ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಪ್ರಯುಕ್ತ ನಿರಂತರ ಅನ್ನದಾಸೋಹ ಸಮಿತಿ ವತಿಯಿಂದ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ನಟ,ನಿರ್ಮಾಪಕ ಮತ್ತು ವಾಸ್ತು ತಜ್ಞರಾದ ವಾಸುರವರು ಆಗಮಿಸಿ ನೆರೆದಿದ್ದ ಎಲ್ಲರಿಗೂ ಎಳ್ಳು ಬೆಲ್ಲ ವಿತರಿಸಿ ಅನ್ನ ದಾನ ಮಾಡುವ ಮೂಲಕ ಶುಭ ಹಾರೈಸಿದರು.
ತಾಲೂಕಿನ ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅನ್ನದಾಸೋಹ ಕಾರ್ಯಕ್ರಮವು 2122 ನೇ ದಿನಕ್ಕೆ ಕಾಲಿಟ್ಟಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ದಾನಿಗಳಾದ ಎಚ್ ರಾಘವೇಂದ್ರ ಹಾಗೂ ಎಚ್ ಶಿವಕುಮಾರ್ ರವರ ಸಹಕಾರದೊಂದಿಗೆ ನಿರಂತರ ಅನ್ನದಾಸಾಹ ಸಮಿತಿಯಲ್ಲಿ ಸಂಕ್ರಾಂತಿ ಸಂಭ್ರಮ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಾಸುರವರು ಪ್ರತಿನಿತ್ಯ ಅನ್ನ ದಾನ ಮಾಡುವುದು ಸಾಮಾನ್ಯ ವಿಷಯವಲ್ಲ, ನಿರಂತರ ಅನ್ನದಾಸೋಹಕ್ಕಾಗಿ ದೃಢಸಂಕಲ್ಪ ತಾಳ್ಮೆ ಅತ್ಯವಶ್ಯಕವಾಗಿದೆ. ಕಳೆದ 2,122 ದಿನಗಳಿಂದ ನಿತ್ಯ ನಿರಂತರವಾಗಿ ಅನ್ನದಾಸೋಹ ನಡೆಸಿಕೊಂಡು ಬರುತ್ತಿರುವ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ. ಇಂತಹ ಉತ್ತಮ ಕಾರ್ಯಗಳು ಮತ್ತಷ್ಟು ಕೈಗೊಳ್ಳುವ ಶಕ್ತಿ ದೇವರು ಅವರಿಗೆ ನೀಡಲಿ ಎಂದು ಹಾರೈಸಿದರು.
ದೇಶಿಯ ಸಂಸ್ಕೃತಿ ಕಳೆದುಹೋಗುತ್ತಿರುವ ಇತ್ತೀಚಿನ ದಿನಗಳಲ್ಲಿ ಇಂತಹ ವೇದಿಕೆಗಳಲ್ಲಿ ಹಬ್ಬ ಆಚರಣೆಗಳನ್ನು ಮಾಡುವುದರಿಂದ ಒಂದೆಡೆ ಸಮಾಜಸೇವೆ ಆದರೆ ಸಂಸ್ಕೃತಿಯ ಉಳಿವಿಗೆ ಶ್ರಮಿಸಿದಂತಾಗುತ್ತದೆ. ಇಂದಿನ ಸಂಕ್ರಾಂತಿ ಹಬ್ಬದ ಆಚರಣೆ ಸಾರ್ಥಕತೆ ತಂದಿದೆ ಕಾರಣ ನಿರ್ಗತಿಕ ಕಡು ಬಡವರೊಂದಿಗೆ, ಹಸಿದವರೊಂದಿಗೆ ವಿಶೇಷವಾಗಿ ಅನ್ನದಾನ ಮಾಡುವ ಮೂಲಕ ಕಳೆದಿರುವುದು ಅರ್ಥಪೂರ್ಣವಾಗಿದೆ ಎಂದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ರಾಜ್ಯಾಧ್ಯಕ್ಷ ಎಚ್ ರಾಘವೇಂದ್ರ ಮಾತನಾಡಿ ಇಂದಿನ ಸಂಕ್ರಾಂತಿ ಸಂಭ್ರಮಕ್ಕೆ ನಟ ನಿರ್ಮಾಪಕರಾದ ವಾಸು ರವರು ಆಗಮಿಸಿರುವುದು ಸಂತಸ ತಂದಿದೆ. ಅವರ ಸರಳ ಸಜ್ಜನಿಕೆಯ ಸ್ವಭಾವ ನಮ್ಮೆಲ್ಲರಿಗೂ ಅಚ್ಚುಮೆಚ್ಚು ಇಂದು ನಮ್ಮೊಂದಿಗೆ ಅವರ ವಿಷಯ ಅಮೂಲ್ಯವಾದ ಕ್ಷಣಗಳನ್ನು ಕಳೆದಿದ್ದಾರೆ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಶುಭಾಶಯಗಳನ್ನು ಕೊರಿದ್ದಾರೆ ಇಂತಹ ಅವಕಾಶ ಕಲ್ಪಿಸಿಕೊಟ್ಟ ನಿರಂತರ ಅನ್ನದಾಸೋಹ ಸಮಿತಿಗೆ ನಾವು ಧನ್ಯವಾದಗಳು ಅರ್ಪಿಸುತ್ತೇವೆ ಎಂದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಚ್ ಶಿವಕುಮಾರ್ ಮಾತನಾಡಿ ಪ್ರತಿನಿತ್ಯ ನೂರಾರು ಕುಟುಂಬಗಳಿಗೆ ಈ ನಿರಂತರ ಅನ್ನದಾಸೋಹ ಆಸರೆಯಾಗಿದೆ ಎಂದರೆ ತಪ್ಪಾಗಲಾರದು. ಇಂತಹ ಬೃಹತ್ ಕಾರ್ಯಕ್ರಮದ ಜವಾಬ್ದಾರಿ ಹೊತ್ತು ನಿತ್ಯ ನಿರಂತರ ಶ್ರಮವಹಿಸಿ ಶ್ರದ್ದೆಯಿಂದ ನೆಡೆಸಿಕೊಂಡು ಬರುತ್ತಿರುವ ಮಲ್ಲೇಶ್ ರವರಿಗೆ ಶುಭ ವಾಗಲಿ ಎಂದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಚ್ ಶಿವಕುಮಾರ್, ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಾಗರಾಜು, ಸಮಾಜಸೇವಕರ ಸೆಲ್ವಂ, ಆರಕ್ಷಕ ಸಿಬ್ಬಂದಿ ಶ್ರೀನಿವಾಸಲು, ಯೋಗ ಕೃಷ್ಣಪ್ಪ, ಶಿವರಾಜ್ ಸೇರಿದಂತೆ ಹಲವರು ಹಾಜರಿದ್ದರು.

