ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನರೇಗಾ ಉಳಿಸುವುದು ಸೇರಿದಂತೆ ರಾಜ್ಯದ ಹಲವು ವಿಷಯಗಳನ್ನು ಚರ್ಚಿಸಲು ಜನವರಿ 22 ರಿಂದ 31ರ ವರೆಗೆ ವಿಶೇಷ ಅಧಿವೇಶನ ನಡೆಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ವಿಶೇಷ ಕ್ಯಾಬಿನೆಟ್ ಸಭೆಯ ಬಳಿಕ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ ಜಂಟಿ ಅಧಿವೇಶನದಲ್ಲಿ ವಿಬಿಜಿ ರಾಮ್ ಜಿ ಕಾಯ್ದೆ 2025 ಸಮಾಜದ ಮೇಲೆ ಬೀರುವ ಪರಿಣಾಮಗಳ ಕುರಿತು ಚರ್ಚಿಸಿ ನಿರ್ಣಯಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರದಿಂದ ದ್ರೋಹ–
ವಿಧಾನಸೌಧದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ ಕೇಂದ್ರದಿಂದ ನರೇಗಾ ಯೋಜನೆ ಹೆಸರು ಬದಲಾವಣೆ ವಿಚಾರ ಸಂಬಂಧ ವಾಗ್ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೋಜನೆಯಡಿ ಹಿಂದೆ ಕೇಂದ್ರ ಶೇ.100 ಹಣ ಕೊಡ್ತಿತ್ತು. ಆದರೆ ಈಗ ಶೇ.40ರಷ್ಟು ಹಣವನ್ನು ರಾಜ್ಯವೇ ಕೊಡಬೇಕು. ಹೊಸ ಕಾಯ್ದೆ ಪ್ರಕಾರ ಕೇಂದ್ರ ಹೇಳಿದ ಕಡೆ ಕೆಲಸ ಮಾಡಬೇಕಿದ್ದು, ಬಡವರಿಗೆ ದ್ರೋಹ ಮಾಡಲಾಗ್ತಿದೆ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಅಲ್ಲದೆ ಬಿಜೆಪಿಗರು ನಕಲಿ ರಾಮನ ಭಕ್ತರಾಗಿದ್ದು, ಮತಕ್ಕಾಗಿ ರಾಮ ಅಂತಾರೆ. ಎಲ್ಲ ದೇವಸ್ಥಾನ ಕಟ್ಟಿದ್ದು ನಾವಾಗಿರುವ ಕಾರಣ ನಿಜವಾದ ರಾಮನ ಭಕ್ತರು ನಾವೇ. ಬಿಜೆಪಿಯವರು ನಕಲಿ ಹಿಂದೂಗಳು ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ನಾಯಕರು ವಿಬಿ ಜೀ ರಾಮ್ ಜೀ ಯೋಜನೆಗೆ ವಿರೋಧವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.
ಕಾಂಗ್ರೆಸ್‌ಅವಧಿಯಲ್ಲಿ ಮನರೇಗಾದಲ್ಲಿ 11 ಲಕ್ಷ ಕೋಟಿ ಭ್ರಷ್ಟಾಚಾರ ಆಗಿದೆ. ಅಕ್ರಮ, ವ್ಯಾಪಕ ಭ್ರಷ್ಟಾಚಾರ ತಡೆಯಲೆಂದೇ ಕೇಂದ್ರ ಸರ್ಕಾರ ʼವಿಬಿಜಿ ರಾಮ್ ಜಿ ಕಾಯ್ದೆʼ ಜಾರಿ ತಂದಿದೆ. ಆದರೆ, ಕಾಂಗ್ರೆಸ್‌ಗೆ ಇದೇ ದೊಡ್ಡ ಸಮಸ್ಯೆಯಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದರು.
ವಿಬಿಜಿ ರಾಮ್ ಜಿ ಕಾಯ್ದೆಯಲ್ಲಿ ಎಐ ತಂತ್ರಜ್ಞಾನ, ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಿದ್ದು, ಕೆಲಸದ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತಿದೆ. ಮನರೇಗಾದಲ್ಲಿ ಹಣ ಹೊಡೆಯುತ್ತಿದ್ದ ಕಾಂಗ್ರೆಸ್ ಮಧ್ಯವರ್ತಿಗಳಿಗೆ ಇದು ತಲೆನೋವಾಗಿ ಪರಿಣಮಿಸಿದ್ದು ವಿನಾ ವಿರೋಧಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.

