ಸಮರ್ಪಕವಾಗಿ ಪಕ್ಷ ಸಂಘಟನೆ ಮಾಡಿದರೆ ಎಂತಹ ಚುನಾವಣೆಯನ್ನಾದರೂ ಗೆಲ್ಲಬಹುದು-ಕೃಷ್ಣಾ ರೆಡ್ಡಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಷ್ಠಾವಂತ ಕಾರ್ಯಕರ್ತರಿದ್ದರೆ ಚುನಾವಣೆಗೆಳು ಯಾವುದೇ ಇರಲಿ ಗೆಲ್ಲುವುದು ಕಷ್ಟವಲ್ಲ. ಈ ದಿಸೆಯಲ್ಲಿ ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ರಾಜ್ಯ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.

ನಗರದ ಒಕ್ಕಲಿಗರ ಭವನದಲ್ಲಿ ಜೆಡಿಎಸ್ ವತಿಯಿಂದ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೃಷ್ಣಾರೆಡ್ಡಿ ದೊಡ್ಡಬಳ್ಳಾಪುರದಲ್ಲಿ 60 ರಿಂದ 70 ಸಾವಿರ ಮತ ಪಡೆಯುತ್ತಿದ್ದ ಪಕ್ಷ, ಕಾರ್ಯಕರ್ತರ ಸಭೆಯಲ್ಲಿ 500 ಜನರೂ ಸಹ ಸೇರದೇ ಇರುವುದು ನೋವಿನ ಸಂಗತಿ. ರಾಜ್ಯದ ಚುನಾವಣೆಯಲ್ಲಿ ಒಟ್ಟು ಮತದಾರರ ಪೈಕಿ ಶೇ. 6 ರಷ್ಟು ಮತ ಪಕ್ಷದ ಚಿಹ್ನೆಗೆ ಬಿದ್ದರೆ ಮಾತ್ರ ಚಿಹ್ನೆ ಉಳಿಸಿಕೊಳ್ಳಲು ಸಾಧ್ಯ.

- Advertisement - 

ಪಕ್ಷ ಕಟ್ಟುವಾಗ ದೇವೇಗೌಡರ ಶ್ರಮ ಸದಾ ನೆನೆಯಬೇಕು.ದೇವೆಗೌಡರು ಪ್ರಧಾನಿಯಾದ ಸಂದರ್ಭದಲ್ಲಿ ರಾಜ್ಯಕ್ಕೆ ಅನೇಕ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ 20 ತಿಂಗಳ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಜನಪರ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಇಂದಿಗೂ ಉಳಿದಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಪಕ್ಷಕ್ಕೆ ಅವಕಾಶ ಸಿಗಬೇಕಾದರೆ ಸಾರ್ವಜನಿಕ ವಲಯದಲ್ಲಿ ಜೆಡಿಎಸ್ ಬಲವಾಗಿದೆ ಎನ್ನುವ ಅಭಿಪ್ರಾಯ ಮೂಡಿಸಬೇಕು. ಪಕ್ಷದಲ್ಲಿ ಗುಂಪುಗಾರಿಕೆ, ಒಳಜಗಳ ಬಿಡಬೇಕು. ನಮ್ಮ ಪಕ್ಷ  ಗೆಲ್ಲಲು ನಿರಂತರವಾಗಿ ಪ್ರಯತ್ನಗಳನ್ನು ಮಾಡಬೇಕು. ನಮ್ಮಲ್ಲಿ ಗುರಿ ಇರಬೇಕು. ಸಂಘಟನೆಯಿಂದ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ. ಪ್ರಬಲವಾಗಿ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು.

- Advertisement - 

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿ ಮಾತನಾಡಿ ಪಕ್ಷ ಸಂಘಟನೆಗಾಗಿ ನಡೆಯುತ್ತಿರುವ ಈ ಸಭೆ ಉತ್ತಮ ಬೆಳವಣಿಗೆಯಾಗಿದೆ. ಆದರೆ ಈಗ ಕಾರ್ಯಕರ್ತರಿಗೆ ಮೈತ್ರಿ ವಿಚಾರ ಗೊಂದಲವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಆಗಲಿದೆ ಎಂದು ಕಾರ್ಯಕರ್ತರು ಸಕ್ರಿಯವಾಗುತ್ತಿಲ್ಲ. ಟಿಎಪಿಎಂಸಿಎಸ್, ಬಾಶೆಟ್ಟಿಹಳ್ಳಿ ಚುನಾವಣೆಗಳಲ್ಲಿಯೂ ಸಹ ಪಕ್ಷ ಹಿನ್ನಡೆ ಅನುಭವಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ.ಹೆಚ್.ಜಿ.ವಿಜಯಕುಮಾರ್ ಮಾತನಾಡಿ ಸಾಲು ಸಾಲು ಚುನಾವಣೆಗಳು ಎದುರಾಗುತ್ತಿದ್ದು ಪಕ್ಷ ಬಲಿಷ್ಠವಾಗಿದ್ದು, ಸಂಘಟನೆ ಬೇಕಿದೆ. ಮುಂದೆ ಹೊಸ ಮುಖಂಡರಿಗೆ ಜವಾಬ್ದಾರಿ ನೀಡಿ ಬೂತ್ ಮಟ್ಟದಿಂದ ಪಕ್ಷವನ್ನು ಸದೃಢವಾಗಿಸಬೇಕು ಎಂದರು.

ರಾಜ್ಯ ಜೆಡಿಎಸ್ ಕಾರ್ಯದರ್ಶಿ ಹರೀಶ ಗೌಡ ಮಾತನಾಡಿ ಹಲವಾರು ವರ್ಷಗಳ ಕಾಲ ಪಕ್ಷದಲ್ಲಿ ಗುರುತಿಸಿ ಕೊಂಡು ಪಕ್ಷಕ್ಕಾಗಿ ದುಡಿದವರನ್ನ ಕಡೆಗಣಿಸುವುದು ಸರಿಯಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಬೇಕು. ಮುನೇಗೌಡರು ಸೇರಿದಂತೆ ಹಲವಾರು ನಾಯಕರು ದೊಡ್ಡಬಳ್ಳಾಪುರ ದಲ್ಲಿ ಪಕ್ಷದ ಸಂಘಟನೆಗಾಗಿ ದುಡಿದಿದ್ದಾರೆ. ಹಲವು ಚುನಾವಣೆಗಳಲ್ಲಿ ಸ್ಪರ್ದಿಸಿ ಪರಾಭವ ಗೊಂಡಿದ್ದಾರೆ.

ಅಂತಹವರನ್ನು ಕೆಲವರು ವಿನಾಕಾರಣ ದೂಶಿಸುವುದು ಸರಿಯಲ್ಲ. ತಾಲೂಕಿನ ಎಲ್ಲಾ ಮುಖಂಡರು ಒಗ್ಗೂಡಿದರೆ ಮಾತ್ರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಬಹುದು. ಇದಕ್ಕಾಗಿ ರಾಜ್ಯ ವರಿಷ್ಟರು ಸಮರ್ಥರನ್ನು ಪರಿಗಣಿಸಬೇಕು. ಪ್ರತಿ ಬಾರಿಯೂ ಚುನಾವಣೆ ಹೊಸ್ತಿಲಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರಿಂದ ಪಕ್ಷಕ್ಕೆ ಹಿನ್ನಡೆ ಆಗುತ್ತಿದೆ. ಈ ಬಗ್ಗೆ ವರಿಷ್ಟರು ಸೂಕ್ತ ನಿರ್ಧಾರ ಪ್ರಕಟಿಸಬೇಕು ಎಂದರು.

ಜಿಲ್ಲಾಧ್ಯಕ್ಷ ಮುನೇಗೌಡ ಮಾತನಾಡಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಸಭೆ, ಲೋಕಸಭೆ ಚುನಾವಣೆಗೆ ಪಕ್ಷವನ್ನು ಬೂತ್ ಮಟ್ಟದಿಂದ ಸದೃಢಗೊಳಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಬೂತ್ ಕಮಿಟಿ ರಚಿಸಿ, ಬೂತ್‌ಗೆ ಇಬ್ಬರನ್ನು ನೇಮಕ ಹಾಗೂ  25 ಸದಸ್ಯರ ಸಮಿತಿ ರಚಿಸಿ ಸದೃಡಗೊಳಸಲಾಗುವುದು.

ಇಂದಿನ ಕಾರ್ಯಕರ್ತರ ಸಭೆಯ ಅಭಿಪ್ರಾಯಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು. ಅವರು ಮುಂದಿನ ತೀರ್ಮಾನ ಕೈ ಗೊಳ್ಳಲಿದ್ದಾರೆ ಎಂದು ಹೇಳಿದರು.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ನಡೆದ ಜೆಡಿಎಸ್ ಕೋರ್ ಕಮಿಟಿ ಅದ್ಯಕ್ಷರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಸಕ್ಕರೆ ಗೊಲ್ಲಹಳ್ಳಿಯ ಜೆಡಿಎಸ್ ಕಾರ್ಯಕರ್ತ ವೆಂಕಟೇಶ್ ಎಂಬುವರು ರಾಜ್ಯ ಅಧ್ಯಕ್ಷ ಕೃಷ್ಣಾರೆಡ್ಡಿ ಎದುರು ತಮ್ಮ ಆಕ್ರೋಶ ಹೊರ ಹಾಕಿದ್ದು ಕಂಡುಬಂತು.

ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ನನ್ನ ಹೃದಯದಲ್ಲಿದ್ದಾರೆ. ಆದರೆ,ಇಲ್ಲಿ ಸದಾ ಒಬ್ಬರ ಕಾಲು ಮತ್ತೊಬ್ಬರು ಎಳೆಯುವುದರಲ್ಲೇ ಮುಳುಗಿರುವ ಸ್ಥಳೀಯ ಜೆಡಿಎಸ್ ಮುಖಂಡರಿಂದಾಗಿ ಇಲ್ಲಿಯವರೆಗೂ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ನೇರವಾಗಿ ಆರೋಪ ಮಾಡಿದರು.

ತಾಲ್ಲೂಕಿನ ಜೆಡಿಎಸ್ ಮುಖಂಡರಿಗೆ ಪಕ್ಷ ಅಧಿಕಾರಕ್ಕೆ ಬರುವುದಕ್ಕಿಂತಲೂ ಅವರ ಸ್ವಯಂ ಪ್ರತಿಷ್ಠೆ ಮುಖ್ಯವಾಗಿದೆ. ಪಕ್ಷವನ್ನು ಅಧಿಕಾರಕ್ಕೆ ಬರದಂತೆ ಸೋಲಿಸುತ್ತಿರುವುದು ಬೇರೆ ಯಾರೂ ಅಲ್ಲ. ನಮ್ಮ ಪಕ್ಷದ ಮುಖಂಡರೇ. ಇಂಥವರನ್ನು ಪಕ್ಷದಿಂದ ಹೊರಹಾಕುವವರೆಗೂ ಪಕ್ಷ ಉದ್ಧಾರ ಆಗುವುದಿಲ್ಲಎಂದರು.

ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತರಿಗೆ ಇಲ್ಲಿಯವರೆಗೂ ಯಾವುದೇ  ಹುದ್ದೆ ನೀಡಿಲ್ಲ.ಸ್ಥಳೀಯ ಮುಖಂಡರ ವರ್ತನೆಯಿಂದ ಬೇಸರಗೊಂಡು ಪಕ್ಷದ ಶಾಲು ಕೆಳಗಿಟ್ಟು ಹೋಗುತ್ತಿದ್ದೇನೆಎಂದು ವೆಂಕಟೇಶ್ ಕಾರ್ಯಕರ್ತರ ಸಭೆಯಿಂದ ಹೊರನಡೆದರು.

ಕಾರ್ಯಕ್ರಮ ದಲ್ಲಿ ಚಿಕ್ಕಬಳ್ಳಾಪುರ ಘಟಕದ ಅಧ್ಯಕ್ಷ ಮುನಿಯಪ್ಪ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ದೇವರಾಜಮ್ಮ, ಯುವಘಟಕದ ಜಿಲ್ಲಾ ಅಧ್ಯಕ್ಷ ಸುನಿಲ್, ನಗರಸಭಾ ಉಪಾಧ್ಯಕ್ಷ ಎಂ.ಮಲ್ಲೇಶ್, ಸದಸ್ಯ ಟಿ.ಎನ್. ಪ್ರಭುದೇವ್, ಮುಖಂಡರಾದ ಚಿಕ್ಕರಾಮಕೃಷ್ಣಪ್ಪ, ನಾಗರಾಜ್, ಆರ್. ಕೆಂಪರಾಜು, ಅಂಜನಗೌಡ, ಪುಟ್ಟರಾಜು ಇದ್ದರು. ರಾಮಚಂದ್ರಪ್ಪ, ಶಿವಕುಮಾರ್ ಸೇರಿದಂತೆ ಜೆಡಿಎಸ್ ನ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Share This Article
error: Content is protected !!
";