ಚಂದ್ರವಳ್ಳಿ ನ್ಯೂಸ್, ಉತ್ತರ ಪ್ರದೇಶ :
ಶಿಕ್ಷಕನೊಬ್ಬ ಕೋಲಿನಿಂದ ಹೊಡೆದ ಕಾರಣ 6ನೇ ತರಗತಿಯ ವಿದ್ಯಾರ್ಥಿಯೊಬ್ಬ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿಯಲ್ಲಿ ನಡೆದಿದೆ.
ಶಿಕ್ಷಕನಿಂದ ಥಳಿತಕ್ಕೆ ಒಳಗಾಗಿದ್ದ ಆದಿತ್ಯ ಕುಶ್ವಾಹ ಎಂಬ ಮಗುವಿಗೆ ಎರಡು ಬಾರಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತಾದರೂ ಕಣ್ಣು ಚೇತರಿಸಿಕೊಂಡಿರಲಿಲ್ಲ. ಇದೀಗ ಆತನ ತಾಯಿ ನ್ಯಾಯಕ್ಕಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮೊರೆ ಹೋಗಿದ್ದಾಳೆ. ಶಿಕ್ಷಕ ಶೈಲೇಂದ್ರ ತಿವಾರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮಾರ್ಚ್ 9 ರಂದು ನಡೆದ ಘಟನೆಯನ್ನು ವಿವರಿಸಿದ ಮಗು, ಹೊರಗೆ ಆಡುತ್ತಿರುವ ಕೆಲವು ವಿದ್ಯಾರ್ಥಿಗಳನ್ನು ಕರೆಯಲು ಶಿಕ್ಷಕರು ಕೇಳಿದರು, ಅವರನ್ನು ಎಷ್ಟೇ ಕರೆದರೂ ಬರಲಿಲ್ಲ, ಈ ಬಗ್ಗೆ ಶಿಕ್ಷಕರಿಗೆ ತಿಳಿಸಿದೆ. ಅವರು ಸಿಟ್ಟಿಗೆದ್ದು ದೊಣ್ಣೆಯಿಂದ ಹೊಡೆದು, ನೋವಾದ ಮೇಲೆ ಟ್ರೀಟ್ ಮೆಂಟ್ ಗೆ ಕರೆದೊಯ್ದರು. ಐ ಡ್ರಾಪ್ಸ್ ಹಾಕಿ ಕ್ಲಾಸ್ ನಲ್ಲಿ ಮಲಗಿಸಿದರು. ನನ್ನ ಎಡಗಣ್ಣಿನಿಂದ ನೋಡಲಾಗುತ್ತಿಲ್ಲ ಎಂದು ಸಹಪಾಠಿಗಳು ನನ್ನ ತಾಯಿಗೆ ತಿಳಿಸಿದರು” ಎಂದು ಹೇಳಿದ್ದಾನೆ.
ಆದಿತ್ಯನ ತಾಯಿ ಶ್ರೀಮತಿ ಮಾತನಾಡಿ, ತನ್ನ ಮಗ ನೇವಾರಿ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯಾಗಿದ್ದಾನೆ. ಶಿಕ್ಷಕನು ಮಗನ ಮೇಲೆ ಕೋಲು ಎಸೆದಿದ್ದಾರೆ. ಅದು ಅವನ ಕಣ್ಣಿಗೆ ಹೊಡೆದು ರಕ್ತಸ್ರಾವವಾಯಿತು. ನಾವು ಪೊಲೀಸ್ ಠಾಣೆಗೆ ಹೋದೆವು. ಆದರೆ, ಅವರು ದೂರು ದಾಖಲಿಸಿಕೊಳ್ಳಲಿಲ್ಲ. ಶಿಕ್ಷಣ ಇಲಾಖೆಯು ಮಧ್ಯಪ್ರವೇಶಿಸಿದ ನಂತರ ವಿಷಯದ ಬಗ್ಗೆ ತನಿಖೆ ನಡೆಸಲಾಯಿತು” ಎಂದು ಅವರು ಹೇಳಿದರು.
ಏಪ್ರಿಲ್ 15 ರಂದು ಕಣ್ಣಿನ ಪರೀಕ್ಷೆಯು ಹಾನಿಯನ್ನು ಖಚಿತಪಡಿಸಿದೆ ಎಂದು ತಾಯಿ ಹೇಳಿದರು. ಮಗುವನ್ನು ಚಿತ್ರಕೂಟದ ಕಣ್ಣಿನ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಎರಡು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಆದರೆ, ಕಣ್ಣು ಉಳಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಮಧ್ಯೆ, ವಿಷಯವನ್ನು ಮುಚ್ಚಿಹಾಕಲು ಶಿಕ್ಷಕರು ಕುಟುಂಬಕ್ಕೆ 10 ಲಕ್ಷ ನೀಡಲು ಮುಂದಾಗಿದ್ದರು ಎನ್ನಲಾಗಿದ್ದು, ತಾಯಿಯು ಅದನ್ನು ನಿರಾಕರಿಸಿದರು.