ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
7.11 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್‌ನ ಲಾಡ್ಜ್ವೊಂದರಲ್ಲಿದ್ದ ನವೀನ್, ನೆಲ್ಸನ್ ಹಾಗೂ ರವಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಬಂಧಿತ ಆರೋಪಿಗಳಿಂದ 70 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಆ ಮೂಲಕ ಪ್ರಕರಣದಲ್ಲಿ ಒಟ್ಟು 7 ಜನರನ್ನು ಬಂಧಿಸಲಾಗಿದ್ದು ಇಲ್ಲಿಯವರೆಗೆ 6.45 ಕೋಟಿ ರೂ. ಹಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗೋವಿಂದಪುರ ಠಾಣೆ ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ್, ಸಿಎಂಎಸ್ ಕಂಪನಿ ಹಳೆ ಉದ್ಯೋಗಿ ಕ್ಸೇವಿಯರ್, ಸಿಎಂಎಸ್ ವಾಹನ ವಿಭಾಗದ ಮೇಲ್ವಿಚಾರಕ ಗೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು.
ನವೆಂಬರ್ 19ರಂದು ಮಧ್ಯಾಹ್ನ ನಗರದ ಹೃದಯಭಾಗದಲ್ಲೇ ಆರೋಪಿಗಳು ದರೋಡೆ ನಡೆಸಿ ಪರಾರಿಯಾಗಿದ್ದರು. ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದ ಬೆಂಗಳೂರು ಪೊಲೀಸರು ಕೇವಲ ಮೂರೇ ದಿನದಲ್ಲಿ ಮೂವರನ್ನು ಬಂಧಿಸಿ 5.76 ಕೋಟಿ ರೂಪಾಯಿ ವಶಕ್ಕೆ ಪಡೆದಿದ್ದರು. ಇದೀಗ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 6.45 ಕೋಟಿ ವಶಕ್ಕೆ ಪಡೆದಿದ್ದಾರೆ.
ಈ ಕೃತ್ಯದಲ್ಲಿ 8 ಜನರು ಶಾಮೀಲಾಗಿರುವ ಸಾಧ್ಯತೆಯಿದ್ದು ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

