ಚಂದ್ರವಳ್ಳಿ ನ್ಯೂಸ್, ಅಮರಾವತಿ (ಆಂಧ್ರಪ್ರದೇಶ):
ಭದ್ರತಾ ಪಡೆಗಳು ಮೋಸ್ಟ್ ವಾಂಟೆಡ್ ನಕ್ಸಲ್ ಮಾದ್ವಿ ಹಿದ್ಮಾ ಸೇರಿದಂತೆ 6 ಮಾವೋವಾದಿಗಳನ್ನು ಎನ್‌ಕೌಂಟರ್ ಮೂಲಕ ಹತ್ಯೆ ಮಾಡಿದ ಮರುದಿನವೇ ಮತ್ತೆ 7 ಮಂದಿ ನಕ್ಸಲರು ಎನ್ಕೌಂಟರ್ಗೆ ಬಲಿಯಾಗಿರುವ ಘಟನೆ ಆಂಧ್ರಪ್ರದೇಶದ ಮಾರೆಡುಮಿಲ್ಲಿಯಲ್ಲಿ ಜರುಗಿದೆ.
ಆಂಧ್ರಪ್ರದೇಶದ ಮಾರೆಡುಮಿಲ್ಲಿಯಲ್ಲಿ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಏಳು ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮಾರೇಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ನಡೆಸಲಾದ ಭದ್ರತಾ ಕಾರ್ಯಾಚರಣೆಯಲ್ಲಿ ಏಳು ಮಂದಿ ನಕ್ಸಲರು ಎನ್ಕೌಂಟರ್ಗೆ ಬಲಿಯಾಗಿದ್ದಾರೆ ಎಂದು ಎಪಿ ಇಂಟೆಲಿಜೆನ್ಸ್ ಎಡಿಜಿ ಮಹೇಶ್ ಚಂದ್ರ ಲಡ್ಡಾ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಮೃತ ನಕ್ಸಲರ ಪೈಕಿ ಮೂವರು ಮಹಿಳಾ ಮಾವೋವಾದಿಗಳು ಸೇರಿದ್ದಾರೆ. ಒಬ್ಬ ವ್ಯಕ್ತಿಯನ್ನು ಮೇತುರಿ ಜೋಖಾ ರಾವ್ ಅಲಿಯಾಸ್ ಶಂಕರ್ ಎಂದು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

