ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು :
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 30 ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಆಯೋಜಿಸಿ ಖಾಸಗಿ ಶಾಲೆಗಳಿಗೆ ಸವಾಲು ಹಾಕಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಶಾಲೆ ಅಂದ್ರೆ ಅಸಡ್ಡೆ ತೋರುವವರೇ ಹೆಚ್ಚು. ಹೀಗಾಗಿ, ಮಲೆನಾಡ ಇತಿಹಾಸದಲ್ಲಿ ಸರ್ಕಾರಿ ಶಾಲೆಯೊಂದು ಹೈಟೆಕ್ ಆಗಿ ವಿಮಾನದಲ್ಲಿ ಪ್ರವಾಸ ಹೊರಟು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶೈಕ್ಷಣಿಕ ಸಾಧನೆ ಮಾಡುತ್ತಿದ್ದಾರೆ ಹಾಗೂ ಸೌಲಭ್ಯಗಳ ಮೂಲಕ ಖಾಸಗಿ ಶಾಲೆಗಳಿಗೆ ಸವಾಲು ಹಾಕುವ ಕಾರ್ಯ ಮಾಡಿ ಗಮನ ಸೆಳೆದಿದೆ.
ಖಾಸಗಿ ಶಾಲೆಗಳಲ್ಲಿ ದೊರೆಯುವ ಎಲ್ಲ ರೀತಿಯ ಗುಣಮಟ್ಟದ ಶಿಕ್ಷಣ, ಶೈಕ್ಷಣಿಕ ಸೌಲಭ್ಯಗಳು ಸೇರಿದಂತೆ ಶೈಕ್ಷಣಿಕ ವಾತಾವರಣವನ್ನು ಈ ಸರ್ಕಾರಿ ಶಾಲೆಯಲ್ಲೇ ಒದಗಿಸಲಾಗುತ್ತಿದೆ. ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಇದೇ ಮೊದಲ ಬಾರಿಗೆ ವಿಮಾನ ಪ್ರಯಾಣದ ಅವಕಾಶ ದೊರಕಿರುವುದು ವಿಶೇಷವಾಗಿದೆ.
ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸುವಲ್ಲಿ ಸ್ಥಳೀಯ ಗ್ರಾಮ ಪಂಚಾಯತ್, ಎಸ್‍ಡಿಎಂಸಿ ಸದಸ್ಯರು, ದಾನಿಗಳು ಹಾಗೂ ಶಾಲಾ ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಸಹಕಾರ ಮತ್ತು ಸಮರ್ಪಿತ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇತ್ತೀಚಿಗೆ ಪ್ರವಾಸಕ್ಕೆ ಹೊರಟಿದ್ದ ಶಾಲಾ ಮಕ್ಕಳ ಸಂತಸಕ್ಕೆ ಮಿತಿಯೇ ಇರಲಿಲ್ಲ. ವಿಮಾನ ಪ್ರಯಾಣದ ಅನುಭವವು ಮಕ್ಕಳಲ್ಲಿ ಹೊಸ ಉತ್ಸಾಹ, ಆತ್ಮವಿಶ್ವಾಸ ಹಾಗೂ ಭವಿಷ್ಯದ ಕನಸುಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟು 30 ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದಾರೆ. ಚಿಕ್ಕಮಗಳೂರಿನಿಂದ ಕಳೆದ ಜನವರಿ-7ರಂದು ಬುಧವಾರ ಶಿವಮೊಗ್ಗಕ್ಕೆ ಬಸ್ನಲ್ಲಿ ತೆರಳಿ ಅಲ್ಲಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಮಾಡಿದ್ದಾರೆ. ಶಾಲಾ ಎಸ್‍ಡಿಎಂಸಿ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಈ ಪ್ರವಾಸ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ವಿಧಾನಸೌಧ, ವಿಮಾನ ನಿಲ್ದಾಣವನ್ನು ತೋರಿಸಿ ಅಲ್ಲಿಂದ ಬಸ್ನ ಮೂಲಕ ಚಿಕ್ಕಮಗಳೂರಿಗೆ ವಾಪಸ್ ಆಗಿದ್ದಾರೆ.
ಮಾದರಿ ಶಾಲೆಯಾಗಿ ಹೊರಹೊಮ್ಮಿದೆ:
ಮುದ್ರೆ ಮನೆ ಕಾಫಿ ಕ್ಯೂರಿಂಗ್ ಮಾಲೀಕ ಬಿ. ಎಸ್. ಸಂತೋಷ್ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ಈಗ ಶಾಲೆ ಇಡೀ ರಾಜ್ಯವೇ ಹೆಮ್ಮೆಪಡುವಂತೆ ಮಾದರಿಯಾಗಿ ಹೊರಹೊಮ್ಮಿದೆ.
ಮುತ್ತಿಗೆಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಾವುದೇ ಹೈಟೆಕ್ ಖಾಸಗಿ ಶಾಲೆಗೆ ಕಮ್ಮಿ ಇಲ್ಲದಂತೆ ರೂಪಾಂತರಗೊಂಡಿದೆ. ಮಕ್ಕಳು ಸಹ ಹೆಚ್ಚಿನ ಸಾಧನೆ ಮಾಡುತ್ತಿದ್ದು ಈ ಸರ್ಕಾರಿ ಶಾಲೆಗಳ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

