ನಿಂತಿದ್ದ ಲಾರಿಗೆ ಕಾರು ಡಿಕ್ಕಿ, 6 ಮಂದಿ ಸಾವು

News Desk

ಚಂದ್ರವಳ್ಳಿ ನ್ಯೂಸ್, ಹಾವೇರಿ:
ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಕಾರೊಂದು ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದ ಪರಿಣಾಮ
6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಭೀಕರ ಅಪಘಾತದಲ್ಲಿ ಮೃತರಾದ ನಾಲ್ವರು ರಾಣೆಬೆನ್ನೂರಿನ ಸಿದ್ದೇಶ್ವರ ನಗರದ ನಿವಾಸಿಗಳಾಗಿದ್ದು, ಇಬ್ಬರು ಹರಿಹರ ಹಾಗೂ ಮತ್ತಿಬ್ಬರು ಗೋವಾದವರಾಗಿದ್ದಾರೆ ಎನ್ನಲಾಗಿದೆ.
ಮೃತರನ್ನು ಫರಾನ್ (
27), ಉಮ್ಮಿಶಿಪಾ (16), ಅಲಿಷಾ (20), ಫೂಲಖಾನ್ (17) ಹಾಗೂ ಫಿರೋಜ್​ (42) ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಶವದ ಗುರುತು ಪತ್ತೆಯಾಗಬೇಕಿದೆ.

ತಷ್ಕಿನ್ ಹಾಗೂ ಮೆಹಕ್ ಎಂಬ ಇಬ್ಬರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಾಲಾ-ಕಾಲೇಜ್ ಗಳಿಗೆ ನೀಡಲಾಗಿರುವ ರಜೆ ಹಿನ್ನೆಲೆಯಲ್ಲಿ ಕುಟುಂಬಸ್ಥರೆಲ್ಲ ಮಕ್ಕಳ ಜೊತೆ ಸೇರಿಕೊಂಡು ಅಗಡಿ ತೋಟದ ಪಾರ್ಕ್​​ಗೆ ತೆರಳುತ್ತಿದ್ದರು. ಬಳಿಕ ಅಲ್ಲಿಂದ ಗೋವಾಕ್ಕೆ ಹೋಗುವ ಪ್ಲಾನ್ ಮಾಡಿದ್ದರು. ನಿನ್ನೆ ರಾಣೆಬೆನ್ನೂರಿನ ಫಿರೋಜ್ ಮನೆಯಲ್ಲಿ ಕಾರ್ಯಕ್ರಮ ಇತ್ತು. ಅದನ್ನು ಮುಗಿಸಿ ಸುತ್ತಾಡಲು ಹೊರಟಿದ್ದರು ಎಂದು ಕುಟುಂಬದ​ ಮೂಲಗಳು ತಿಳಿಸಿವೆ.

ಬೇಕರಿ ವ್ಯಾಪಾರಿಯಾಗಿರುವ ರಾಣೇಬೆನ್ನೂರು ನಗರದ ಅಫ್ರೋಜ್ ಎಂಬುವರ ಮನೆಯಲ್ಲಿ ಬುಧವಾರ ಜವುಳದ ಕಾರ್ಯಕ್ರಮ ಇತ್ತು. ರಾಣೇಬೆನ್ನೂರಿಗೆ ಗೋವಾ, ಧಾರವಾಡ, ಹರಿಹರದಿಂದ ಸಂಬಂಧಿಕರು ಬಂದಿದ್ದರು. ಸಂಭ್ರಮದಿಂದಲೇ  ಎಲ್ಲರೂ ಸೇರಿಕೊಂಡು ಜವುಳದ ಕಾರ್ಯಕ್ರಮ ಮಾಡಿದ್ದರು. ಸಂಬಂಧಿಕರೆಲ್ಲ ಅಗಡಿ ತೋಟಕ್ಕೆ ಎರಡು ಕಾರುಗಳಲ್ಲಿ ಗುರುವಾರ ಪಿಕ್ ನಿಕ್ ಹೊರಟಿದ್ದರು. ಒಂದು ಕಾರು ಅದಾಗಲೇ ಹಾವೇರಿ ಸಮೀಪಿಸಿತ್ತು. ಹಿಂದೆ ಉಳಿದಿದ್ದ ಕಾರು ಮೋಟೆಬೆನ್ನೂರು ಬಳಿ ಅಪಘಾತಕ್ಕೀಡಾಗಿದೆ.

ಘಟನಾ ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದಾರೆ. ಹಾವೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಶವಗಳ ರವಾನಿಸಲಾಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೋಟೆಬೆನ್ನೂರು ಬಳಿ ಆಡಿ ಕಾರು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ರಾಣೆಬೆನ್ನೂರಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಕಾರಿನಲ್ಲಿ ಇಬ್ಬರು ಪುರುಷರು ಹಾಗೂ ಆರು ಮಂದಿ ಮಹಿಳೆಯರು ಸೇರಿ 8 ಮಂದಿ ಇದ್ದರು. ಅಪಘಾತದಲ್ಲಿ 6 ಜನರು ಸ್ಥಳದಲ್ಲೇ ಮೃತರಾಗಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಮೃತದೇಹಗಳನ್ನು ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಕಾರಿನ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಂಶುಕುಮಾರ್ ಮಾಹಿತಿ ನೀಡಿದ್ದಾರೆ.

 

Share This Article
error: Content is protected !!
";