ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವರ್ಷದ ಮೊದಲ ಹಬ್ಬ ಸೂರ್ಯ ದೇವನು ಪಥ ಬದಲಿಸುವ ಸಂಕ್ರಾಂತಿ ಹಬ್ಬವನ್ನು ತಾಲೂಕಿನ ಎಲ್ಲೆಡೆ ಸಂಭ್ರಮಗಳಿಂದ ಆಚರಿಸಲಾಯಿತು.
ಸಂಕ್ರಮಣದ ಪ್ರಯುಕ್ತ ಎಳ್ಳು, ಬೆಲ್ಲ, ಗೆಣಸು, ಅವರೆಕಾಯಿ, ಪೊಂಗಲ್ ಸೇರಿದಂತೆ ವಿವಿಧ ಬಗೆಯ ಸಿಹಿ ಖಾದ್ಯ ಗಳನ್ನು ದೇವರಿಗೆ ನೈವೇದ್ಯವಿಟ್ಟು ಪೂಜಿಸುವುದರ ಜೊತೆಗೆ ಜಾನುವಾರುಗಳನ್ನು ಪೂಜಿಸಿ ನೈವೇದ್ಯಗಳನ್ನು ರಾಸುಗಳಿಗೆ ತಿನಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಬಹು ಮುಖ್ಯವಾಗಿ ಮನೆಗಳ ಮುಂದೆ ಸಂಕ್ರಾಂತಿಯ ಶುಭಾಶಯಗಳನ್ನು ಕೋರುವ ವಿವಿಧ ರಂಗುಗಳ ರಂಗೋಲಿ ಕಂಗೊಳಿಸುತ್ತಿತ್ತು. ವಿಶೇಷವೆಂದರೆ ಹಲವಾರು ಮನೆಗಳಲ್ಲಿ ಗ್ರಾಮೀಣ ಸೊಗಡನ್ನು ಸಾರುವ ಬೊಂಬೆಗಳ ಪ್ರದರ್ಶನ ಮನಸೂರೆ ಗೊಂಡಿತ್ತು.
ಸಂಕ್ರಾಂತಿ ಪ್ರಯುಕ್ತ ಗ್ರಾಮೀಣ ಹಾಗೂ ನಗರದ ಎಲ್ಲಾ ದೇವಾಲಯಗಳಲ್ಲಿ ಸೂರ್ಯ ಸಂಕ್ರಮಣದ ನಂತರ ವಿಶೇಷ ಪೂಜಾ ಅಲಂಕಾರಗಳು ನಡೆದವು. ಗ್ರಾಮೀಣ ಬಾಗಗಳಲ್ಲಿ ರೈತರ ಹಾಗೂ ರಾಸುಗಳ ಆರಾಧ್ಯ ದೈವ ಕಾಟೀಮರಾಯನಿಗೆ ವಿಶೇಷ ಪೂಜೆ ಸಲ್ಲಿಸಿ ಜಾನುವಾರುಗಳನ್ನು ಕಿಚ್ಚು ಹಾಯಿಸುವ ಸಾಂಪ್ರದಾಯಿಕ ದೃಶ್ಯ ವಿಶೇಷತೆಗಳಿಂದ ಕೂಡಿದ್ದವು.
ಸಂಕ್ರಾಂತಿ ಹಬ್ಬ ಎಂದರೆ ಅದೊಂದು ರೈತರ ಹಾಗೂ ಜಾನುವಾರುಗಳ ಹಬ್ಬವೆಂದೇ ಪ್ರತೀತಿ. ಹಾಗಾಗಿ ಜಾನುವಾರುಗಳಿಗೆ ಜಳಕ ಮಾಡಿಸಿ ವಿವಿಧ ಬಣ್ಣಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿ ಕಬ್ಬು, ಬೆಲ್ಲ, ಅವರೇ, ತಿನಿಸುಗಳನ್ನು ನೀಡಿ ಮೆರವಣಿಗೆ ನಡೆಸಿ ಸಂಭ್ರಮಿಸುವುದು ಕೃಷಿಕರ ಬಹು ಮುಖ್ಯ ಸಂಭ್ರಮ. ಜೊತೆಗೆ ಎಲ್ಲೆಡೆ ಎಳ್ಳು ಬೆಲ್ಲ ವಿನಿಮಯ ಸೌಹಾರ್ದತೆಯ ಸಂಕೇತವಾಗಿ ತಾಲೂಕಿನಎಲ್ಲೆಡೆ ಸಂಕ್ರಾಂತಿ ಹಬ್ಬದ ಸೊಬಗನ್ನು ಇಮ್ಮಡಿ ಗೊಳಿಸಿತ್ತು.

