ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಜಲ ಆಯೋಗವೇ ಮೇಕೆದಾಟು ಯೋಜನೆಯ ತಾಂತ್ರಿಕ ಅಂಶವನ್ನು ತೀರ್ಮಾನ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ನಾನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದೇನೆ. ಇದನ್ನು ಬೇರೆ ರೀತಿ ವ್ಯಾಖ್ಯಾನ ಮಾಡಿದರೆ ಅರ್ಥವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅರ್ಥೈಸಿ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದ ಡಿಸಿಎಂ ಅವರು, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ ಎಂದು ನಾನು ಪೋಸ್ಟ್ ಮಾಡಿದ್ದನ್ನು ಕೆಲವು ಮಾಧ್ಯಮಗಳು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿವೆ ಎಂದು ಡಿಸಿಎಂ ತಿಳಿಸಿದರು.
ನ್ಯಾಯಾಲಯದಲ್ಲಿ ಕಾವೇರಿ ಆರತಿಯ ಪ್ರಾರ್ಥನೆಗೆ ನಮ್ಮ ಪರವಾಗಿ ತೀರ್ಪು ಬಂದಿದೆ. ಮೇಕೆದಾಟು ಯೋಜನೆ ತಾಂತ್ರಿಕ ಅಂಶವನ್ನು ಕೇಂದ್ರ ಜಲ ಆಯೋಗವೇ ತೀರ್ಮಾನ ಮಾಡಬೇಕು ಎಂದು ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ನಾನು ಈ ಮಾತನ್ನು ಹೇಳುತ್ತಾ ಬಂದಿದ್ದು ರೈತರ ಬದುಕು ಯಾವಾಗಲೂ ಸುಖವಾಗಿರಲಿ ಎಂದು ಪಕ್ಷ ಹಾಗೂ ಸರ್ಕಾರದ ಪರವಾಗಿ ಶುಭ ಹಾರೈಸುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಎಐಸಿಸಿ ಅಧ್ಯಕ್ಷರು ಬಂದಾಗಲೆಲ್ಲ ಭೇಟಿ ಮಾಡುವುದು ನನ್ನ ಕರ್ತವ್ಯ. ಅವರನ್ನು ಸ್ವಾಗತಿಸುವುದು ನನ್ನ ಡ್ಯೂಟಿ, ಇದಕ್ಕೆಲ್ಲ ಪ್ರೋಟಾಕಾಲ್ ಇರುತ್ತದೆ. ಅದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಭೇಟಿಯನ್ನು ಡಿಸಿಎಂ ಸಮರ್ಥಿಸಿಕೊಂಡರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಪ್ರತ್ಯೇಕವಾಗಿ ಚರ್ಚಿಸಿದ್ದನ್ನ ಬಹಿರಂಗಪಡಿಸಲು ಆಗುವುದಿಲ್ಲ. ಮಾತನಾಡಿಲ್ಲ ಎಂದು ನಾನು ಹೇಳುವುದಿಲ್ಲ. ಅದು ನನ್ನ ಹಾಗೂ ಅವರಿಗೆ ಬಿಟ್ಟ ವಿಚಾರವಾಗಿದೆ. ಅಲ್ಲದೆ, ನಾನು ಅವರನ್ನು ಭೇಟಿ ಮಾಡುವುದು ಹೊಸತೇನಲ್ಲ. ಶುಕ್ರವಾರ ದೆಹಲಿಗೆ ಹೋದಾಗ ಎಲ್ಲಾ ನಾಯಕರು ಅಲ್ಲೇ ಇರುತ್ತಾರೆ. ಮತ್ತೆ ಭೇಟಿ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ರಾಹುಲ್ ಗಾಂಧಿ ಅವರ ಭೇಟಿ ನಂತರ ಬೆಂಬಲಿಗ ಶಾಸಕರು ಖುಷಿಯಾಗಿದ್ದಾರೆಯೇ ಎಂದು ಪ್ರಶ್ನಿಸಿದ ಪತ್ರಕರ್ತರು, ನಮ್ಮ ಪಕ್ಷದ ನಾಯಕರು, ಅಧ್ಯಕ್ಷರನ್ನು ಭೇಟಿ ಮಾಡುವುದು, ಕರೆ ಮೂಲಕ ಚರ್ಚೆ ಮಾಡುವುದು ಸಹಜ ಪ್ರಕ್ರಿಯೆ. ಅವುಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲಾಗುವುದಿಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದರು.

