ಭಾರೀ ಮಳೆ, ಅಪಾರ ಹಾನಿ, ತುರ್ತಾಗಿ ಐದು ಸಾವಿರ ಕೋಟಿ ಪರಿಹಾರ ನೀಡಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಹಿಂಗಾರು ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಠಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ಅಪಾರ ಹಾನಿಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಸಭೆ ಕರೆದು
5,000 ಕೋಟಿ ರೂ. ಬಿಡುಗಡೆ ಮಾಡಲಿ. ಜೊತೆಗೆ ಬೆಂಗಳೂರಿನಲ್ಲಿ ಪರಿಹಾರ ಕಾರ್ಯಾಚರಣೆಗೆ 1,000 ಕೋಟಿ ರೂ. ಬಿಡುಗಡೆ ಮಾಡಲಿ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಮುಖ್ಯಮಂತ್ರಿಗಳಲ್ಲಿ ಆಗ್ರಹ ಮಾಡಿದ್ದಾರೆ.

ಬೆಂಗಳೂರಿನ ಸಿಲ್ಕ್‌ಬೋರ್ಡ್‌ವೃತ್ತದ ಬಳಿ ಮಳೆ ಹಾನಿ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನಲ್ಲಿ ಕಾಫಿ ಉದುರುತ್ತಿದೆ, ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ, ಬಯಲು ಸೀಮೆಯಲ್ಲಿ ಬೆಳೆದಿರುವ ಈರುಳ್ಳಿ ಮಳೆಯಿಂದ ಕೊಚ್ಚಿ ಹೋಗಿರುವುದು ಒಂದು ಕಡೆಯಾದರೆ ಸತತ ಮಳೆಯಿಂದಾಗಿ ಜಮೀನಿನಲ್ಲೇ ಈರುಳ್ಳಿ ಕೊಳೆಯುತ್ತಿದೆ. ಇನ್ನೂ ಮಲೆಯಾಶ್ರಿತ ಶೇಂಗಾ ಬೆಳೆ ಕೂಡ ಕೊಳೆಯುತ್ತಿದೆ. ಇದರಿಂದಾಗಿ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂಭ ಕರ್ಣನಂತೆ ನಿದ್ದೆ ಮಾಡುವುದನ್ನು ಬಿಟ್ಟು ತುರ್ತಾಗಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅನಾಹುತವಾಗಿರುವ ಪ್ರದೇಶಗಳಲ್ಲಿ ಪರಿಶೀಲನೆ ಮಾಡಿ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರ ಇದುವರೆಗೂ ಅತಿವೃಷ್ಠಿ, ಪ್ರವಾಹ ಕುರಿತು ಸಭೆ ನಡೆಸಿಲ್ಲ, ಕೂಡಲೇ ಸಭೆ ಕರೆದು ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಜನರು 16 ತಿಂಗಳ ಕಾಂಗ್ರೆಸ್‌ಸರ್ಕಾರದ ಪಾಪದ ಫಲ ಅನುಭವಿಸಬೇಕಾಗಿದೆ. ರಾಜ ಕಾಲುವೆಯ ಹೂಳು ತೆಗೆದು ಸ್ವಚ್ಛ ಮಾಡುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಇದರಿಂದಾಗಿ ತೇಲುತ್ತಿರುವ ಬೆಂಗಳೂರು ಎಂಬ ಅಪಖ್ಯಾತಿ ನಗರಕ್ಕೆ ಬಂದಿದೆ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು ಒಂದೂವರೆ ವರ್ಷದಲ್ಲಿ ಎಷ್ಟು ಒತ್ತುವರಿ ತೆರವು ಮಾಡಿದ್ದಾರೆ, ಎಷ್ಟು ಹೂಳು ತೆಗೆಸಿದ್ದಾರೆ ಎಂದು ಶ್ವೇತಪತ್ರ ಹೊರಡಿಸಲಿ. ಬಿಜೆಪಿ ಸರ್ಕಾರವಿದ್ದಾಗ ಮಳೆಗಾಲಕ್ಕೆ ಮುನ್ನ ಎಲ್ಲ ಸಿದ್ಧತೆ ಮಾಡಲಾಗುತ್ತಿತ್ತು ಎಂದು ತಿಳಿಸಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ರಸ್ತೆಗಳು ಸಂಪೂರ್ಣ ಹಾಳಾಗಿದೆ. ಖಜಾನೆ ಖಾಲಿಯಾಗಿದೆ ಎಂದು ನಮಗೂ ಗೊತ್ತಿದೆ. ಆದ್ದರಿಂದ ಕನಿಷ್ಠ 500 ಕೋಟಿ ರೂ. ಹಣವಾದರೂ ಬಿಡುಗಡೆ ಮಾಡಲಿ, ಇಲ್ಲವೆಂದರೆ ಗುತ್ತಿಗೆದಾರರು ಮುಂದೆ ಬರುವುದಿಲ್ಲ. ಇದರ ಜೊತೆಗೆ ಕಸದ ಸಮಸ್ಯೆ ಸೃಷ್ಟಿಯಾಗಿದೆ.

ಮಾನ್ಯತಾ ಟೆಕ್ ಪಾರ್ಕ್ ಈಗ ಮುಳುಗಡೆ ಪಾರ್ಕ್ ಆಗಿಬಿಟ್ಟಿದೆ. ಸಿಲ್ಕ್ ಬೋರ್ಡ್ ನಲ್ಲಿ ಪ್ರತಿ ದಿನವೂ ಪ್ರವಾಹ ಉಂಟಾಗುತ್ತಿದೆ. ಪ್ರತಿ 15 ದಿನಕ್ಕೊಮ್ಮೆ ಪರಿಶೀಲನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದರು.

ಆದರೆ 6 ತಿಂಗಳಾದರೂ ಏನು ಮಾಡಿಲ್ಲ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾತ್ರಿ ವೇಳೆಯಲ್ಲಿ ಪರಿಶೀಲನೆ ನಡೆಸಿದ್ದು, ಅವರಿಗೆ ಯಾವುದೇ ಸಮಸ್ಯೆ ಕಂಡಿಲ್ಲ ಎಂದು ಗಂಭೀರ ಆರೋಪ ಮಾಡಿದರು.

- Advertisement -  - Advertisement -  - Advertisement - 
Share This Article
error: Content is protected !!
";