ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಕ್ಷದ ರಾಜ್ಯ ಕಛೇರಿ ಜೆ.ಪಿ. ಭವನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡರವರ ನೇತೃತ್ವ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಮಹತ್ವದ ಸಭೆಯಲ್ಲಿ ಭಾಗವಹಿಸಿ, ವಿವಿಧ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು.
ಈ ಮಹತ್ವದ ಸಭೆಯಲ್ಲಿ ಜೂನ್ 2026ರ ಒಳಗಾಗಿ ಬೃಹತ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿರುವ 5 ನಗರ ಪಾಲಿಕೆ ಚುನಾವಣೆಗೆ ಪಕ್ಷದ ವತಿಯಿಂದ ಕೈಗೊಂಡಿರುವ ಚುನಾವಣಾ ಪೂರ್ವಭಾವಿ ಸಿದ್ಧತೆಗಳು ಹಾಗೂ ಸಂಘಟನಾತ್ಮಕ ವಿಷಯಗಳ ಕುರಿತು ಚರ್ಚಿಸಲಾಯಿತು.
ಸ್ಥಳೀಯವಾಗಿ ಮೈತ್ರಿ ಬಗ್ಗೆ ಮುಕ್ತವಾಗಿದ್ದೇವೆ: ಮುಂಬೈ ಫಲಿತಾಂಶ ಜಿಬಿಎ ಚುನಾವಣೆಯಲ್ಲಿ ಪ್ರಭಾವ ಬೀರುತ್ತಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮಪಕ್ಷವು ಸಿದ್ದತೆ ಮಾಡಬೇಕು. ಜಿಬಿಎ, ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗೆ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಮೈತ್ರಿಯನ್ನು ಮುಕ್ತವಾಗಿ ಇಟ್ಟುಕೊಂಡಿದ್ದೇವೆ. ನಮ್ಮಿಂದ ಮೈತ್ರಿಯಲ್ಲಿ ಯಾವುದೇ ಗೊಂದಲ ಆಗುವುದಕ್ಕೆ ಅವಕಾಶ ಕೊಡುವುದಿಲ್ಲ. ಮುಂದಿನ ದಿನಗಳಲ್ಲಿ ಯಾವ ತರ ರಾಜಕೀಯ ಬೆಳವಣಿಗೆ, ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಸ್ಥಳೀಯಮಟ್ಟದ ನಾಯಕರ ತೀರ್ಮಾನ ಏನಿದೆ? ಎಲ್ಲವನ್ನೂ ನೋಡಿಕೊಂಡು ತೀರ್ಮಾನಿಸಬೇಕು ಎಂದರು.
ಕಾಂಗ್ರೆಸ್ ದುರಾಡಳಿವನ್ನು ಹೋಗಲಾಡಿಸಬೇಕು ಎಂಬುದು ಇಲ್ಲಿ ನಮ್ಮಪಕ್ಷದ ಉದ್ದೇಶ. ಅದಕ್ಕೆ ನಾವು ತಯಾರಿದ್ದೇವೆ, ಹಾಗಾಗಿ ಎಲ್ಲಾ ರೀತಿಯಲ್ಲಿ ಮುಕ್ತವಾಗಿದ್ದೇವೆ. ಯಾವಾಗ ಏನು ತೀರ್ಮಾನ ಆಗಬೇಕು? ಅದರಲ್ಲೂ ಬೆಂಗಳೂರಿನ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಅಭಿವೃದ್ಧಿ ಹೆಸರಲ್ಲಿ ಬರೀ ಲೂಟಿ ಆಗುತ್ತಿದೆ. ಕಸ ವಿಲೇವಾರಿಯಿಂದ, ಗುಂಡಿ ಮುಚ್ಚುವುದು, ಯಾವ ಯಾವ ತರ ಯಾವ ಪಕ್ಷಗಳು ಏನೇನು ಕೊಡುಗೆ ಕೊಟ್ಟಿವೆ? ಆ ವಿಷಯಗಳನ್ನು ಇಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ. ಏನೇನು ಆಗುತ್ತೆ ಅಂತ ನೋಡೋಣ ಎಂದು ತಿಳಿಸಿದರು.
ಮುಂಬೈ ಫಲಿತಾಂಶ ಪಂಚ ರಾಜ್ಯಗಳ ಚುನಾವಣೆಗೆ ದಿಕ್ಸೂಚಿ ಆಗುತ್ತಾ ಎಂಬ ವಿಚಾರವಾಗಿ ಮಾತನಾಡಿ, ಈ ಚುನಾವಣೆಯೇ ಬೇರೆ, ಬೇರೆ ರಾಜ್ಯಗಳ ಚುನಾವಣೆ ಪರಿಸ್ಥಿತಿಯೇ ಬೇರೆ. ತಮಿಳುನಾಡಿನಲ್ಲಿ ಒಂದು ರೀತಿ ಇದೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ದೊಡ್ಡಮಟ್ಟದ ಸಂಘಟನೆ ಇದೆ. ಮೋದಿ, ಅಮಿತ್ ಶಾ ಸೇರಿದಂತೆ ಎಲ್ಲರಿಗೂ ವೆಸ್ಟ್ ಬೆಂಗಾಲ್ನಲ್ಲಿ ಅಧಿಕಾರಕ್ಕೆ ಬರಬೇಕು ಅಂತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೋರ್ ಕಮಿಟಿ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಉಸ್ತುವಾರಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಬೆಂಗಳೂರು ನಗರ ಜಿಲ್ಲಾಧ್ಯಕ್ಷರು, ಬೆಂಗಳೂರು ಮಹಾನಗರ ಜಿಲ್ಲಾಜತಾದಳ ಜಿಲ್ಲಾ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು ಸೇರಿದಂತೆ ಇತರರು ಉಪಸ್ಥಿತರಿದ್ದರು.

