ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಮೇಲೆ ಬುದ್ಧಿವಾದ ಹೇಳಿದ್ದಕ್ಕೆ ಹಲ್ಲೆಗೈದಿದ್ದ ಯುವತಿ ವಶಕ್ಕೆ ಪಡೆದಿರುವ ರಾಮಮೂರ್ತಿ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಿರಿಯ ಸಿಬ್ಬಂದಿ ಲಕ್ಷ್ಮಿನರಸಮ್ಮ ಅವರ ಮೇಲೆ ಹಲ್ಲೆಗೈದಿದ್ದ ಆರೋಪದಡಿ ಮೋಹಿನಿ ಎಂಬ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆ.ಆರ್. ಪುರಂ ರೈಲ್ವೆ ನಿಲ್ದಾಣ ಸರ್ಕಲ್‌ಬಳಿ ಜನವರಿ 10ರಂದು ಸಂಜೆ ಆರೋಪಿ ಯುವತಿ ಸುತ್ತಾಡುತ್ತಿದ್ದಳು. ಈ ವೇಳೆ ಆಕೆಯನ್ನು ಕೆಲ ಪುಂಡರು ರೇಗಿಸುತ್ತಿದ್ದುದನ್ನ ಲಕ್ಷ್ಮಿನರಸಮ್ಮ ಗಮನಿಸಿದ್ದರು.
ಯುವತಿಯ ಉಡುಪಿನ ಕುರಿತು ಕಿಡಿಗೇಡಿಗಳು ರೇಗಿಸುತ್ತಿದ್ದುದರಿಂದ ಆಕೆಗೆ ಬುದ್ಧಿವಾದ ಹೇಳಿದ್ದ ಲಕ್ಷ್ಮಿನರಸಮ್ಮ ಅವರು ಮನೆಗೆ ಹೋಗುವಂತೆ ಸೂಚಿಸಿದ್ದರು.
ಅಷ್ಟಕ್ಕೆ ರೊಚ್ಚಿಗೆದ್ದ ಆರೋಪಿ ನನಗೆ ಬುದ್ಧಿ ಹೇಳೋಕೆ ನೀನ್ಯಾರು? ಎನ್ನುತ್ತಾ ರಸ್ತೆಯಲ್ಲೇ ಲಕ್ಷ್ಮಿನರಸಮ್ಮ ಅವರನ್ನು ತಲೆಕೂದಲು ಹಿಡಿದು ಎಳೆದಾಡಿ, ರಕ್ತ ಬರುವಂತೆ ಥಳಿಸಿದ್ದಳು. ಆರೋಪಿಯ ಈ ಕೃತ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ರಾಮಮೂರ್ತಿ ನಗರ ಠಾಣೆ ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತಕ್ಷಣ ಕಾರ್ಯಪ್ರವೃತ್ತರಾಗಿ, ಹಲ್ಲೆ ನಡೆಸಿದ್ದ ಆರೋಪಿ ಮೋಹಿನಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

