ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತ ಕುಟುಂಬಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 2025-26ನೇ ಸಾಲಿನಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ವಿಳಂಬವಿಲ್ಲದೆ ಚುರುಕುಗೊಳಿಸಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
6,322 ರೈತರಿಗೆ ಕೊಳವೆಬಾವಿ:
ಎಸ್‌ಸಿಪಿ–ಟಿಎಸ್‌ಪಿ ಅಡಿಯಲ್ಲಿ 2025–26ನೇ ಆರ್ಥಿಕ ಸಾಲಿನಲ್ಲಿ 3,939 ಪರಿಶಿಷ್ಟ ಜಾತಿ ಮತ್ತು 2,383 ಪರಿಶಿಷ್ಟ ಪಂಗಡದ ಕುಟುಂಬಗಳು ಸೇರಿದಂತೆ ಒಟ್ಟು 6,322 ರೈತ ಕುಟುಂಬಗಳಿಗೆ ವಿದ್ಯುತ್ ಸಂಪರ್ಕದೊಂದಿಗೆ ಕೊಳವೆಬಾವಿ ಸೌಲಭ್ಯ ಒದಗಿಸಲು ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿ ಮುಗಿಸಿ, ನಿಗದಿತ ಸಮಯದಲ್ಲಿ ರೈತರಿಗೆ ಸೌಲಭ್ಯ ತಲುಪಿಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಲ ಸಂರಕ್ಷಣೆಗೆ ಒತ್ತು:
ಸರ್ಕಾರ ಅಂತರ್ಜಲ ಮಟ್ಟ ವೃದ್ಧಿಸುವ ದೃಷ್ಟಿಯಿಂದ ಹಲವಾರು ಯೋಜನೆ ರೂಪಿಸಿದೆ. ಪರಿಶಿಷ್ಟ ಸಮುದಾಯಗಳ ಕೃಷಿ ಪ್ರದೇಶಗಳಲ್ಲಿ ಚೆಕ್ ಡ್ಯಾಮ್‌ಗಳ ನಿರ್ಮಾಣ ಮತ್ತು ಸಾಮೂಹಿಕ ಏತ ನೀರಾವರಿ ಯೋಜನೆಗಳಂತಹ ಜಲ ಸಂರಕ್ಷಣಾ ರಚನೆಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
365 ಕೋಟಿಯಲ್ಲಿ 5,371 ರೈತರಿಗೆ ಕೊಳವೆಬಾವಿ:
365 ಕೋಟಿ ವೆಚ್ಚದಲ್ಲಿ 2024–25ನೇ ಸಾಲಿನಲ್ಲಿ ಒಟ್ಟು 5,371 ರೈತ ಕುಟುಂಬಗಳಿಗೆ (3,388 ಎಸ್‌ಸಿ ಮತ್ತು 1,983 ಎಸ್‌ಟಿ) ಯಶಸ್ವಿಯಾಗಿ ವಿದ್ಯುತ್ ಸಂಪರ್ಕಿತ ಕೊಳವೆ ಬಾವಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಹಿಂದುಳಿದವರಿಗೆ ಗಂಗಾ ಕಲ್ಯಾಣ:
ಗಂಗಾ ಕಲ್ಯಾಣ ಯೋಜನೆಯಡಿ ಹಿಂದುಳಿವದ ವರ್ಗಗಳ ಸಣ್ಣ ಹಾಗೂ ಅತಿ ಸಣ್ಣ ರೈತರು ಉಚಿತವಾಗಿ ಸರ್ಕಾರಿಂದ ಕೊಳವೆ ಬಾವಿ ಪಡೆಯಬಹುದಾಗಿದೆ. ಈ ಮೂಲಕ ಕೃಷಿಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶ. ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಬಿಡುಗಡೆಯಾದ ಅನುದಾನದ ಆಧಾರದ ಮೇಲೆ ಗಂಗಾ ಕಲ್ಯಾಣ ಯೋಜನೆಗೆ ಹಣ ಬಿಡುಗಡೆ ಆಗಲಿದೆ ಎಂದು ಸಚಿವರು ತಿಳಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಸಿಗಲಿದೆ.
ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಪ್ರವರ್ಗ 1, 2ಎ, 3ಎ, 3ಬಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು. ಹಾಲಿ ಜಮೀನು ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿರಬಾರದು. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಒಂದೇ ಸ್ಥಳದಲ್ಲಿ ಕನಿಷ್ಠ 2 ಎಕರೆ ಜಮೀನು ಹೊಂದಿದ್ದರೆ ಈ ಯೋಜನೆಗೆ ಅರ್ಹರಾಗುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.

