ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಾಲೆಯಿಂದ ಹೊರಗುಳಿದ ಮಕ್ಕಳ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ 2025ನೇ ಸಾಲಿನ ಮೊದಲನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳು ಶಾಲೆಯಿಂದ ಹೊರಗುಳಿದರೆ ಫಲಿತಾಂಶದ ಮೇಲೆ ಪ್ರಭಾವ, ಬಾಲ್ಯವಿವಾಹ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಹಾಗಾಗಿ ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಸಮನ್ವಯ ಹಾಗೂ ಪರಿಣಾಮಕಾರಿಗಾಗಿ ಕಾರ್ಯನಿರ್ವಹಿಸುವ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.
ಅಧಿಕಾರಿಗಳ ತಂಡ ನಿಯೋಜಿಸಿ: ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡ ರಚನೆ ಮಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ ಮನೆ ಭೇಟಿ ನೀಡಿ, ಕೌನ್ಸಿಲಿಂಗ್ ನಡೆಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಯಿಂದ ಹೊರಗುಳಿದ ಒಟ್ಟು 245 ಮಕ್ಕಳಲ್ಲಿ 184 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 30, ಚಿತ್ರದುರ್ಗ–2, ಹಿರಿಯೂರು–6, ಹೊಳಲ್ಕೆರೆ–12 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 11 ಮಕ್ಕಳು ಸೇರಿದಂತೆ ಜಿಲ್ಲೆಯಾದ್ಯಂತ 61 ಮಕ್ಕಳು ವಿವಿಧ ಕಾರಣಗಳಿಂದ ಮುಖ್ಯವಾಹಿನಿಗೆ ಬಂದಿರುವುದಿಲ್ಲ. ಮುಂದಿನ ದಿನಗಳಲ್ಲಿ ಮುಖ್ಯವಾಹಿನಿಗೆ ತರಲು ಕ್ರಮವಹಿಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಸಮಿತಿ ಸದಸ್ಯ ಡಿ.ಓ.ಮುರಾರ್ಜಿ ಮಾತನಾಡಿ, ಚಳ್ಳಕೆರೆ ತಾಲ್ಲೂಕಿನಲ್ಲಿ 30 ಮಕ್ಕಳು ಕೌಟುಂಬಿಕ ಕಲಹದಿಂದ ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಕೌಟುಂಬಿಕ ಕಲಹದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೇಳಿದರು.
ಶಾಲೆಯಿಂದ ಮಕ್ಕಳು ಹೊರಗುಳಿಯಲು ನಿಖರವಾದ ಕಾರಣ ನೀಡಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆಹಚ್ಚಿ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಈ ಸಂಬಂಧ ಚಳ್ಳಕೆರೆ, ಹೊಳಲ್ಕೆರೆ ಹಾಗೂ ಮೊಳಕಾಲ್ಮುರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಮಾತನಾಡಿ, ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಏನು ಸಮಸ್ಯೆ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 61 ಮಕ್ಕಳು ಮುಖ್ಯವಾಹಿನಿಗೆ ತರಲು ಅಗತ್ಯ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಾಗೃತಿ ಕಾರ್ಯಕ್ರಮಗಳ ಆಯೋಜನೆಗೆ ಗುರಿ ನಿಗಧಿಪಡಿಸಿ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲೆ ನಡೆಯುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳ ಆಯೋಜನೆಗೆ ವ್ಯವಸ್ಥಿತವಾಗಿ ಕ್ರಿಯಾಯೋಜನೆ ರೂಪಿಸಿ, ಗುರಿ ನಿಗಧಿಪಡಿಸುವಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪರಿಶಿಷ್ಟ ಜಾತಿ, ಪಂಗಡದ ಜನರು ಹೆಚ್ಚಿರುವ ಪ್ರದೇಶ ಹಾಗೂ ಸಂಘರ್ಷ ನಡೆಯುವ ಪ್ರದೇಶಗಳ ವ್ಯಾಪ್ತಿಯಲ್ಲಿ ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಒಳಗೊಂಡಂತೆ ಜಾಗೃತಿ ಕಾರ್ಯಕ್ರಮಗಳನ್ನು ಬಹಳ ಪರಿಣಾಮಕಾರಿಯಾಗಿ ಜರುಗಿಸಿ, ಜನರಿಗೆ ತಿಳುವಳಿಕೆ ನೀಡಬೇಕು ಎಂದು ತಿಳಿಸಿದರು.
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ: ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಮಹಿಳೆಯರು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಸಾಕಷ್ಟು ದೂರುಗಳು ಬರುತ್ತಿದ್ದು, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ಅಂದೋಲನದ ಮಾಡಿ ವರದಿ ಸಲ್ಲಿಸುವಂತೆ ಅಬಕಾರಿ ಉಪಆಯುಕ್ತರಿಗೆ ತಾಕೀತು ಮಾಡಿದರು.
ಪರವಾನಗಿ ಪಡೆದ ಅಂಗಡಿಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡುವ ಹೊರತು ಅನಧಿಕೃತವಾಗಿ ಮಾರಾಟ ಬಂದ್ ಆಗಬೇಕು. ಹಾಗಾಗಿ ಅಬಕಾರಿ ದಾಳಿಗಳನ್ನು ನಡೆಸಿ, ಕಾನೂನು ಕ್ರಮಕೈಗೊಳ್ಳುವ ಮೂಲಕ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ತಡೆಯುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ವಿಶೇಷ ಸರ್ಕಾರಿ ಅಭಿಯೋಜಕರ ಕಚೇರಿಯಲ್ಲಿರುವ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿಗೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್ಸಿಪಿ, ಟಿಎಸ್ಪಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಅನುದಾನ ಲ್ಯಾಪ್ಸ್ ಆಗದಂತೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾದ ಡಿ.ಓ.ಮುರಾರ್ಜಿ, ನವಕೋಟಿ, ಬೋರಸ್ವಾಮಿ, ಹೇಮೆಗೌಡ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.