ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತವು ಸಾಂಪ್ರದಾಯಿಕ ಇಂಧನ ಮೂಲಗಳಿಗೆ ಪರ್ಯಾಯವಾಗಿ ಸೌರಶಕ್ತಿಯತ್ತ ಮುಖ ಮಾಡಿರುವ ಬೆನ್ನಲ್ಲೇ, ಈಗ ಅಡುಗೆ ಅನಿಲ (LPG) ಬಳಕೆಯನ್ನು ಕಡಿಮೆ ಮಾಡಿ ಪೈಪ್ಡ್ ನೈಸರ್ಗಿಕ ಅನಿಲ (PNG) ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಲಹೆಯಂತೆ ದೇಶಾದ್ಯಂತ 50 ಲಕ್ಷ ಹೊಸ PNG ಸಂಪರ್ಕ ಕಲ್ಪಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ “PNG ಸೇವೆಗಳ ವಿಸ್ತರಣೆ ಮತ್ತು ಅಗತ್ಯ ಸೇವೆ ನಿರ್ವಹಣೆ” ಕುರಿತ ಉನ್ನತ ಮಟ್ಟದ ದುಂಡು ಮೇಜಿನ ಸಭೆಯಲ್ಲಿ ಈ ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು.
ಆದ್ಯತೆಯ ಕ್ಷೇತ್ರಗಳು:
ಈಗಾಗಲೇ ಮೂಲಸೌಕರ್ಯ ಲಭ್ಯವಿರುವ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಪ್ರಥಮ ಆದ್ಯತೆಯ ಮೇಲೆ PNG ಸಂಪರ್ಕ ನೀಡಲಾಗುವುದು.
ಇಲಾಖೆಗಳ ಸಮನ್ವಯ:
ಯೋಜನೆ ಸುಗಮವಾಗಿ ಜಾರಿಯಾಗಲು ನಗರಾಭಿವೃದ್ಧಿ ಇಲಾಖೆ, ಪುರಸಭೆಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳ ನಡುವೆ ಹೆಚ್ಚಿನ ಸಮನ್ವಯಕ್ಕೆ ಸಚಿವ ಪ್ರಲ್ಹಾದ ಜೋಶಿ ಸೂಚಿಸಿದ್ದಾರೆ.
ನೋಡಲ್ ಅಧಿಕಾರಿಗಳ ನೇಮಕ: ಯೋಜನೆಗೆ ಎದುರಾಗುವ ತಾಂತ್ರಿಕ ಸವಾಲುಗಳನ್ನು ಎದುರಿಸಲು ಮತ್ತು ಅನುಮೋದನೆ ಪ್ರಕ್ರಿಯೆಯನ್ನು ವೇಗಗೊಳಿಸಲು ರಾಜ್ಯ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲು ಒಮ್ಮತ ವ್ಯಕ್ತವಾಗಿದೆ.
ವಿಶೇಷ ಕಾರ್ಯಪಡೆ: ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸ್ಥಳೀಯವಾಗಿ ಕಾರ್ಯಪಡೆ (Task Force) ರಚಿಸಿ, ನಿಯಮಿತ ಮೇಲ್ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.
ಅಕ್ರಮ ದಾಸ್ತಾನು ವಿರುದ್ಧ ಎಚ್ಚರಿಕೆ-
ಜಾಗತಿಕ ಯುದ್ಧದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆಯಾಗದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಿದೆ. ಗ್ಯಾಸ್ ಸೇರಿದಂತೆ ಯಾವುದೇ ಅಗತ್ಯ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಮಾಡುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ದಿನನಿತ್ಯದ ಬೆಲೆ ಮತ್ತು ಲಭ್ಯತೆಯ ಮೇಲೆ ನಿಗಾ ಇಡಲು ಪುರಸಭೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ.
ಈ ಮಹತ್ವದ ಸಭೆಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್, ವಿವಿಧ ರಾಜ್ಯಗಳ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ GAIL ಮತ್ತು ಇಂಡಿಯನ್ ಆಯಿಲ್ ಸಂಸ್ಥೆಯ ಮುಖ್ಯಸ್ಥರು ಭಾಗವಹಿಸಿದ್ದರು.
ಮುಖ್ಯ ಉದ್ದೇಶ: ಇಂಧನ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ಗ್ರಾಹಕರಿಗೆ ಸುಲಭ ಹಾಗೂ ಸುರಕ್ಷಿತ ಇಂಧನ ವ್ಯವಸ್ಥೆಯನ್ನು ತಲುಪಿಸುವುದು ಈ ಯೋಜನೆಯ ಮೂಲ ಆಶಯವಾಗಿದೆ.

