ಡಾಟ್ಸ್ ಚಿಕಿತ್ಸಾ ವಿಧಾನದಿಂದ 52292 ಕ್ಷಯ ರೋಗಿಗಳು ಗುಣಮುಖ-ರೂಪಕಲಾ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಕ್ಷಯರೋಗವು ಅನಾದಿ ಕಾಲದಿಂದಲೂ ಮನುಷ್ಯ ಸಂತತಿಯನ್ನು ಬಾಧಿಸುತ್ತಿದ್ದುಈ ರೋಗದಿಂದ ಅಗಾಧ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸುತ್ತಿದ್ದವು. ಹಲವಾರು ಸಂಶೋಧನೆಗಳನ್ನು ಕೈಗೊಂಡ ನಂತರ ೧೮೮೨ ಮಾರ್ಚ್ ೨೪ರಂದು ರಾಬರ್ಟ್‌ಕಾಕ್ ಎಂಬ ಜರ್ಮನ್ ವಿಜ್ಞಾನಿ ಕ್ಷಯರೋಗಕ್ಕೆ ಕಾರಣವಾದ ಮೈಕೋಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲೋಸಿಸ್ ಎಂಬ ರೋಗಾಣುವನ್ನು ಪತ್ತೆ ಹಚ್ಚಿದನು.  ಈತನ ಗೌರವಾರ್ಥ ಪ್ರತಿ ವರ್ಷ ಮಾ.೨೪ರಂದು ಜಗತ್ತಿನಾದ್ಯಂತ ವಿಶ್ವ ಕ್ಷಯರೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. 

ನಮ್ಮ ದೇಶವು  ಜಗತ್ತಿನ ಶೇ. ೨೦ರಷ್ಟು ಕ್ಷಯರೋಗಿಗಳನ್ನು ಹೊಂದಿದ್ದು, ಪ್ರತಿ ೩ ನಿಮಿಷಕ್ಕೆ ಇಬ್ಬರು ಕ್ಷಯರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಅಂದರೆ ಕ್ಷಯರೋಗ ಒಂದರಿಂದಲೇ ದೇಶಾದ್ಯಂತ ೫೭೬ ಜನರು ಒಂದು ದಿನದಲ್ಲಿ ಸಾವನ್ನಪ್ಪುತ್ತಿದ್ದಾರೆ.  ಒಂದೇ ದಿನದಲ್ಲಿ ೫೦೦೦ ಜನರಿಗೆ ಕ್ಷಯರೋಗ ತಗಲುತ್ತಿದೆ. ವರ್ಷಕ್ಕೆ ೧ ಲಕ್ಷ ಜನಸಂಖ್ಯೆಯಲ್ಲಿ ೧೧೨ ಜನ ಹೊಸದಾಗಿ ಕ್ಷಯರೋಗಿಗಳಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ರೋಗವನ್ನು ನಿಯಂತ್ರಣಕ್ಕೆ ತರಲು ವಿಶ್ವ ಆರೋಗ್ಯ ಸಂಸ್ಥೆಯು ನೇರ ನಿಗಾವಣಾ (ಡಾಟ್ಸ್) ಚಿಕಿತ್ಸಾ ವಿಧಾನವನ್ನು ಅನುಸರಿಸಬೇಕೆಂದು ನಿರ್ದೇಶನ ನೀಡಿದ್ದು, ಈ ಚಿಕಿತ್ಸಾ ವಿಧಾನದಿಂದ ಕ್ಷಯರೋಗವನ್ನು ಶೀಘ್ರ ಗುಣಮುಖಗೊಳಿಸಬಹುದಾಗಿದೆ.

ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ (ಎನ್.ಟಿ.ಇ.ಪಿ.)ದ ಮೂಲಕ ೨೦೨೫ನೇ ಇಸವಿಯೊಳಗೆ ಕ್ಷಯರೋಗವನ್ನು ಒಂದು ಸಾಮಾಜಿಕ ಸಮಸ್ಯೆಯಲ್ಲದ ಸ್ಥಿತಿಗೆ ನಿಯಂತ್ರಿಸುವ ಅಗತ್ಯವಿದೆ.   ಕ್ಷಯದಿಂದ ಸಾವು ಸಂಭವಿಸುತ್ತಿರುವ ಪ್ರಮಾಣವನ್ನು ಶೇ೧೦೦ಕ್ಕೆ ಇಳಿಸುವ ತುರ್ತು ಅಗತ್ಯ ನಮ್ಮೆಲ್ಲರ ಮುಂದಿದೆ.  ಇದರ ಅಂಗವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಹೌದು! ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು (ಬದ್ಧತೆ, ಹೂಡಿಕೆ, ವಿತರಣೆ) ಎಂಬ ೨೦೨೫ರ ಘೋಷಣೆಯೊಂದಿಗೆ ಕ್ಷಯರೋಗ ನಿರ್ಮೂಲನೆಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯ ಬಗ್ಗೆ ಎಚ್ಚರಿಸಿದೆ.

ಡಾಟ್ಸ್ ವಿಧಾನ ಜಾರಿ:
ಕ್ಷಯರೋಗ ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ೧೯೯೨ರಲ್ಲಿ ಡಾಟ್ಸ್(ನೇರ ನಿಗಾವಣೆ)ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ದೇಶದಲ್ಲಿ ಹಂತ ಹಂತವಾಗಿ ಡಾಟ್ಸ್ ವಿಧಾನವನ್ನು ಜಾರಿಗೆ ತರಲಾಗಿದ್ದು
, ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ೨೦೦೩ ರಿಂದ ಈ ವಿಧಾನವನ್ನು ಜಾರಿಗೆ ತರಲಾಗಿದೆ.  ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ತುಮಕೂರು ಜಿಲ್ಲೆಯಲ್ಲಿ ಡಾಟ್ಸ್ ವಿಧಾನ ಜಾರಿಗೆ ಬಂದಾಗಿನಿಂದ ಡಿಸೆಂಬರ್-೨೦೨೪ರ ಅಂತ್ಯದವರೆಗೆ ೬೪೫೬೨ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಲಾಗಿದೆ. ಅವರಲ್ಲಿ ೫೨೨೯೨ ರೋಗಿಗಳು ಡಾಟ್ಸ್ ಚಿಕಿತ್ಸೆ ಪಡೆದು ಕ್ಷಯರೋಗದಿಂದ ಗುಣಮುಖರಾಗಿರುತ್ತಾರೆ. ಹಾಲಿ ೧೪೭೧ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 

೨೦೨೪ನೇ ಸಾಲಿನಲ್ಲಿ ೨೮೫೬ ಕ್ಷಯರೋಗಿಗಳನ್ನು ಪತ್ತೆ ಹಚ್ಚಿ ಡಾಟ್ಸ್ಚಿಕಿತ್ಸೆಗೆ ಒಳಪಡಿಸಲಾಗಿದೆ. ಪ್ರಸ್ತುತ ಜಿಲ್ಲೆಯಾದ್ಯಂತ ಸುಮಾರು ೧೪೭೧ ಕ್ಷಯರೋಗಿಗಳು ಡಾಟ್ಸ್ಚಿಕಿತ್ಸೆಯನ್ನು ಪಡೆಯುತ್ತಿರುತ್ತಾರೆ. 

ಶೀಘ್ರ ರೋಗ ಪತ್ತೆ, ತ್ವರಿತ ಡಾಟ್ಸ್ ಚಿಕಿತ್ಸೆಯಿಂದ ರೋಗ ಗುಣಮುಖ:
ಕ್ಷಯರೋಗವನ್ನು ಬೇಗ ಪತ್ತೆ ಹಚ್ಚಿದಲ್ಲಿ ಸಾವು-ನೋವುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ.  ಎರಡು ವಾರಕ್ಕೂ ಹೆಚ್ಚಿನ ಅವಧಿಯವರೆಗೆ ಕೆಮ್ಮು ಇರುವ ವ್ಯಕ್ತಿಯನ್ನು ಶಂಕಿತ ರೋಗಿ ಎಂದು ಪರಿಗಣಿಸಿ ೨ ಬಾರಿ ಕಫ ಪರೀಕ್ಷೆಗೆ ಒಳಪಡಿಸಲಾಗುವುದು.  ಕಫ ಪರೀಕ್ಷೆಯ ಮೂಲಕ ರೋಗ ಪತ್ತೆಯಾಗದಿದ್ದಲ್ಲಿ ೧೦ ದಿನಗಳ ಸಾಮಾನ್ಯ ಆಂಟಿಬಯೋಟಿಕ್ಚಿಕಿತ್ಸೆಗೊಳಪಡಿಸಲಾಗುವುದು.  ನಂತರವೂ ಕೆಮ್ಮಿನ ಲಕ್ಷಣಗಳು ಹಾಗೇ ಮುಂದುವರೆದರೆ ಮರು ಕಫ ಪರೀಕ್ಷೆ ಮಾಡಲಾಗುವುದು.  ಆಗಲೂ ಕ್ರಿಮಿ ಕಂಡು ಬರದಿದ್ದಲ್ಲಿ ಕ್ಷ-ಕಿರಣ ಪರೀಕ್ಷೆಗೊಳಪಡಿಸಲಾಗುವುದು.

ರೋಗ ಪತ್ತೆಯಾದ ಕೂಡಲೇ ವ್ಯಕ್ತಿಯನ್ನು ಡಾಟ್ಸ್ ಚಿಕಿತ್ಸೆಗೆ ಒಳಪಡಿಸುವುದರಿಂದ ವ್ಯಕ್ತಿಯಲ್ಲಿ ರೋಗ ಉಲ್ಬಣಾವಸ್ಥೆಗೆ ತಿರುಗುವುದನ್ನು ತಪ್ಪಿಸಬಹುದಲ್ಲದೆ, ಇತರರಿಗೆ ಸೋಂಕು ಹರಡದಂತೆ ತಡೆಯಬಹುದು.  ಇದುವರೆಗಿನ ಎಲ್ಲ ಚಿಕಿತ್ಸಾ ವಿಧಾನಗಳಿಗೆ ಹೋಲಿಸಿದರೆ ಡಾಟ್ಸ್ಚಿಕಿತ್ಸಾ ವಿಧಾನ ಅತ್ಯುತ್ತಮ ವಿಧಾನ.

ಡಾಟ್ಸ್ ಚಿಕಿತ್ಸಾ ಕ್ರಮಗಳು:
ನೇರ ನಿಗಾವಣೆ(
DOTS) ಚಿಕಿತ್ಸಾ ಕ್ರಮದಲ್ಲಿ ಎಲ್ಲಾ ರೋಗಿಗಳಿಗೂ ಪ್ರತಿ ದಿನ ನೇರನಿಗಾವಣೆಗಾರರ ಸಮ್ಮುಖದಲ್ಲಿಯೇ ಔಷಧಿ ಸೇವನೆ ಮೂಲಕ ೬ ರಿಂದ ೮ ತಿಂಗಳ ಕಾಲ ಔಷಧೋಪಚಾರ ನೀಡಲಾಗುತ್ತದೆ.    ಪ್ರಸ್ತುತ ಜಿಲ್ಲೆಯಲ್ಲಿ ಕ್ಷಯರೋಗಿಗಳು ನೇರ ನಿಗಾವಣೆಗಾರರ ಮೂಲಕ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಹೆಚ್‌ಐವಿ ಸೋಂಕಿತ ರೋಗಿಗಳಲ್ಲಿ ಕ್ಷಯ ತಗಲುವ ಸಾಧ್ಯತೆ ಇತರರಿಗಿಂತ ೫ ಪಟ್ಟು ಹೆಚ್ಚಾಗಿರುತ್ತದೆ. ಎಲ್ಲಾ ಕ್ಷಯರೋಗಿಗಳು ನೇರನಿಗಾವಣೆ ಚಿಕಿತ್ಸೆಗೆ ಮುನ್ನ ಅಥವಾ ನಂತರ ಆದಷ್ಟು ಬೇಗನೆ ಕಡ್ಡಾಯವಾಗಿ ಹೆಚ್‌ಐವಿ ರಕ್ತ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಪರೀಕ್ಷೆಯ ನಂತರ ಹೆಚ್‌ಐವಿ ಸೋಂಕಿತರಿಗೆ ಕೋಟ್ರೈಮಾಕ್ಸಜೋಲ್ ಮಾತ್ರೆ ಹಾಗೂ ಎಆರ್‌ಟಿ ಚಿಕಿತ್ಸೆಯ ಲಭ್ಯವಿರುತ್ತದೆ.  ಕ್ಷಯರೋಗದಿಂದ ನರಳುತ್ತಿರುವ ಹೆಚ್‌ಐವಿ ಸೋಂಕಿತರಿಗೆ ನೇರ ನಿಗಾವಣೆ ಚಿಕಿತ್ಸೆ ನೀಡಿದಲ್ಲಿ ರೋಗದಿಂದ ಗುಣ ಮುಖರಾಗುವ ಜೊತೆಗೆ ಇವರ ಜೀವಿತಾವಧಿಯೂ ಹೆಚ್ಚಾಗುತ್ತದೆ.

ಟಿ.ಬಿ-ಹೆಚ್‌ಐವಿ ಕಾರ್ಯಕ್ರಮ:
ಜಿಲ್ಲೆಯಲ್ಲಿ   ೨೦೦೮ರ ಅಕ್ಟೋಬರ್ ಮಾಹೆಯಿಂದ ಟಿ.ಬಿ.-ಹೆಚ್‌ಐವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು
, ಈ ಕಾರ್ಯಕ್ರಮದಂತೆ ಎಲ್ಲಾ ಕ್ಷಯ ರೋಗಿಗಳನ್ನು ಹೆಚ್‌ಐವಿ ಆಪ್ತ ಸಮಾಲೋಚನೆಗೆ ನಿರ್ದೇಶಿಸಲಾಗುತ್ತಿದೆ. ಟಿ.ಬಿ-ಹೆಚ್‌ಐವಿ ಕಾರ್ಯಕ್ರಮದಡಿ ಪ್ರಸ್ತುತ ೨೦೨೪ರಲ್ಲಿ ೨೮೫೬ ಕ್ಷಯರೋಗಿಗಳಲ್ಲಿ ೨೮೨೯ ರೋಗಿಗಳಿಗೆ ಅಂದರೆ ಶೇ.೯೯ರಷ್ಟು ಹೆಚ್‌ಐವಿ ಪರೀಕ್ಷೆಗೊಳಪಡಿಸಲಾಗಿದೆ. ಇದರಿಂದ ಶೇ.೧೦ರಷ್ಟು ಅಂದರೆ ೨೪೪ ಕ್ಷಯರೋಗಿಗಳು ಎರಡೂ ರೋಗಗಳಿಂದಲೂ ಬಳಲುತ್ತಿರುವುದು ಖಾತರಿಯಾಗಿದೆ.

ಪ್ರೋಗ್ರಾಮೆಟಿಕ್ ಮ್ಯಾನೇಜ್‌ಮೆಂಟ್ ಆಫ್ ಡ್ರಗ್ ರೆಸಿಸ್ಟೆಂಟ್ ಟಿ.ಬಿ:
ಜಿಲ್ಲೆಯಲ್ಲಿ ಪಿಎಂಡಿಟಿ ಕಾರ್ಯಕ್ರಮವನ್ನು ಮೇ ೨೦೧೧ ರಿಂದ ಪ್ರಾರಂಭಿಸಲಾಗಿದ್ದು
, ಈ ಕಾರ್ಯಕ್ರಮದಡಿ ೨೦೨೪ನೇ ಸಾಲಿನಲ್ಲಿ   ೧೮೯೦ ಕಫದಲ್ಲಿ ಕ್ಷಯರೋಗ ಪತ್ತೆಯಾಗಿದ್ದು, ಈ ಪೈಕಿ ೧೭೮೦ ಕ್ಷಯರೋಗಿಗಳ ಕಫವನ್ನು  ಸಿಬಿಬ್ಯಾಟ್ ಹಾಗೂ ಕಲ್ಚರ್ ಮತ್ತು ಸೆನ್ಸಿಟಿವಿಟಿ ಪರೀಕ್ಷೆಗೆ ಒಳಪಡಿಸಲಾಗಿದ್ದು. ಅದರಲ್ಲಿ ೮೬ ರೋಗಿಗಳು ಡಿ.ಆರ್.ಟಿ.ಬಿ.(ಡ್ರಗ್ ರೆಸಿಸ್ಟೆಂಟ್ ಟಿಬಿ) ಚಿಕಿತ್ಸೆಯನ್ನು ಪ್ರಾರಂಭಿಸಿರುತ್ತಾರೆ.

ಖಾಸಗಿ ವೈದ್ಯರು ಮತ್ತು ಸ್ವಯಂಸೇವಾ ಸಂಸ್ಥೆಗಳ ಪಾತ್ರ:
ಕ್ಷಯರೋಗವನ್ನು ನಿರ್ಮೂಲನೆಗೊಳಿಸಲು ಸರ್ಕಾರಿ ಸಂಸ್ಥೆಯ ಜೊತೆಗೆ  ಖಾಸಗಿ ವೈದ್ಯರು ಮತ್ತು ಸ್ವಯಂ ಸೇವಾ ಸಂಸ್ಥೆಗಳು   ಸಕ್ರಿಯವಾಗಿ ಪಾಲ್ಗೊಂಡು ತಮ್ಮಲ್ಲಿ ಬರುವ ಶ್ವಾಸಕೋಶದ ಕ್ಷಯ ರೋಗಿಗಳು ಮತ್ತು ಶ್ವಾಸಕೋಶೇತರ ಕ್ಷಯರೋಗಿಗಳಿಗೆ ಉಚಿತವಾಗಿ ದೊರೆಯುವ ಡಾಟ್ಸ್ ಚಿಕಿತ್ಸೆಯನ್ನು ಅಳವಡಿಸುವುದರ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ. ಪ್ರಸ್ತುತ ೨೦೨೪ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಖಾಸಗಿ ವೈದ್ಯರು ಕಫ ಪರೀಕ್ಷೆಗೆ ಕಳುಹಿಸಿರುವ ಶಂಕಿತ ರೋಗಿಗಳಲ್ಲಿ ೭೮೮ ಕ್ಷಯ ರೋಗಿಗಳು ಪತ್ತೆಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯ ಪಾವಗಡದ ಶ್ರೀ ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರ, ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾ ವಿದ್ಯಾಲಯ, ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಸಿದ್ದಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಭಾರತೀಯ ವೈದ್ಯಕೀಯ ಸಂಘ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಗಳು ಎನ್.ಟಿ.ಇ.ಪಿ. ಕಾರ್ಯಕ್ರಮದಡಿ ಮಹತ್ತರವಾದ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮೋಹನ್‌ದಾಸ್ ಆರ್.ವಿ. ತಿಳಿಸಿದ್ದಾರೆ.
ಲೇಖನ: ಆರ್. ರೂಪಕಲಾ,ವಾರ್ತಾ ಇಲಾಖೆ, ತುಮಕೂರು.

 

Share This Article
error: Content is protected !!
";