಹಿರಂಗವಾಗಿರುವ ಅಸಮಾಧಾನಕ್ಕೆ ಬೆಚ್ಚಿ ಬಿದ್ದಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕರ್ನಾಟಕ ಕಾಂಗ್ರೆಸ್ ಶಾಸಕರಿಗೆ ತಲಾ ₹50 ಕೋಟಿ ಅನುದಾನ ನೀಡಲು ಮುಂದಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಸ್ವಾಮಿ ಸಿದ್ದರಾಮಯ್ಯನವರೇ, ಮಾತೆತ್ತಿದರೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿರಲ್ಲ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 50 ಕೋಟಿಯ ಬೆಣ್ಣೆ ಹಚ್ಚಿ, ವಿಪಕ್ಷ ಶಾಸಕರ ಕ್ಷೇತ್ರಗಳಿಗೆ ದೊಡ್ಡ ಸೊನ್ನೆ ಸುತ್ತಿ ಸುಣ್ಣ ಹಚ್ಚಿದ್ದೀರಲ್ಲ, ಇದು ಮಲತಾಯಿ ಧೋರಣೆ ಅಲ್ಲವೇ?
ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿರುವವರು ಮಾತ್ರ ಕರ್ನಾಟಕದ ಪ್ರಜೆಗಳಾ? ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿರುವ ಕ್ಷೇತ್ರಗಳಿಗೆ ಮಾತ್ರ ತಾವು ಮುಖ್ಯಮಂತ್ರಿನಾ? ಕನ್ನಡಿಗರಿಗೆ ದ್ರೋಹ ಬಗೆಯುತ್ತಿರುವ ಲಜ್ಜೆಗೆಟ್ಟ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.