ಮೂಲ ಅಳತೆ ಬಿಟ್ಟು ರಸ್ತೆ ಅತಿಕ್ರಮಿಸಿದ್ದರೆ ಪರಿಹಾರ ನೀಡಲ್ಲ, ಕಾನೂನಾತ್ಮಕ ಕಟ್ಟಡಗಳಿಗೆ ಮಾತ್ರ ಪರಿಹಾರ- ಪೌರಾಯುಕ್ತ ವಾಸೀಂ
ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಟಿ.ಬಿ ಸರ್ಕಲ್ ನಿಂದ ಹುಳಿಯಾರು ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರದ ನಿಯಮಾನುಸಾರ ನಗರಸಭೆ ಅಗಲೀಕರಣ ಮಾಡುವುದಕ್ಕೆ ಮುನ್ನುಡಿ ಬರೆದಿದ್ದೆ ತಡ ಹಲವು ಒತ್ತುವರಿದಾರರು ಇನ್ನಿಲ್ಲದ ಒತ್ತಡಗಳನ್ನು ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ತರಲಾರಂಭಿಸಿದ್ದು ರಸ್ತೆ ಅಗಲೀಕರಣ ನೆನೆಗುದಿಗೆ ಬೀಳಲಿದೆ ಎನ್ನುವ ಮಾತುಗಳನ್ನು ಅಭಿವೃದ್ಧಿ ವಿರೋಧಿಗಳು ಹೇಳುತ್ತಿದ್ದು ರಸ್ತೆ ಅಗಲೀಕರಣ ಕಾಮಗಾರಿ ಸ್ಥಗಿತಗೊಳ್ಳಲಿದೆಯಾ ಎನ್ನುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.
ಆದರೆ ಇಂತಹ ಗೊಡ್ಡು ಬೆದರಿಕೆಗೆಲ್ಲ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಅಲಿಯಾಸ್ ಅಜ್ಜಪ್ಪ, ಪೌರಾಯುಕ್ತ ವಾಸೀಂ, ಉಪಾಧ್ಯಕ್ಷರು, ಇತರೆ ಸದಸ್ಯರು ಕೇರ್ ಮಾಡದೇ ರಸ್ತೆ ಅಗಲೀಕರಣ ಮಾಡಿಯೇ ತೀರುವುದಾಗಿ ಟೊಂಕ ಕಟ್ಟಿ ನಿಂತಿದ್ದಾರೆ.
ಮುಖ್ಯ ರಸ್ತೆ ಒತ್ತುವರಿ ಮಾಡಿ ಬೃಹತ್ ಕಟ್ಟಡ ನಿರ್ಮಿಸಿಕೊಂಡಿರುವಂತ ಒತ್ತುವರಿ ಕುಳಗಳಲ್ಲಿ ಆತಂಕ ಮನೆ ಮಾಡಿದೆ. ರಸ್ತೆ ಒತ್ತುವರಿ ಒಂದು ಕಡೆಯಾದರೆ ಸಾರ್ವಜನಿಕರು ಓಡಾಡುವ ರಸ್ತೆ, ಫುಟ್ ಪಾತ್ ಜಾಗವನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ, ವಾಹನ ಚಾಲಕರಿಗೆ, ಶಾಲಾ ಕಾಲೇಜ್ ಮಕ್ಕಳಿಗೆ, ವಯೋವೃದ್ಧರಿಗೆ ಇನ್ನಿಲ್ಲ ತೊಂದರೆಗಳನ್ನು ನೀಡಲಾಗುತ್ತಿದೆ.
ಸಾರ್ವಜನಿಕರು ಓಡಾಡುವ ರಸ್ತೆಗಳು ಮತ್ತು ಸಾರ್ವಜನಿಕ ಆಸ್ತಿಗಳ ಮೇಲಿನ ಅತಿಕ್ರಮಣಗಳನ್ನು ತೆರವುಗೊಳಿಸಲು ರಸ್ತೆ ಒತ್ತುವರಿ ಹಾಗೂ ಸಾರ್ವಜನಿಕ ಆಸ್ತಿ ಒತ್ತುವರಿ ಮಾಡಿಕೊಂಡಿರುವ ಕುರಿತು ಹಲವು ದೂರುಗಳು ಬಂದಿವೆ. ಮುಖ್ಯ ರಸ್ತೆ ಸಾಕಷ್ಟು ಒತ್ತುವರಿಯಾಗಿರುವುದರಿಂದ ಮುಖ್ಯ ರಸ್ತೆ ಕಿರಿದಾಗಿದ್ದು, ಪ್ರತಿನಿತ್ಯ ಟ್ರಾಫಿಕ್ ಜಾಮ್‌ಗೆ ಸಾಕ್ಷಿಯಾಗುತ್ತಿದೆ. ಜನದಟ್ಟಣೆಯಿಂದಾಗಿ ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ರಸ್ತೆಯಲ್ಲಿ ಓಡಿಸಲಾಗುತ್ತಿಲ್ಲ. ರಸ್ತೆ ಒತ್ತುವರಿ ಕಟ್ಟಡಗಳನ್ನು ತೆರವು ಮಾಡುವಂತೆ ಜನಪರ ಸಂಘಟನೆಗಳು ಹಲವು ಸಲ ಪ್ರತಿಭಟನೆ ಮಾಡಿವೆ. ಹಾಗಾಗಿ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅನುಕೂಲವಾಗುವಂತೆ ನಗರಸಭೆ ಈಗಾಗಲೇ ರಸ್ತೆ ಒತ್ತುವರಿ ತೆರವುಗೊಳಿಸಿ ರಸ್ತೆ ವಿಸ್ತರಿಸಿ ಅಭಿವೃದ್ಧಿ ಪಡೆಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರದಿಂದ ಒಪ್ಪಿಗೆ ಪಡೆದಿದ್ದು ಅನುದಾನವು ಲಭ್ಯವಿದೆ.
ಮೂರು ಹಂತದಲ್ಲಿ ರಸ್ತೆ ಅಗಲೀಕರಣ-
ಈಗಾಗಲೇ ರಸ್ತೆ ಅಗಲೀಕರಣಕ್ಕೆ ನಗರಸಭೆ ಮುಂದಾಗಿದ್ದು ಮೂರು ಹಂತಗಳಲ್ಲಿ ರಸ್ತೆ ಅಗಲೀಕರಣ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಟಿ.ಬಿ ವೃತ್ತದಿಂದ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಸಮೀಪದ ಸಾಗರರೆಡ್ಡಿ ಹೋಟೆಲ್ ತನಕ ವೇಗವಾಗಿ ಕಾಮಗಾರಿ ಮಾಡಲಾಗುತ್ತಿದೆ. ಈ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
2ನೇ ಹಂತದ ಕಾಮಗಾರಿ ಸಾಗರರೆಡ್ಡಿ ಹೋಟೆಲ್ ನಿಂದ ಆರಂಭವಾಗಿ ಗಾಂಧಿ ವೃತ್ತದ ತನಕ ನಡೆಯಲಿದೆ. ಈ ಕಾಮಗಾರಿ ಕೂಡ ಮುಂದಿನ ಮೂರ್ನಾಲ್ಕು ತಿಂಗಳೊಳಗೆ ಮುಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇನ್ನೂ 3ನೇ ಹಂತದ ರಸ್ತೆ ಅಗಲೀಕರಣವು ಗಾಂಧಿ ವೃತ್ತದಿಂದ ಹುಳಿಯಾರ್ ರಸ್ತೆಯಲ್ಲಿ ನಡೆಯಲಿದೆ.
ಇದು ರಾಷ್ಟ್ರೀಯ ಹೆದ್ದಾರಿ-
ಬೀದರ್-ಶ್ರೀರಂಗಪಟ್ಟಣ ಮಾರ್ಗವು ರಾಷ್ಟ್ರೀಯ ಹೆದ್ದಾರಿಯಾಗಿದ್ದು ಹೆದ್ದಾರಿ ನಿಯಮಾನುಸಾರ ರಸ್ತೆ ಮಧ್ಯಭಾಗದಿಂದ 21 ಮೀಟರ್ ಅಥವಾ 70 ಅಡಿವರೆಗೆ ರಸ್ತೆಯ ಎರಡು ಬದಿಯಲ್ಲಿ ಅಗಲೀಕರಣ ಮಾಡಲಾಗುತ್ತದೆ. ಹೆದ್ದಾರಿ ನಿಯಮಗಳನ್ನು ಪಾಲಿಸಲೇಬೇಕಾಗಿದೆ. ಹಾಗಾಗಿ ರಸ್ತೆ ಅಗಲೀಕರಣ ಕಾರ್ಯ ಯಾವುದೇ ಕಾರಣಕ್ಕೂ ಸ್ಥಗಿತ ಮಾಡಲು ಸಾಧ್ಯವಿಲ್ಲ. ರಸ್ತೆ ಅಗಲೀಕರಣ ಕಾಮಗಾರಿ ಸ್ಥಗಿತ ಆಗಲಿದೆ ಎಂದು ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.
ಸುಪ್ರೀಂ ಕೋರ್ಟ್ ಏನು ಹೇಳುತ್ತದೆ?
ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗ, ಜಲ ಮೂಲ ಅಥವಾ ರೈಲ್ವೆ ಹಳಿಯ ಬಳಿ ಯಾವುದೇ ರೀತಿಯ ಒತ್ತುವರಿ ಇರಬಾರದು. ಯಾವುದೇ ಧಾರ್ಮಿಕ ಸಂಸ್ಥೆ ಅದನ್ನು ಒತ್ತುವರಿ ಮಾಡಿಕೊಂಡಿದ್ದರೂ ತೆರವು ಮಾಡಬೇಕೆಂಬ ಮಹತ್ವದ ಅಭಿಪ್ರಾಯವನ್ನು ಸುಪ್ರೀಂಕೋರ್ಟ್‌ವ್ಯಕ್ತಪಡಿಸಿದೆ.
ಭಾರತ ಜಾತ್ಯತೀತ ದೇಶ. ಹೀಗಾಗಿ ಇಂತಹ ಒತ್ತುವರಿಗಳನ್ನು ತೆರವುಗೊಳಿಸುವ ಸಂಬಂಧ ನೀಡುವ ಆದೇಶ ಯಾವುದೇ ಧರ್ಮ ಎಂದು ಪ್ರತ್ಯೇಕಿಸದೆ ಎಲ್ಲ ನಾಗರಿಕರಿಗೂ ಅನ್ವಯವಾಗುತ್ತದೆ. ರಸ್ತೆ ಮಧ್ಯೆ ಯಾವುದೇ ಧಾರ್ಮಿಕ ಕಟ್ಟಡ ಇರಬಾರದು. ಗುರುದ್ವಾರ ಅಥವಾ ದರ್ಗಾ ಅಥವಾ ದೇಗುಲವೇ ಆಗಿರಬಹುದು. ಅದು ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಮಾಡಕೂಡದು. ಸಾರ್ವಜನಿಕರ ಸುರಕ್ಷತೆಯೇ ಪರಮಶ್ರೇಷ್ಠ. ಹೀಗಾಗಿ ಈ ಒತ್ತುವರಿ ತೆರವು ಸಂಬಂಧ ಮಾರ್ಗಸೂಚಿ ಹೊರಡಿಸುವುದಾಗಿ ತಿಳಿಸಿದ್ದು ಒತ್ತುವರಿ ಶೂರರಿಗೆ ಆತಂಕ ಶುರು ಆಗಿದೆ.
ಹಾಗಾಗಿ ಯಾರೊಬ್ಬರು ಕೋರ್ಟ್ ಮೆಟ್ಟಿಲು ಹೇರಿ ರಸ್ತೆ ಅಗಲೀಕರಣ ಅಥವಾ ಕಟ್ಟಡ ತೆರವು ಕಾರ್ಯಕ್ಕೆ ಕೋರ್ಟ್ ನಿಂದ ತಡೆಯಾಜ್ಞೆ ತರಲು ಪ್ರಸ್ತುತ ದಿನಗಳಲ್ಲಿ ಸಾಧ್ಯವೇ ಇಲ್ಲ. ಒಂದು ವೇಳೆ ಕೋರ್ಟ್ ತಡೆಯಾಜ್ಞೆ ನೀಡಿದರೂ ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ಅಭಿಪ್ರಾಯದಂತೆ ತಡೆಯಾಜ್ಞೆ ತೆರವುಗೊಳಿಸುವುದು ಬಲು ಸುಲಭ.
ಅಕ್ರಮ ಕಟ್ಟಡಗಳು-
ಸಾಗರ ರೆಡ್ಡಿ ಹೋಟೆಲ್ ನಿಂದ ಗಾಂಧಿ ವೃತ್ತದ ಮಾರ್ಗವಾಗಿ ಹುಳಿಯಾರ್ ರಸ್ತೆಯಲ್ಲಿ ನಿರ್ಮಾಣ ಮಾಡಲಾಗಿರುವ ಬಹುತೇಕ ಕಟ್ಟಡಗಳಿಗೆ ನಗರಸಭೆ ಅನುಮತಿ ನೀಡಿಲ್ಲ ಎನ್ನಲಾಗಿದೆ. ಆ ಎಲ್ಲ ಕಟ್ಟಡಗಳು ಅಕ್ರಮವಾಗಿ ತಲೆ ಎತ್ತಿವೆ. ಕಟ್ಟಡ ಮಾಲೀಕರು ನಗರಸಭೆಯಿಂದ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಿರುವುದರಿಂದ ತೆರವುಗೊಳಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಇಂತಹ ಒತ್ತುವರಿ ಕಟ್ಟಡಗಳನ್ನು ತೆರವುಗೊಳಿಸಲು ನೋಟಿಸ್ ನೀಡುವ ಅಗತ್ಯವೂ ಇಲ್ಲ, ಜೊತೆಗೆ ಯಾವುದೇ ಪರಿಹಾರ ಕೂಡ ಕಟ್ಟಡ ಮಾಲೀಕರಿಗೆ ನೀಡಲು ಬರುವುದಿಲ್ಲ.
ಮೂಲ ನಿವೇಶನ ಪತ್ರಗಳ ಅಳತೆಯಂತೆ ನಗರಸಭೆಯಲ್ಲಿ ಖಾತೆ ಮಾಡಿಸಿಕೊಂಡಿದ್ದು ರಸ್ತೆ ಜಾಗ ಒತ್ತುವರಿ ಮಾಡದೇ ಇದ್ದಾಗ, ರಸ್ತೆ ಅಗಲೀಕರಣಕ್ಕೆ ಅಂತಹ ನಿವೇಶನಗಳ ಜಾಗವನ್ನು ಭೂ ಸ್ವಾಧೀನ ಮಾಡಿಕೊಂಡರೆ ಮಾತ್ರ ಪರಿಹಾರ ನೀಡಬೇಕಾಗುತ್ತದೆ.
“ಮೂರು ಹಂತದಲ್ಲಿ ರಸ್ತೆ ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಯಾವ ಒತ್ತಡಗಳಿಗೂ ಬಗ್ಗುವುದಿಲ್ಲ. ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ರಸ್ತೆ ಅಗಲೀಕರಣ ಮಾಡುವುದು ಶತಃಸಿದ್ಧ.
ನಗರದಲ್ಲಿ ಹಾದು ಹೋಗಿರುವ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದೆ. ಹೆದ್ದಾರಿ ಮಾರ್ಗಸೂಚಿ ಪ್ರಕಾರವೇ ನಗರ ವ್ಯಾಪ್ತಿಯಲ್ಲಿ ಮಧ್ಯ ರಸ್ತೆಯಿಂದ ಎರಡು ಬದಿಯಲ್ಲಿ ತಲಾ 70 ಅಡಿ ಜಾಗ ಬಿಟ್ಟು ಕಟ್ಟಡ ಕಟ್ಟಲು ಮೊದಲಿನಿಂದಲೂ ಆದೇಶವಿದೆ. ಅಲ್ಲದೆ ನಗರಸಭೆ ಇಂದಿಗೂ ಕಟ್ಟಡ ಮಾಲೀಕರಿಗೆ ಕಟ್ಟಡ ನಿರ್ಮಿಸಲು ಅನುಮತಿ ನೀಡಿಲ್ಲ. ಯಾರ ಬಳಿಯೂ ಕಟ್ಟಡ ಪರವಾನಗಿ ಇಲ್ಲ. ರಸ್ತೆ ಅಗಲೀಕರಣ ಸಂಬಂಧ ಕೋರ್ಟ್ ಯಾವುದೇ ತಡೆಯಾಜ್ಞೆ ಕೊಟ್ಟಿಲ್ಲ. ಒಂದು ವೇಳೆ ತಡೆಯಾಜ್ಞೆ ಕೊಟ್ಟರೂ ಸುಪ್ರೀಂ ಕೋರ್ಟ್ ಈಚೇಗೆ ತಿಳಿಸಿರುವಂತೆ ಕಾನೂನಾತ್ಮಕವಾಗಿ ತೆರವುಗೊಳಿಸಿ ಕೆಲಸ ನಿರ್ವಹಿಸಲಾಗುತ್ತದೆ.
”ಅಜಯ್ ಕುಮಾರ್, ಅಧ್ಯಕ್ಷರು, ನಗರಸಭೆ, ಹಿರಿಯೂರು.
“ನಗರದ ಮುಖ್ಯ ರಸ್ತೆ ಅಗಲೀಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ನಗರಸಭೆ ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರ ಸಹಕಾರವಿದೆ. ಜೊತೆಗೆ ವಿವಿಧ ಸಂಘಟನೆಗಳು, ಸಾರ್ವಜನಿಕರು, ವಕೀಲರು ಸಹಮತ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ರಸ್ತೆ ಅಗಲೀಕರಣಕ್ಕೆ ನ್ಯಾಯಲಯವು ನೀಡುವಂತ ಆದೇಶ ತೀರ್ಪಿಗೆ ತಲೆ ಬಾಗಿ ಕಾಮಗಾರಿ ಮಾಡಲಾಗುತ್ತದೆ.
ಟಿಬಿ ವೃತ್ತದಿಂದ ಚರಂಡಿ ಕಾಮಗಾರಿ ಆರಂಭಿಸಲಾಗಿದೆ. ಹೆದ್ದಾರಿ ನಿಮಯಾನುಸಾರ ಕಟ್ಟಡಗಳು ಕಾನೂನು ಪ್ರಕಾರವಾಗಿದ್ದರೆ ಪರಿಹಾರ ಕೊಡಲಾಗುತ್ತದೆ. ಮೂಲ ಅಳತೆ ಧಿಕ್ಕರಿಸಿ ಕಟ್ಟಡ ನಿರ್ಮಿಸಿದ್ದರೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ. ಜೊತೆಗೆ ಕಟ್ಟಡ ತೆರವು ವೆಚ್ಚವನ್ನು ಅತಿಕ್ರಮದಾರರೇ ನೀಡಬೇಕಾಗುತ್ತದೆ. ನಗರೋತ್ಥಾನ ಯೋಜನೆ ಅಡಿಯಲ್ಲಿ ಅನುದಾನ ಲಭ್ಯವಿದ್ದು ಕಾಮಗಾರಿಯನ್ನು ಮೂರು ಹಂತದಲ್ಲಿ ವೇಗವಾಗಿ ನಡೆಯಲಿದೆ”.
ವಾಸೀಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.
“ಕಟ್ಟಡ ಮಾಲೀಕರು 50 ಮೀಟರ್ ಅಗಲೀಕರಣ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಆದರೆ ಭವಿಷ್ಯದ ದೃಷ್ಠಿಯಿಂದ ಕಡ್ಡಾಯವಾಗಿ ಎಡ ಮತ್ತು ಬಲ ಬದಿಯಲ್ಲಿ 70 ಅಡಿ ರಸ್ತೆಯನ್ನು ಕಡ್ಡಾಯವಾಗಿ ಅಗಲೀಕರಣ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಒತ್ತಡಗಳಿಗೆ ಮಣಿಯುದಿಲ್ಲ.
ನಗರ ಜನಸಂಖ್ಯೆ ಲಕ್ಷಕ್ಕೆ ಮುಟ್ಟುತ್ತಿದೆ. ಈಗಲೇ ಸಾಕಷ್ಟು ಸಮಸ್ಯೆ ಆಗುತ್ತಿದ್ದು ಭವಿಷ್ಯದಲ್ಲಿ ಜನರು ಶಾಪ ಹಾಕಲಿದ್ದಾರೆ. ಹಾಗಾಗಿ ಮುಲಾಜಿಲ್ಲದೆ ರಸ್ತೆ ಅಗಲೀಕರಣ ಮಾಡಲಾಗುತ್ತದೆ”. ಡಿ.ಸುಧಾಕರ್, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯೂರು.