ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಣರಾಜ್ಯೋತ್ಸವದ ಸಂಭ್ರಮದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಶಾಸಕರಾದ ಉದಯ್ ಗರುಡಾಚಾರ್ ಅವರೊಂದಿಗೆ ಈ ಸುಂದರ ಕಾರ್ಯಕ್ರಮವನ್ನು ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸಿದರು.
ಈ ಬಾರಿಯ ಪ್ರದರ್ಶನವು ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಮತ್ತು ಕೃತಿಗಳ “ತೇಜಸ್ವಿ ವಿಸ್ಮಯ” ಥೀಮ್ ಅಡಿಯಲ್ಲಿ ಮೂಡಿಬಂದಿದೆ.
ಕರ್ವಾಲೋ ಕಾದಂಬರಿಯ ಕಾಲ್ಪನಿಕ ಚಿತ್ರಣ, ಬಿಳಿಗಿರಿ ರಂಗನ ಬೆಟ್ಟದ ಹಳ್ಳಿ ಸೊಗಡು ಹಾಗೂ ನಂದಿಗಿರಿಧಾಮದಂತಹ ಅದ್ಭುತ ಕಲಾಕೃತಿಗಳು ಪ್ರಕೃತಿ ಪ್ರೇಮಿಗಳ ಮನಗೆಲ್ಲಲಿವೆ.
ಇಂದಿನಿಂದ ಜನವರಿ 26 ರವರೆಗೆ ನಡೆಯಲಿರುವ ಈ ಫಲಪುಷ್ಪ ಪ್ರದರ್ಶನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ, ಪ್ರಕೃತಿಯ ಈ ವಿಸ್ಮಯ ಕಣ್ತುಂಬಿಕೊಳ್ಳಿ ಎಂದು ಸಚಿವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ಸೇರಿದಂತೆ ಅನೇಕ ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

