ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಉತ್ತರ ಮತ್ತು ದಕ್ಷಿಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 62 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ನೂರು ಸಂಖ್ಯಾಬಲದ ಬಾಲಕ, ಬಾಲಕಿಯರ ಹಾಸ್ಟೆಲ್ ಆರಂಭಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-2 ಕೆ.ಅಶ್ವತ್ಥ್ ಅವರು ಇದೇ ಅಕ್ಟೋಬರ್-24 ರಂದು ಆದೇಶ ಹೊರಡಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರ ಸ್ವಂತ ಜಿಲ್ಲೆ ಕೊಪ್ಪಳಕ್ಕೆ ಅತಿ ಹೆಚ್ಚು 9 ಹಾಸ್ಟೆಲ್ ಗಳನ್ನು ಮಂಜೂರು ಮಾಡಿದ್ದರೆ ಮುಖ್ಯಮಂತ್ರಿಗಳ ಸ್ವಂತ ಜಿಲ್ಲೆ ಮೈಸೂರಿಗೆ ಕೇವಲ 1 ಹಾಸ್ಟೆಲ್ ಮಂಜೂರು ಮಾಡಲಾಗಿದೆ. ಅತಿ ಹೆಚ್ಚಿನ ಹಿಂದುಳಿದ ವರ್ಗಗಳಿರುವ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲಾ ಕೇಂದ್ರದಲ್ಲಿ ಹಾಸ್ಟೆಲ್ ಗಳಿಗೆ ಸಾಕಷ್ಟು ಬೇಡಿಕೆ ಇದ್ದು ಕಡೆಗಣಿಸಿರುವುದು ಸೋಜಿಗ ಮೂಡಿಸಿದೆ.
ತುಮಕೂರು ಜಿಲ್ಲೆಯ ಅತಿ ಹಿಂದುಳಿದ ಶಿರಾ, ಮದುಗಿರಿ, ಕೊರಟಗೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಹಾಸ್ಟೆಲ್ ಆರಂಭಿಸದೆ ಕಡೆಗಣಿಸಿರುವುದು ವಿಪರ್ಯಾಸವಾಗಿದೆ. ಜೊತೆಯಲ್ಲಿ ತುಮಕೂರು ಶೈಕ್ಷಣಕ ಕೇಂದ್ರವಾಗಿದ್ದು ಅಲ್ಲಿ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯಗಳು ಅಗತ್ಯವಾಗಿದ್ದರೂ ಮಂಜೂರು ಮಾಡದಿರುವುದು ಅಚ್ಚರಿಯಾಗಿದೆ.
ಬಾಗಲಕೋಟೆ-7, ಬೆಳಗಾವಿ-6, ಬೆಂಗಳೂರು ಗ್ರಾಮಾಂತರ ಜಿಲ್ಲೆ-2, ಚಿಕ್ಕಬಳ್ಳಾಪುರ-1, ಚಿಕ್ಕಮಗಳೂರು-1, ಚಿತ್ರದುರ್ಗ-2, ದಾವಣಗೆರೆ-2, ಧಾರವಾಡ-1, ಗದಗ-2, ಹಾಸನ-1, ಹಾವೇರಿ-2, ಕಲಬುರಗಿ-1, ರಾಯಚೂರು-3, ಕೊಪ್ಪಳ-9, ಬಳ್ಳಾರಿ-2, ಕೋಲಾರ-1, ಮಂಡ್ಯ-3, ಮೈಸೂರು-1, ಶಿವಮೊಗ್ಗ-4, ತುಮಕೂರು-4, ಉಡುಪಿ-1, ಉತ್ತರ ಕನ್ನಡ-1, ಸಿಂದಗಿ-1 ಒಟ್ಟು 62 ನೂತನ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರು ಹಾಸ್ಟೆಲ್ ಗಳನ್ನು ಆರಂಭಿಸಲು ಆರ್ಥಿಕ ಇಲಾಖೆ ಅನುಮೋದನೆಯೊಂದಿಗೆ ಸುತ್ತೋಲೆ ಹೊರಡಿಸಲಾಗಿದೆ.
ಸದ್ಯಕ್ಕೆ ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್ ಆರಂಭಿಸಲು ಉದ್ದೇಶಿಸಲಾಗಿದೆ.
ಕಳೆದ ಜೂನ್-2024ರಲ್ಲಿ 100 ಸಂಖ್ಯಾಬಲದ 75 ಮೆಟ್ರಿಕ್ ನಂತದರ ಬಾಲಕರು, 75 ಬಾಲಕಿಯರ ಹಾಸ್ಟೆಲ್ ಗಳನ್ನು 825 ಹುದ್ದೆಗಳ ಸೃಜನೆಯೊಂದಿಗೆ ಜಿಲ್ಲಾ, ತಾಲೂಕು, ಗ್ರಾಪಂ, ಗ್ರಾಮಗಳ ವ್ಯಾಪ್ತಿಯಲ್ಲಿ ತೆರೆಯಲು ತೀರ್ಮಾನಿಸಲಾಗಿದೆ.
ಕಳೆದ ಸೆಪ್ಟೆಂಬರ್-2024ರಲ್ಲಿ ಜಿಲ್ಲಾ ಕೇಂದ್ರಗಳಲ್ಲಿ 100 ಸಂಖ್ಯಾಬಲದ 88 ಬಾಲಕ-ಬಾಲಕಿಯರ ಹಾಸ್ಟೆಲ್ ಗಳನ್ನು ಆರಂಭಿಸಲು ತೀರ್ಮಾನಿಸಲಾಗಿತ್ತು.
ಪ್ರತಿ ಹಾಸ್ಟೆಲ್ ಗಳಿಗೆ ಅಡುಗೆಯವರು, ಅಡುಗೆ ಸಹಾಯಕರು ಮತ್ತು ಬಾಲಕಿಯರ ಹಾಸ್ಟೆಲ್ಗಳಿಗೆ ತಲಾ ಒಬ್ಬರು ರಾತ್ರಿ ಕಾವಲುಗಾರರ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.
ಓದುವ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಪ್ರವೇಶ ನೀಡಬೇಕು ಎಂಬ ನಿಯಮವಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ಮತ್ತು ಮೂಲ ಸೌಲಭ್ಯ ಒದಗಿಸಲು ಕಷ್ಟವಾಗುತ್ತದೆ.
ಸರ್ಕಾರಿ / ಸರ್ಕಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಾದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಬಿ.ಇ, ಎಂಬಿಬಿಎಸ್, ಡಿಪ್ಲೋಮಾ, ವೃತ್ತಿಶಿಕ್ಷಣ ಇತ್ಯಾದಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳನ್ನು ಪ್ರಾರಂಭಿಸಲಾಗಿದೆ.
ವಿದ್ಯಾರ್ಥಿನಿಲಯಗಳು ಇರುವ ಸ್ಥಳಗಳ ಕಾಲೇಜುಗಳಿಂದ 5 ಕಿ.ಮೀ.ಗಿಂತ ದೂರದ ಸ್ಥಳಗಳಿಂದ ಬರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ಈ ವಸತಿನಿಲಯಗಳಿಗೆ ಪ್ರವೇಶ ಪಡೆಯಲು ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗಗಳ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ಮಿತಿ ರೂ.1.00 ಲಕ್ಷ ಹಾಗೂ ಪ್ರವರ್ಗ-1, ಎಸ್.ಸಿ/ ಎಸ್.ಟಿ ವಿದ್ಯಾರ್ಥಿಗಳಿಗೆ ರೂ.2.50 ಲಕ್ಷ ನಿಗದಿಪಡಿಸಿದ್ದು, ಅರ್ಹತೆ ಮತ್ತು ಆದಾಯದ ಮಾನದಂಡದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಹಾಸ್ಟೆಲ್ ಗಳಿಗೆ ವಿದ್ಯಾರ್ಥಿಗಳನ್ನು ಮೀಸಲಾತಿ ಅನುಪಾತದಂತೆ ಪ್ರವೇಶಕ್ಕೆ ಆಯ್ಕೆ ಮಾಡಲಾಗುತ್ತದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದಲ್ಲಿ ನೂರು ಸಂಖ್ಯೆಯ ಬಾಲಕರ ವಿದ್ಯಾರ್ಥಿ ನಿಲಯ ಆರಂಭಿಸಲು ಆದೇಶಿಸಲಾಗಿದೆ. ಅದೇ ರೀತಿ ಜಿಲ್ಲೆಯ ಹೊಸದುರ್ಗ ನಗರದಲ್ಲಿ ಮೆಟ್ರಿಕ್ ನಂತರದ ಬಾಲಕಿಯರು ವಿದ್ಯಾರ್ಥಿ ನಿಲಯ ಆರಂಭಿಸಲು ಆದೇಶಿಸಲಾಗಿದೆ.
ಹರಿಯಬ್ಬೆ ಗ್ರಾಮದಲ್ಲಿ ಈಗಾಗಲೇ 100 ಮತ್ತು 50 ಸಂಖ್ಯೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯವು ಕಳೆದ 2013-2018ರ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾಗಿದ್ದ ಹೆಚ್.ಆಂಜನೇಯವರು ಆರಂಭಿಸಿದ್ದರು.
ಈಗ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಸುಧಾಕರ್ ಅವರ ಶಿಫಾರಸ್ಸಿನೊಂದಿಗೆ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಆರಂಭಿಸಲಾಗುತ್ತಿದೆ. ಹಾಸ್ಟೆಲ್ ಮಂಜೂರಾತಿ ಹಿಂದೆ ಎಲೆಮರೆ ಕಾಯಿಯಂತೆ ಇರುವವರ ಪ್ರಯತ್ನ ಕೂಡ ಅಲ್ಲಗಳೆಯಲಾಗದು. ಒಟ್ಟಾರೆ ಹರಿಯಬ್ಬೆ ಕೇಂದ್ರವು ಶಿಕ್ಷಣಕ್ಕೆ ಒತ್ತು ನೀಡಿದ್ದು ಒಂದು ಶೈಕ್ಷಣಿಕ ಹಬ್ ಆಗುವುದರಲ್ಲಿ ಅನುಮಾನವಿಲ್ಲ.
ಅದೇ ರೀತಿ ಶಿಕ್ಷಕರು, ಉಪನ್ಯಾಸಕರು ಶ್ರಮವಹಿಸಿ ಮಕ್ಕಳಿಗೆ ಕಠಿಣ ವಿದ್ಯಾಭ್ಯಾಸ ಮಾಡಿಸುವ ಹೊಣೆಗಾರಿಕೆ ಇದ್ದು ಗತಕಾಲದ ವೈಭವ ಹರಿಯಬ್ಬೆಗೆ ಮರುಕಳಿಸುವ ಸಾಧ್ಯತೆಗಳು ದಟ್ಟವಾಗಿದೆ.