ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರಿನ ಸಿದ್ದಗಂಗಾ ಮಠದಲ್ಲಿಂದು ಜರುಗಿದ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿಗಳು, ಪರಮಪೂಜ್ಯರಾದ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವದಲ್ಲಿ ಗೌರವಾನ್ವಿತ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರೊಂದಿಗೆ ಕೇಂದ್ರ ಸಚಿವ ಸೋಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.
ಸಿದ್ಧಗಂಗಾ ಮಠದಲ್ಲಿ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಗಳ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ವೈಶಿಷ್ಟ್ಯಪೂರ್ಣವಾಗಿ ಜರುಗಿತ್ತು.
ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಗದ್ದುಗೆ ದರ್ಶನ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಕಲಾವಿದ ಮನು ಅವರು ತೆಂಗಿನ ಗರಿಗಳಿಂದ ರಚಿಸಿದ ಶಿವಕುಮಾರ ಸ್ವಾಮೀಜಿಗಳ ಸುಂದರ ಕಲಾಕೃತಿಯು ಗಮನ ಸೆಳೆದಿದೆ.
ಈ ಕಲಾಕೃತಿ, ಸಂಪೂರ್ಣವಾಗಿ ತೆಂಗಿನ ಗರಿಗಳನ್ನು ಬಳಸಿ ತಯಾರಿಸಲಾಗಿದ್ದು, ಇದರ ನಿರ್ಮಾಣಕ್ಕೆ ಎಂಟು ತೆಂಗಿನ ಗರಿಗಳು ಬಳಕೆಯಾಗಿವೆ. ಕಲಾವಿದ ಮನು ಮತ್ತು ಅವರ ಟೀಮ್ ಗಜಸೇನಾ ಕಲಾವಿದರು ಸತತ 48 ಗಂಟೆಗಳ ಕಾಲ ಶ್ರಮವಹಿಸಿ ಈ ಮೂರ್ತಿಯನ್ನು ರೂಪಿಸಿದ್ದಾರೆ.
ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹಾಗೂ ಸದ್ಗುರು ಶ್ರೀ ಮಧುಸೂದನ ಸಾಯಿಯವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು.

ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಚಿವ ಡಾ.ಬಿ. ಪರಮೇಶ್ವರ್, ಶಾಸಕರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ, ಸಂಸದ ಗೋವಿಂದ ಕಾರಜೋಳ, ಸಂಸದ ಡಾ. ಸಿ.ಎನ್ ಮಂಜುನಾಥ್, ಶಾಸಕರಾದ ಬಿ. ಸುರೇಶ್ ಗೌಡ, ಜಿ.ಬಿ ಜ್ಯೋತಿ ಗಣೇಶ್ ಅವರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

