ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದ್ವೇಷ ಭಾಷಣ, ಅಕ್ರಮ ವಲಸಿಗರಿಗೆ ಪುನರ್ವಸತಿ, ಬಳ್ಳಾರಿ ಗಲಾಟೆ ಪ್ರಕರಣ, ಕಾನೂನು ಸುವ್ಯವಸ್ಥೆ ವಿಚಾರಗಳ ಸಂಬಂಧ ರಾಜ್ಯ ಬಿಜೆಪಿ ನಿಯೋಗವು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು.
ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿತು.
ಕಾನೂನು ಸುವ್ಯವಸ್ಥೆ ವಿಚಾರ, ಬಳ್ಳಾರಿ ಪ್ರಕರಣ ಸಿಬಿಐಗೆ ವಹಿಸುವ ಬಗ್ಗೆ, ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ಹಾಗೂ ಅಕ್ರಮ ವಲಸಿಗರಿಗೆ ನಿಯಮಬಾಹಿರ ಪುನರ್ವಸತಿಗೆ ಬ್ರೇಕ್ ಹಾಕುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರಲ್ಲದೆ ದೂರು ಸಲ್ಲಿಕೆ ಮಾಡಿದರು.
ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿ, ರಾಜ್ಯಪಾಲರನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ರಾಜ್ಯದಲ್ಲಿ ಆಡಳಿತ ಕುಸಿದಿದೆ, ಗೂಂಡಾ ರಾಜ್ಯ, ಜಂಗಲ್ ರಾಜ್ ಆಗಿದೆ. ರಾಜ್ಯವನ್ನು ಗೂಂಡಾ ರಾಜ್ಯದಿಂದ ಕಾಪಾಡಿ ಅಂತ ಮನವಿ ಮಾಡಿದ್ದೇವೆ. ದ್ವೇಷ ಭಾಷಣ ಮಸೂದೆ ಬಗ್ಗೆ ಸರ್ಕಾರ ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಕೈಸನ್ನೆ, ಕಣ್ಣು ಮಿಟುಕಿಸಿದ್ರೂ, ಮಾತಾಡಿದ್ರೂ ಕೇಸ್ ಹಾಕುವ ಮಸೂದೆ ಇದು. ಈಮಸೂದೆಗೆ ಸಹಿ ಹಾಕಬೇಡಿ ಅಂತ ಮನವಿ ಮಾಡಿದ್ದೇವೆ ಎಂದು ಅಶೋಕ್ ತಿಳಿಸಿದರು.
ಜ.17ರಂದು ಸಮಾವೇಶ:
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯವರ ಮೇಲೆ ಗುಂಡಿನ ದಾಳಿ ಮಾಡಿರುವ ಕುರಿತು ಮತ್ತು ಈ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಹಲ್ಲೆ ಬಗ್ಗೆ ಗಮನಕ್ಕೆ ತಂದಿದ್ದೇವೆ. ಬಳ್ಳಾರಿಯಲ್ಲಿ ಇದೇ ತಿಂಗಳ 17 ಕ್ಕೆ ಬೃಹತ್ ಸಮಾವೇಶ ಮಾಡುತ್ತೇವೆ. ಕೇಸ್ ಹಳ್ಳ ಹಿಡಿಸಲು ಸರ್ಕಾರ ಹೊರಟಿದೆ. ಈ ಸರ್ಕಾರದಿಂದ ನ್ಯಾಯ ಸಿಗಲ್ಲ. ಈ ಪ್ರಕರಣ ಸಿಬಿಐಗೆ ಕೊಡಿ ಅಂತ ಮನವಿ ಮಾಡಿದ್ದೇವೆ ಎಂದು ಅಶೋಕ್ ಅವರು ತಿಳಿಸಿದರು.
ಕೋಗಿಲು ಅಕ್ರಮ ವಾಸಿಗಳ ವಿಚಾರ ಕುರಿತು ಸತ್ಯಶೋಧನೆ ಸಮಿತಿ ವರದಿ ಕೊಟ್ಟಿದೆ. ಹಿಂದೆ ಕೇರಳದ ಸಮಸ್ಯೆಗೆ ರಾಜ್ಯ ಸ್ಪಂದಿಸಿದೆ. ಬಾಂಗ್ಲಾದವರ ಪರ ಕೇರಳ ಸಿಎಂ ದನಿ ಎತ್ತಿದ್ದಾರೆ. ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇರಳದ ಕೈಗೊಂಬೆ ಆಗಿದೆ. ಕೇರಳದಲ್ಲಿ ಕನ್ನಡ ಭಾಷೆಗೆ ಅಪಮಾನ ಮಾಡಲಾಗಿದೆ. ಮಾತೃಭಾಷೆಗೆ ಅವಕಾಶ ಕೊಡದೇ ದಮನಕಾರಿ ನೀತಿ ಅನುಸರಿಸಿದೆ. ಇಲ್ಲಿನ ಸಿಎಂ ಒಂದು ಪತ್ರವಷ್ಟೇ ಬರೆದು ಸುಮ್ಮನಾಗಿದ್ದಾರೆ. ಸಿದ್ದರಾಮಯ್ಯಗೆ ಧಮ್ ಇಲ್ವಾ?. ಬುಲ್ಡೋಜರ್ ಸರ್ಕಾರ ಅಂದ್ರಲ್ಲ ಅವರು ನೀವೂ ಹಾಗೇ ಹೇಳಿ, ಧೈರ್ಯ ಇಲ್ವಾ ಎಂದು ಅಶೋಕ್ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿ:
ಜಿಬಿಎ ಚುನಾವಣೆಗೆ ಸುಪ್ರೀಂಕೋರ್ಟ್ ಆದೇಶ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್ ಅವರು, ನಾವೂ ಕೂಡಾ ಮೊದಲಿಂದಲೂ ಜಿಬಿಎ ಚುನಾವಣೆ ಮಾಡಿ ಅಂತನೇ ಹೇಳ್ತಾ ಬಂದಿದ್ದೇವೆ. ಈಗ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ರಸ್ತೆ ಗುಂಡಿಗಳ ಹಾವಳಿ, ಕಾನೂನು ಸುವ್ಯವಸ್ಥೆ ಬೆಂಗಳೂರಿನಲ್ಲಿ ಹದಗೆಟ್ಟಿದೆ. ನಾವು ಜಿಬಿಎ ಚುನಾವಣೆಗೆ ತಯಾರು ಇದ್ದೇವೆ. ಜಿಬಿಎ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ. ಮೈತ್ರಿ ಬಗ್ಗೆ ನಮ್ಮ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ವಿಪಕ್ಷ ನಾಯಕ ಅಶೋಕ್ ತಿಳಿಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾವು ಯಾವಾಗಲೂ ಜಿಬಿಎ ಚುನಾವಣೆಗೆ ರೆಡಿ ಇದ್ದೇವೆ. ಬೆಂಗಳೂರಲ್ಲಿ ಮಳೆ ಬಂದರೆ ಬೋಟ್ನಲ್ಲಿ ಹೋಗುವ ಪರಿಸ್ಥಿತಿ ಇತ್ತು. ಗುಂಡಿಗಳಲ್ಲಿ ಕಾಂಗ್ರೆಸ್ ಮುಚ್ಚುವ ಕಾಲ ಬಂದಿದೆ. ಗುಳಿಯಲ್ಲೇ ಕಾಂಗ್ರೆಸ್ ಅನ್ನು ಜನರು ಮುಚ್ಚುತ್ತಾರೆ. ಬಿಜೆಪಿ ಚುನಾವಣೆ ಎದುರಿಸಲು ಸಿದ್ಧವಿದೆ. ಬೆಂಗಳೂರನ್ನು ಕಾಂಗ್ರೆಸ್ ಹಾಳು ಮಾಡಿದೆ. ಕಾಂಗ್ರೆಸ್ ಬೋರ್ಡ್ಗೂ ಬರಲ್ಲ. ಜಿಬಿಎನಲ್ಲಿ ಬಿಜೆಪಿ ಗೆಲ್ಲೋದು ಗ್ಯಾರಂಟಿ ಎಂದರು.
ಶಾಸಕ ಎಸ್.ಆರ್.ವಿಶ್ವನಾಥ್ ಜಿಬಿಎ ಚುನಾವಣೆ ವಿಚಾರವಾಗಿ ಮಾತನಾಡಿ, ಸುಪ್ರೀಂ ಕೋರ್ಟ್ ಜೂನ್ 30ರೊಳಗೆ ಚುನಾವಣೆ ಮಾಡಲು ಹೇಳಿದೆ. ಜಿಬಿಎ ವಿಂಗಡಣೆಗೆ ನಾವು ವಿರೋಧ ಮಾಡಿದ್ದೆವು. ಕೋರ್ಟ್ ಆದೇಶದ ಮೇರೆಗೆ ಚುನಾವಣೆ ಮಾಡಬೇಕು. ನಾವು ಚುನಾವಣೆಗೆ ಸಿದ್ಧರಾಗಿದ್ದೇವೆ.
ಒಂದೇ ವಾರದಲ್ಲಿ ಚುನಾವಣೆ ಅಂದ್ರೂ ಬಿಜೆಪಿ ಸಿದ್ಧವಿದೆ. ಅವರಿಗೆ ಬೇಕಾದಂತೆ ವಾರ್ಡ್ ವಿಂಗಡಣೆ, ಮೀಸಲಾತಿ ನಿಗದಿ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಅವರು ಏನೇ ಮಾಡಿದ್ರೂ, ಬಿಜೆಪಿ ಜೆಡಿಎಸ್ ಮೈತ್ರಿಯೊಂದಿಗೆ ಗೆಲ್ಲಲಿದ್ದೇವೆ. ಐದಕ್ಕೆ ಐದೂ ಪಾಲಿಕೆಯಲ್ಲಿ ನಮ್ಮವರೇ ಮೇಯರ್ ಆಗ್ತಾರೆ ಎಂದು ವಿಶ್ವಾಸ ವಿಶ್ವನಾಥ್ ವ್ಯಕ್ತಪಡಿಸಿದ್ದಾರೆ.
ನಿಯೋಗದಲ್ಲಿ ಛಲವಾದಿ ನಾರಾಯಣ ಸ್ವಾಮಿ, ಗೋವಿಂದ ಕಾರಜೋಳ, ಎಸ್.ಆರ್. ವಿಶ್ವನಾಥ್, ಎನ್.ರವಿಕುಮಾರ್ ಸೇರಿ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

