ಚಂದ್ರವಳ್ಳಿ ನ್ಯೂಸ್, ಎನ್.ಆರ್.ಪುರ:
ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಮಡಬೂರು ಗ್ರಾಮದಲ್ಲಿ 17ಕ್ಕೂ ಹೆಚ್ಚಿನ ಕಾಡಾನೆಗಳು ಏಕ ಕಾಲದಲ್ಲಿ ರಸ್ತೆ ದಾಟಿರುವ ದೃಶ್ಯ ಕಂಡು ಬಂದಿದೆಯಲ್ಲದೆ, ಅಡಿಕೆ ತೋಟಕ್ಕೆ ನುಗ್ಗಿರುವ ಕಾಡಾನೆಗಳು ಸಂಪೂರ್ಣವಾಗಿ ತೋಟವನ್ನೇ ನಾಶ ಮಾಡಿದ್ದು ರೈತರು ಕಣ್ಣೀರು ಹಾಕುತ್ತಿದ್ದಾರೆ.
ಮಡಬೂರು ಗ್ರಾಮದ ಲೋಹಿತಾಶ್ವ ಗೌಡ ಹಾಗೂ ವನಮಾಲಾ ಎಂಬುವರ ಅಡಿಕೆ ತೋಟಕ್ಕೆ ಕಾಡಾನೆಗಳು ನುಗ್ಗಿ ಸುಮಾರು 600ಕ್ಕೂ ಹೆಚ್ಚು ಅಡಿಕೆ ಮರಗಳನ್ನು ನೆಲಕ್ಕೆ ಉರುಳಿಸಿ ಲಕ್ಷಾಂತರ ನಷ್ಟ ಮಾಡಿವೆ. ಕಾಡಾನೆಗಳ ಹಿಂಡು ಕಂಡ ಗ್ರಾಮದ ಜನರು ಆತಂಕದಲ್ಲಿಯೇ ಸಮಯ ಕಳೆಯುವಂತಾಗಿದೆ. ಬದುಕು ನಡೆಸಲು ಆಸರೆಯಾಗಿದ್ದ ಅಡಿಕೆ ಗಿಡಗಳು ನೆಲಸಮ ಆಗಿರುವುದರಿಂದಾಗಿ ಗ್ರಾಮದ ರೈತರು ಹತಾಶೆಗೆ ಒಳಗಾಗಿದ್ದಾರೆ.
ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಬಾಳೆಹೊನ್ನೂರು, ಎನ್. ಆರ್. ಪುರ ತಾಲೂಕಿನಲ್ಲಿ ಪ್ರತಿನಿತ್ಯ ಕಾಡಾನೆಗಳ ಹಿಂಡಿನಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಪ್ರತಿನಿತ್ಯ ರಾತ್ರಿ ವೇಳೆ ಹಿಂಡು ಹಿಂಡಾಗಿ ಬರುವ ಕಾಡಾನೆಗಳು ಸಿಕ್ಕ ಸಿಕ್ಕ ಗದ್ದೆ, ಕಾಫಿ ತೋಟ ಹಾಗೂ ಅಡಿಕೆ ತೋಟಗಳಿಗೆ ನುಗ್ಗಿ ನೂರಾರು ಮರಗಳನ್ನು ಕೆಳಗೆ ಉರುಳಿಸಿ ನಾಶ ಮಾಡಿ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಾಡಾನೆ ದಾಳಿಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಜೀವಹಾನಿ ಆಗಿರುವ ಬೆನ್ನಲ್ಲೇ, ಈಗ ಮತ್ತೊಮ್ಮೆ ಕಾಡಾನೆಗಳ ಹಿಂಡು ಕಾಫಿ ತೋಟ ಹಾಗೂ ಅಡಿಕೆ ತೋಟವನ್ನು ಸಂಪೂರ್ಣ ನಾಶ ಮಾಡುವ ಮೂಲಕ ರೈತರ ನಿದ್ದೆ ಗೆಡಿಸಿವೆ.
ಕಾಡಾನೆ ಆನೆಗಳು ಹಗಲು ರಾತ್ರಿ ಎನ್ನದೆ ನಿರಂತರವಾಗಿ ಓಡಾಟ ನಡೆಸುತ್ತಿರುವುದರಿಂದ ಮನೆಯಿಂದ ಹೊರ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಆನೆಗಳನ್ನು ಓಡಿಸಲು ಪಟಾಕಿ ಸಿಡಿಸಿ ಹಾಗೂ ಜೋರಾಗಿ ಕೂಗೂ ಹಾಕಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಕುರಿತು ಹಲವಾರು ಬಾರಿ ಸ್ಥಳೀಯರು ಅರಣ್ಯ ಸಿಬ್ಬಂದಿಗೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಬೀದಿಗೆ ಬಿದ್ದ ರೈತರು :
ಜೀವನ ಸಾಗಿಸಲು ದಾರಿಯಾಗಿದ್ದ ಅಡಿಕೆ ಮರಗಳು ಈಗ ನೆಲಕ್ಕೆ ಬಿದ್ದಿರುವುದು ರೈತರ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ಹಲವು ವರ್ಷಗಳಿಂದ ಮಕ್ಕಳಂತೆ ಸಾಕಿ ಸಲುವಿದ್ದ ಗಿಡಗಳೇ ಈಗ ನಾಶವಾಗಿರುವುದರಿಂದಾಗಿ ರೈತರು ಬೀದಿಗೆ ಬಿದ್ದಿದ್ದಾರೆ.

