ದೆಹಲಿಯಲ್ಲಿ “ಹೂರನಾಡು ಕನ್ನಡ ನಾಟಕೋತ್ಸವ”. ಚಂದ್ರವಳ್ಳಿ ನ್ಯೂಸ್, ದೆಹಲಿ: ದೆಹಲಿ ಕರ್ನಾಟಕ ಸಂಘ ನವ ದೆಹಲಿ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗು ಬಸವ ಇಂಟರ್ನ್ಯಾಷನಲ್ ಫೌಂಡೇಶನ್ ಲಂಡನ್ ಇವರ ಸಹಯೋಗದಲ್ಲಿ ದೆಹಲಿ ಕರ್ನಾಟಕ ಸಂಘದಲ್ಲಿ ದಿನಾಂಕ 15-16/02/2025 ರಂದು “ಹೂರನಾಡು ಕನ್ನಡ ನಾಟಕೋತ್ಸವ”ದಲ್ಲಿ ದಿನಾಂಕ 15 ರಂದು “ತಿಂಡಿಗೆ ಬಂದ ತುಂಡೆರಾಯ” ಮತ್ತು ದಿನಾಂಕ 16 ರಂದು “ಬಾಹುಬಲಿ ವಿಜಯ” ಎಂಬ ಸುಂದರ ನಾಟಕಗಳನ್ನು ಆಯೋಜಿಸಲಾಗಿತ್ತು.
ಕೆ ವಿ ನಾಗರಾಜ ಮೂರ್ತಿ ಅಧ್ಯಕ್ಷರು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ದೇಶದ ನಾನ ಭಾಗದಲ್ಲಿ ಕನ್ನಡ ನಾಟಕವನ್ನು ಪ್ರದರ್ಶನ ಮಾಡುತ್ತಿದ್ದೇವೆ ಇದರ ಮೂಲ ಉದ್ದೇಶ ಜನರಿಗೆ ಜ್ಞಾನದ ಅರಿವು ಮೂಡಿಸುವುದು. ನಮ್ಮ ಮೂಲವನ್ನು ನಮ್ಮ ಬೇರನ್ನು ಮರೆಯಬಾರದು ಏಕೆಂದರೆ ಯಾರು ಬೇರನ್ನು ಕಳೆದುಕೊಳ್ಳುತ್ತಾರೋ ಅವರು ಬೇಗ ಒಣಗಿ ಹೋಗುತ್ತಾರೆ ಅದಕ್ಕೆ ನಮ್ಮ ಸಂಸ್ಕೃತಿಯ ಬೇರನ್ನು ಗಟ್ಟಿಗೊಳಿಸಬೇಕೆಂದು ಮತ್ತು ಮಾನಸಿಕ ಭ್ರಷ್ಟತೆಯನ್ನು ತಪ್ಪಿಸಬೇಕೆಂದರೆ ಮಕ್ಕಳಿಗೆ ಚಿಕ್ಕಂದಿನಿಂದಲೇ ನಾಟಕ ಸಂಗೀತ ನೃತ್ಯ ಕಲಿಸುವುದು ಒಳ್ಳೆಯದು ಎಂದರು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸಿ.ಎಂ ನಾಗರಾಜ್ ಅವರು ಸಂಘವು ದೆಹಲಿಯಲ್ಲಿ ಕನ್ನಡತನವನ್ನು ಉಳಿಸಿ ಬೆಳೆಸುವಂತಹ ಕೆಲಸವನ್ನು ಮಾಡುತ್ತಿದೆ. ಈ ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ರಾಯಭಾರಿಯಂತೆ ಸಂಘವು ಕನ್ನಡ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದು ದೆಹಲಿಯಲ್ಲಿ ಉನ್ನತ ಶಿಕ್ಷಣಕ್ಕೆ ಬರುವ ಕನ್ನಡಿಗರಿಗೆ ಒಂದು ವಸತಿ ಶಾಲೆಯನ್ನು ನಿರ್ಮಾಣ ಮಾಡುವಂತೆ ಶ್ರೀ ಬಿ.ಆರ್ ಪಾಟೀಲ್ ಮತ್ತು ಶ್ರೀ ಬಸವರಾಜ್ ಹೊರಟ್ಟಿ ಅವರಿಗೆ ಮನವಿ ಮಾಡಿದರು ಅಲ್ಲದೆ ಕರ್ನಾಟಕ ಸರ್ಕಾರವು ದೆಹಲಿ ಕರ್ನಾಟಕ ಸಂಘಕ್ಕೆ ಧನಸಹಾಯ ಮಾಡುವಂತೆ ಗುರುಗಾವ್ ಕನ್ನಡ ಸಂಘಕ್ಕೂ ಧನಸಹಾಯ ಮಾಡಬೇಕೆಂದು ಕೇಳಿಕೊಂಡರು.
ಬಸವರಾಜ್ ಎಸ್ ಹೊರಟ್ಟಿ, ಸಭಾಪತಿಗಳು ಕ.ವಿ.ಪ ಕರ್ನಾಟಕ ಸರ್ಕಾರ ಅವರು ಉದ್ಘಾಟನೆ ಮಾಡಿ 1964ನೇ ಇಸವಿಯಲ್ಲಿ ಹೈಸ್ಕೂಲ್ ಓದುವಾಗ ನಾಟಕದಲ್ಲಿ ಪಾತ್ರ ಮಾಡಿದ್ದೆ ಎಂದರು. ಮಾತೃಭಾಷೆಯಿಂದ ಬಂದ ಮಕ್ಕಳು ಉತ್ತಮ ಸಮಾಜವನ್ನು ಭವಿಷ್ಯವನ್ನು ನಿರ್ಮಾಣ ಮಾಡುತ್ತಾರೆ ಅದಕ್ಕೆ ಮಾತೃಭಾಷೆಯಲ್ಲಿ ಮಕ್ಕಳಿಗೆ ಕಲಿಸಬೇಕೆಂದು 1994ರ ಕೋರ್ಟ್ ಆದೇಶದ ಪ್ರಕಾರ ನಾನು ಶಿಕ್ಷಣ ಸಚಿವನಾಗಿದ್ದಾಗ ಕರ್ನಾಟಕದ ಖಾಸಗಿ ಶಾಲೆಗಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿಸಬೇಕೆಂದು ಆದೇಶ ಜಾರಿ ಮಾಡಿದ್ದನ್ನು ನೆನೆದರು.
ಮುಖ್ಯ ಅತಿಥಿಗಳಾದ ಬಿ.ಆರ್ ಪಾಟೀಲ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ವಿಧಾನಸಭಾ ಸದಸ್ಯರು ಮಾತನಾಡಿ ನನಗೆ ನಾಟಕ ನೋಡೋ ಹವ್ಯಾಸ ಇದೆ ನಾಟಕದಲ್ಲಿ ಪಾತ್ರ ಮಾಡಿಲ್ಲ ಆದರೆ ರಾಜಕೀಯದಲ್ಲಿ ಬಣ್ಣ ಬದಲು(ಬಯಲು) ಮಾಡುವಂತಹ ನಾಟಕಗಳನ್ನು ನಾವು ದಿನನಿತ್ಯ ಆಡುತ್ತಿರುತ್ತೇವೆ ಎಂದರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ಬರುವ ಬಡ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಸತಿ ಶಾಲೆಯನ್ನು ಕಟ್ಟಿಸಿ ಎಂದು ಮನವಿ ಮಾಡಿದ್ದಾರೆ ಇದರ ಬಗ್ಗೆ ನಾನು ಮತ್ತು ಹೊರಟ್ಟಿ ಸಾಹೇಬರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ದೆಹಲಿಯಲ್ಲಿ ಅಂತದ್ದೊಂದು ಶಾಶ್ವತ ಕಟ್ಟಡವನ್ನು ನಿರ್ಮಾಣ ಮಾಡುವ ಪ್ರಯತ್ನಮಾಡುತ್ತೇವೆ ಎಂದು ಭರವಸೆ ನೀಡಿದರು.
ಬಸವ ಇಂಟರ್ನ್ಯಾಷನಲ್ ಪೌಂಡೇಶನ್ ಲಂಡನ್ ಅಧ್ಯಕ್ಷರಾದ ಎಸ್ ಮಹದೇವಯ್ಯ ಅವರು ಮಾತನಾಡುತ್ತಾ ನನಗೆ 85 ವರ್ಷಗಳಾಗಿವೆ ನಾನು ಬಸವ ಇಂಟರ್ನ್ಯಾಷನಲ್ ಫೌಂಡೇಶನ್ ಶುರು ಮಾಡಿ 35 ವರ್ಷಗಳು ಸಂದಿವೆ ಇಲ್ಲಿವರೆಗೂ ನನ್ನ ಸ್ವಂತ ದುಡಿಮೆಯಲ್ಲಿ 2 ಕೋಟಿ ರೂಗಳನ್ನು ದಾನವಾಗಿ ನೀಡಿದ್ದೇನೆ ಅದು ಕೇವಲ ಒಂದು ಜಾತಿಗೆ ಸೀಮಿತವಾಗದೆ ಎಲ್ಲರಿಗೂ ನೀಡಿದ್ದೇನೆ ಎಂದು ನಾನು ಹೆಚ್ಚಾಗಿ ದೇವಸ್ಥಾನಕ್ಕೆ ಹೋಗುವುದಿಲ್ಲ ನನ್ನ ದೇವರನ್ನು ತೋರಿಸಿ ಎಂದು ಪೂಜಾರಿಗೆ ಕೇಳುವುದಿಲ್ಲ ಏಕೆಂದರೆ ನಾವು ಮಾಡೋ ಕಾಯಕ ಸೇವೆಯಲ್ಲಿಯೇ ದೇವರನ್ನು ಕಾಣುತ್ತೇವೆ ನೀವುಗಳು ನಿಮ್ಮ ಗಳಿಕೆಯಲ್ಲಿ ಸ್ವಲ್ಪವಾದರೂ ಸಹಾಯ ಮಾಡಿ ಮಾಡುವ ಸಹಾಯದಿಂದಲೇ ದೇವರನ್ನು ಕಾಣಿರಿ ಎಂದರು.
ಕಾರ್ಯಕ್ರಮ ಶುರುವಾಗುವುದಕ್ಕೂ ಮೊದಲು ಸಂಘದ ಆವರಣದಲ್ಲಿ ಬೆಂಗಳೂರಿನ ಕಲಾವಿದರಿಂದ ಚಂಡೆ ಮದ್ದಳೆಗಳ ತಾಳಕ್ಕೆ ಹೆಣ್ಣು ಮಕ್ಕಳು ವೀರಗಾಸೆ ಕುಣಿತದಿಂದ ರಂಜಿಸಿದರು. ಕೊನೆಯಲ್ಲಿ ಆಹಾರ ಮೇಳದಲ್ಲಿ ದೆಹಲಿ ಕನ್ನಡಿಗರಿಗೆ ಕರ್ನಾಟಕ ಶೈಲಿಯ ಕೈ ರುಚಿಯನ್ನು ಉಣಬಡಿಸಿದ ಗೃಹಿಣಿಯರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಈ ಕಾರ್ಯಕ್ರಮವನ್ನು ದೆಹಲಿ ಕರ್ನಾಟಕ ಸಂಘದ ಅರುಣ್ ಕುಮಾರ್ ಚ.ರಾ.ಪ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
“ತಿಂಡಿಗೆ ಬಂದ ತುಂಡೇರಾಯ”
ಜರ್ಮನಿನ ನಾಟಕಕಾರರಾದ ಬಾರ್ಟೋಲ್ಟ್ ಬ್ರೆಕ್ಟ್ ಅವರ The resistible rise of arthuro ui ಎಂಬ ನಾಟಕವನ್ನು ಆಧರಿಸಿ ಕನ್ನಡದಲ್ಲಿ ಅನುವಾದಿಸಲ್ಪಟ್ಟ ಈ ನಾಟಕವನ್ನು ಶಕೀಲ್ ಅಹಮದ್ ಅವರು ನಿರ್ದೇಶಿಸಿದ್ದಾರೆ ಹಾಗು ಚಿತ್ರ ನಟ ಪ್ರಕಾಶ್ ರೈ ಅವರ ‘ನಿರ್ದಿಗಂತ’ ತಂಡದ ಕಲಾವಿದರು ಅಬಿನಹಿಸಿದ್ದಾರೆ. ನಿಜ ಹೇಳಬೇಕೆಂದರೆ ಇದು ಒಂದು ಜರ್ಮನ್ನಿನ ನಾಟಕ ಎಂಬುವ ಹಾಗೆ ಇರಲಿಲ್ಲ ನಮ್ಮ ಪರಿಸರಕ್ಕೆ ತಕ್ಕಂತೆ ನೈಜವಾಗಿ ಮೂಡಿಬಂದಿದೆ. ಉತ್ತರ ಕರ್ನಾಟಕ ಜವಾರಿ ಭಾಷೆಯನ್ನು ಅವರ ಬೈಗುಗಳನ್ನು ನಾಟಕದಲ್ಲಿ ಯಥೇಚ್ಛವಾಗಿ ಬಳಸಿಕೊಂಡಿರುವುದು ಎಲ್ಲರಿಗೂ ಕಚಗುಳಿ ಇಟ್ಟಂತೆ ಖುಷಿಯನ್ನು ಇಮ್ಮಡಿ ಮಾಡುವಂತಿತ್ತು.
ನಾಟಕದ ಆರಂಭದಲ್ಲಿ ನಾಟಕದ ಪೀಠಿಕೆಯೂ ಹಿನ್ನೆಲೆಯಲ್ಲಿ ಕೇಳಿ ಬರುತ್ತಿರುವಾಗ ರಂಗಮಂಚದಲ್ಲಿ ಒಂದು ಮೇಜಿನ ಮೇಲೆ ಪಂಚ ಕಲಾವಿದರು ಯಾವುದೋ ಗಹನವಾದ ಚಿಂತೆಯಲ್ಲಿ ಮುಳುಗಿರುವವರಂತೆ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ತಟಸ್ಥರೂಪದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಮುಖಭಾವದಲ್ಲಿ ಅಲುಗಾಡದೆ ಒಂದೇ ಬಂಗಿಯಲ್ಲಿ ಕುಳಿತ ಕಲಾವಿದರು; ಮೊದಲ ದೃಶ್ಯದಲ್ಲಿಯೇ ನಾಟಕದ ಸೊಬಗನ್ನು ಕಟ್ಟಿಕೊಟ್ಟು ತಾವು ನುರಿತ ಕಲಾವಿದರೆಂದು
ಸ್ಪಷ್ಟಪಡಿಸಿದರು.
ಯುದ್ದದ ಸಮಯದಲ್ಲಿ ಕೆಲವು ಕಿಡಿಗೇಡಿ ಗುಂಪು ಸೇರಿಕೊಂಡು ಕೊಲೆ ಸುಲಿಗೆ ದರೋಡೆ ಮಾಡಿ ಪ್ರಶಾಸನವನ್ನು ಯಾವ ರೀತಿ ಕೆಡಿಸಿ ಚಾಲಾಕಿತನದಿಂದ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಎಂತೆಂತಹ ಸಮಾಜ ಘಾತುಕ ಚಟುವಟಿಕೆಗಳನ್ನು ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ವಿಷಯವನ್ನು ತರಕಾರಿ ಮಾರ್ಕೆಟಿನ ಒಡೆತನ ಪಡೆಯುವ ಉದಾಹರಣೆಯನ್ನಾಗಿಸಿಕೊಂಡು, ಧರ್ಮ (ತುಂಡೆ ರಾಯ) ಮತ್ತು ಅವನ ಸಹಚರರು ಮಾಡುವ ಕರ್ಮದ ಕೆಲಸಗಳನ್ನು ತುಂಬಾ ನೈಜವಾಗಿ ತೋರಿಸಿದ್ದಾರೆ ಎಲ್ಲಾ ಕಲಾವಿದರು ತುಂಬಾ ಚೆನ್ನಾಗಿ ಅಭಿನಹಿಸಿದ್ದಾರೆ ಅದರಲ್ಲೂ ತುಂಡೇರಾಯನ ಪಾತ್ರಧಾರಿಯಂತು ತನ್ನ ನಟನೆಯಲ್ಲಿ ನವರಸಗಳನ್ನು ಸೂಸುತ್ತಾ ಆಂಗಿಕ ವಾಚಿಕ ಎಂಬ ನಾಟಕದ ತತ್ವಗಳನ್ನು ಪಾಲಿಸುತ್ತಾ ತನ್ನ ಶರೀರದ ಮೇಲೆ ಗರ ಬಡಿದಂತೆ ದೇವರು ಮೈಯಲ್ಲಿ ಬಂದಿದೆಯೇನೋ ಎಂಬಂತೆ ಅಭಿನಹಿಸಿ ಎಲ್ಲರ ಗಮನ ಸೆಳೆದರು.
“ಬಾಹುಬಲಿ ವಿಜಯ”ಆದಿಕವಿ ಪಂಪನ ಆದಿಪುರಾಣ ಮಹಾಕಾವ್ಯದಲ್ಲಿ ಬರುವ ಶ್ರೀ ಬಾಹುಬಲಿ ವಿಜಯಂ ಎಂಬ ಪ್ರಸಂಗವನ್ನು ಆಧರಿಸಿ ಜಿ.ಪಿ ರಾಜರತ್ನಂ ವಿರಚಿತ “ಶ್ರೀ ಬಾಹುಬಲಿ ವಿಜಯಂ” ಎಂಬ ನಾಟಕವನ್ನು ಮಹಾದೇವ ಹಡಪದ್ ಅವರು ನಿರ್ದೇಶಿಸಿದ್ದಾರೆ ಹಾಗು ಧಾರವಾಡದ “ಆಟಮಾಟ” ತಂಡದ ಕಲಾವಿದರು ಅದ್ಭುತ ಅಭಿನಯವನ್ನು ಪ್ರದರ್ಶಿಸಿದರು.
ಭರತನು ಹಲವು ದೇಶಗಳನ್ನು ಗೆದ್ದು ತನ್ನ ಚಕ್ರಾಧಿಪತ್ಯವನ್ನು ಎಲ್ಲೆಡೆ ಸ್ಥಾಪಿಸ ಹೊರಟು ಅಹಂಕಾರದಿಂದ ತನ್ನ ಸ್ವಂತ ತಮ್ಮರು ಸಹ ತನಗೆ ಶರಣಾಗಬೇಕೆಂಬ ಮಹದಾಸೆಯಿಂದ ತನ್ನ ತಮ್ಮರಿಗೆ ಓಲೇ ಕಳಿಸುತ್ತಾನೆ ಅವನ ಕೆಲವು ತಮ್ಮಂದಿರು ಅಣ್ಣನಿಗೆ ಶರಣಾಗುವ ಬದಲು ನಾವು ಆದಿ ತೀರ್ಥಂಕರರಿಗೆ ಶರಣಾಗುವುದೇ ಲೇಸೆಂದು ಹೇಳದೆ ಹೋಗುತ್ತಾರೆ. ಭರತನು ಬಾಹುಬಲಿಗೆ ದೂತನಿಂದ ಓಲೆಯನ್ನು ಕಳಿಸುತ್ತಾನೆ ಬಾಹುಬಲಿಯು ಅಣ್ಣನಿಂದ ಅದೇನು ಸಂದೇಶ ಬಂದಿದೆಯೋ ಎಂದು ಕುತೂಹಲದಿಂದ ಖುಷಿಯಿಂದ ನನ್ನ ಅಣ್ಣ ಹೇಗಿದ್ದಾನೆ ಎಲ್ಲಾ ದೇಶಗಳನ್ನು ಜಯಿಸಿದ ಅವನ ಶೌರ್ಯದ ಬಗ್ಗೆ ತಿಳಿಸು ಕೇಳಿ ಖುಷಿಯಾಗುತ್ತೇನೆ ಅಣ್ಣ ನನ್ನ ಬಗ್ಗೆ ಏನೆಂದು ಬರೆದಿದ್ದಾನೆ ಓದಿ ಹೇಳು ಎಂದು ಕೇಳಿದಾಗ; ನೀನು ಬಂದು ನನ್ನ ಚಕ್ರಾಧಿಪತ್ಯಕ್ಕೆ ಶರಣಾಗಬೇಕೆಂದಿರುವ ಆ ಸಂದೇಶ ಕೇಳಿ ಬಾಹುಬಲಿಯು ಕೋಪೋದ್ರಿಕ್ತನಾಗಿ ಅಣ್ಣನಾದರೇನು ಸವಾಲಿಗೆ ಸವಾಲು ಸುಮ್ಮನೆ ಸೋತು ಶರಣಾಗತಿಯಂತೂ ಸಲ್ಲದು ಎಂದು ಹೇಳಿದ ವಿಷಯ ಭರತನಿಗೆ ಮುಟ್ಟಿದ ನಂತರ ಯುದ್ಧಕ್ಕೆ ಸಿದ್ಧತೆ ನಡೆಯುವಾಗ ಮಂತ್ರಿ ವರ್ಗದವರು ಮತ್ತು ಸೈನಿಕರು ಸೇರಿ ನೀವು ನಿಮ್ಮ ಘನತೆ, ಅಧಿಕಾರಕ್ಕೋಸ್ಕರ ಮಾಡುವ ಯುದ್ಧದಿಂದ ಎಷ್ಟೋ ಜನಗಳ ಜೀವ ಹೋಗುತ್ತದೆ ಅದಕ್ಕಿಂತ ನೀವಿಬ್ಬರೇ ದೃಷ್ಟಿ ಯುದ್ಧ, ಜಲ ಯುದ್ಧ ಮತ್ತು ಮಲ್ಲಯುದ್ಧದಂತಹ ದರ್ಮಯುದ್ದವನ್ನು ಮಾಡುವಂತೆ ವಿನಂತಿಸಿಕೊಂಡಾಗ ಇಬ್ಬರು ಒಪ್ಪಿ ಹಾಗೆ ಕಾದಾಡುತ್ತಾರೆ ಈ ಮೂರು ಯುದ್ಧದಲ್ಲಿಯೂ ಬಾಹುಬಲಿಯೇ ಗೆಲ್ಲುತ್ತಾನೆ. ಬಾವುಬಲಿ ಗೆದ್ದರು ಎಷ್ಟೋ ದೇಶಗಳನ್ನು ಗೆದ್ದು ಚಕ್ರಾಧಿಪತಿಯಾದ ನನ್ನಣ್ಣ ಭರತನನ್ನು ನಾನೇ ಸೋಲಿಸಿ ಅವನ ಮರ್ಯಾದೆಯನ್ನು ಮಣ್ಣು ಪಾಲು ಮಾಡಿ ಅವಮಾನ ಮಾಡಿದೆ ಎಂಬ ಪಾಪಪ್ರಜ್ಞೆ ಕಾಡಿ ನನಗೆ ಈ ಅಧಿಕಾರ ದಾಹ ಬೇಡ ಎಂದು ವೈರಾಗ್ಯದಿಂದ ಎಲ್ಲ ತೊರೆದು ತಪಸ್ಸನ್ನು ಮಾಡಲು ಹೋಗುತ್ತಾನೆ.
ಇಲ್ಲಿ ಭರತ ಬಾಹುಬಲಿಗೆ ಯುದ್ಧ ನಡೆಯುವಾಗ ಭರತನು ತಾನು ತಮ್ಮನಿಗೆ ಚಿಕ್ಕಂದಿನಲ್ಲಿ ಈಜು ಕಲಿಸುತ್ತಿದ್ದದ್ದನ್ನು ತನ್ನ ಸ್ಮೃತಿ ಪಟಲದಲ್ಲಿ ನೇನಪಿಸಿಕೊಳ್ಳುವಾಗ; ಮತ್ತು ಬಾವುಬಲಿಯು ಮಲ್ಲಯುದ್ಧದಲ್ಲಿ ಭರತನನ್ನು ಸೋಲಿಸಿ ತನ್ನ ಎರಡು ತೋಳಿನಿಂದ ಎತ್ತಿ ನೆಲಕ್ಕುರುಳಿಸಿ ಮುಷ್ಟಿಯಿಂದ ಗುದ್ಧಬೇಕೆಂದು ಕೈ ಎತ್ತಿದಾಗ; ಚಿಕ್ಕಂದಿನಲ್ಲಿ ಆಟವಾಡುವಾಗ ತಾನು ಬಿದ್ದು ಅಳುವಾಗ ಅಣ್ಣ ಭರತ ತನ್ನನ್ನು ಎತ್ತಿ ನೇವರಿಸಿ ಸಾಂತ್ವನ ಮಾಡಿದ ಆ ನೆನಪು ಮೂಡುತ್ತದೆ ಅಂತಹ ಎರಡು ದೃಶ್ಯವನ್ನು ಚಿಕ್ಕ ಮಕ್ಕಳ (ನಿರ್ದೇಶಕರ ಸ್ವಂತ ಮಕ್ಕಳು) ಮೂಲಕ ಮರು ಸೃಷ್ಟಿ ಮಾಡಿ ತೋರಿಸಿ ತಮ್ಮ ಕೈಚಳಕದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡುವಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ. ಈ ನಾಟಕವು ಹುಟ್ಟುತ್ತಾ ಅಣ್ಣ ತಮ್ಮ ಬೆಳೆಯುತ್ತಾ ದಾಯಾದಿ ಎಂಬ ಮತ್ತು ತ್ಯಾಗದಲ್ಲೂ ಸುಖವಿದೆ ಎಂಬ ಸಂದೇಶವನ್ನು ನೀಡುತ್ತದೆ. ಸುದ್ದಿ ಸಂಗ್ರಹ ವೆಂಕಟೇಶ ಹೆಚ್ ಚಿತ್ರದುರ್ಗ ನವದೆಹಲಿ.