ಚಂದ್ರವಳ್ಳಿ ನ್ಯೂಸ್, ವಿಜಯಪುರ :
ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಕಳೆದ ಮೇ 24 ರಂದು ರಾತ್ರಿ ಬ್ಯಾಂಕ್ನಲ್ಲಿದ್ದ 58 ಕೆಜಿ 975 ಗ್ರಾಂ ಚಿನ್ನಾಭರಣ ಹಾಗೂ 5.20 ಲಕ್ಷ ನಗದು ಕದ್ದ ಆರೋಪಿಗಳು ಪರಾರಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಈ ಕುರಿತು ಮಾತನಾಡಿ, ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಮ್ಯಾನೇಜರ್ ಠಾಣೆಗೆ ಬಂದು ಚಿನ್ನಾಭರಪಣ, ನಗದು ಕಳ್ಳತನ ಆಗಿರುವ ಬಗ್ಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. 23-5-2025ರಂದು ಬ್ಯಾಂಕ್ ಲಾಕ್ ಮಾಡಿ ಸಿಬ್ಬಂದಿ ಹೋಗಿದ್ದರು. 25 ನೇ ತಾರೀಖು ಅವರ ಸಿಬ್ಬಂದಿ ಸ್ವಚ್ಛತೆಗೆ ಎಂದು ಬಂದಾಗ ಶಟರ್ಸ್ ಲಾಕ್ ಕಟ್ ಆಗಿರುವುದು ಗಮನಕ್ಕೆ ಬಂದಿದೆ. ನಂತರ ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ. ನಂತರ ಇದನ್ನು ಪರಿಶೀಲಿಸಿದಾಗ ಬ್ಯಾಂಕ್ಗೆ ಕಳ್ಳರು ಬಂದು ಕದ್ದಿರುವುದು ಗಮನಕ್ಕೆ ಬಂದಿದೆ. ಇದೀಗ ಬ್ಯಾಂಕ್ ಉನ್ನತ ಮಟ್ಟದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ಮಾಡುತ್ತಿದ್ದಾರೆ.
ಸಾರ್ವಜನಿಕರು ಲೋನ್ಗಾಗಿ ಬಂಗಾರವನ್ನು ಅಡವಿಟ್ಟು ದುಡ್ಡನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಕರಣದ ತನಿಖೆಗೆ 8 ತಂಡಗಳನ್ನು ರಚಿಸಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತರಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ಮನಗೂಳಿ ನಿವಾಸಿ ಶಿವನಗೊಂಡ ಮಾತನಾಡಿ, ಬ್ಯಾಂಕ್ನವರು ಮುನ್ನೆಚ್ಚರಿಕೆ ವಹಿಸಬೇಕಿತ್ತು. ಬ್ಯಾಂಕ್ನಲ್ಲಿ ಚಿನ್ನ ಹಾಗೂ ಹಣ ಕಳ್ಳತನವಾಗಿದ್ದು ಆತಂಕದಲ್ಲಿದ್ದಾರೆ. ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಿ. ಆದಷ್ಟು ಬೇಗ ಇದಕ್ಕೆ ಪರಿಹಾರ ಕಲ್ಪಿಸಿಕೊಡಬೇಕು ಎಂದು ವಿನಂತಿಸಿದ್ದಾರೆ.