ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮತ್ತೆ ಮಗುವಾಗಿ ತೂಗುಉಯ್ಯಾಲೆಯಲ್ಲಿ ಆಡುವ ಆಸೆ.
ನೆನ್ನೆಯ ಅಳುಕುಗಳಿಲ್ಲದೆ, ನಾಳೆಯ ಭಯವಿಲ್ಲದೆ,
ಈ ಕ್ಷಣವನ್ನು ನಿರ್ಲಿಪ್ತ ನಗುವಿನ ಸವಿಯುವ ಹಂಬಲ.
ಮೇಲೆ–ಕೆಳಗೆ ಸಾಗುವ ಉಯ್ಯಾಲೆಯಂತೆ
ಮನಸ್ಸು ಸಂತೋಷದಿಂದ ಮಿಡಿಯುವ ಆ ಭಾವನೆ.
ಜೀವನದಲ್ಲಿ ಎದುರಾಗುವ ಎಲ್ಲ ನೋವು–ನಲಿವಿನ ನಡುವೆ
ಒಂದು ಸಮತೋಲನವನ್ನು ಹುಡುಕುವ ಆಸೆ.
ಆ ತೂಗು ಉಯ್ಯಾಲೆಯಲ್ಲಿ ಕುಳಿತು,
ಕೆಂಪು–ಕಿತ್ತಳೆ–ನೇರಳೆ ಬಣ್ಣಗಳಲ್ಲಿ ಮಿಂದ ಆಕಾಶ,
ಸೂರ್ಯನು ತನ್ನ ಕೆಲಸ ಮುಗಿಸಿ
ಮನೆಗೆ ಮರಳುವ ಕ್ಷಣ ನೋಡುವ ಬಯಕೆ.
ಮತ್ತೆ ಅದೇ ಹುಮ್ಮಸಿನಿಂದ
ತನ್ನ ಕಿರಣಗಳನ್ನು ಚುಂಬುತ್ತಾ
ತನ್ನ ಗೂಡಿನಿಂದ ಹೊರಗೆ ಬರುವ
ಸೂರ್ಯನನ್ನು ನೋಡುವ ಆಸೆ.
ಹಕ್ಕಿಗಳ ಚಿಲಿಪಿಲಿ, ಆ ಅಲೆಗಳ ನಿರಂತರ ಸಪ್ಪಳ,
ನನ್ನ ಹೃದಯದ ಬಡಿತಕ್ಕೆ ತಾಳಮೇಳ ಹಾಕಿದಂತಿದೆ
ಇಂತಹ ನೈಸರ್ಗಿಕ ಸೌಂದರ್ಯದಲ್ಲಿ

ದೇಹ–ಮನ ಮರೆತುಹೋಗುವುದೇ ಅಲೌಕಿಕತೆಯಲ್ಲವೇ?
ಇದೆ ಧ್ಯಾನದ ಪರಿ ಅರ್ಥ ಅಲ್ಲವೇ?
ಕವಿತೆ: ಅನಿತಾ ವಿ.ಸಜ್ಜನ್, ವಿದ್ಯಾನಗರ, ಚಿತ್ರದುರ್ಗ.

