ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಿನ ಬೆಳಗಾದರೆ ಯಾರ ತಲೆ ಒಡೆಯಬೇಕೆಂಬುದು ಅಣ್ಣ, ತಮ್ಮಂದಿರ ಕೆಲಸವಾಗಿದೆ. ಹಣ ಮಾಡುವುದು ಅವರ ಚಪಲವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಜೆ.ಪಿ.ಭವನದಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯವರೇ ನಮ್ಮನ್ನು ತುಳಿಯುವ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೆಲವರಿಗೆ ಜನಬಲ ಬೇಕು. ಕೆಲವರಿಗೆ ಬೆಳಗ್ಗೆಯಿಂದ ಸಂಜೆ ತನಕ ಹಣ ಲೂಟಿ ಮಾಡಬೇಕೆಂಬುದು. ಜನ ಬೆಂಬಲವನ್ನು ಯಾವ ರೀತಿಯಲ್ಲಿ ಪಡೆಯಬೇಕೆಂಬುದಕ್ಕಿಂತ ಹೆಚ್ಚಾಗಿ, ಕ್ಷಣ ಕ್ಷಣವೂ ಲೂಟಿ ಮಾಡುವ ಕೆಲಸ ಆಗಿದೆ. ಇಂತಹವರಿಗೆ ಜಾತಿ ಹೆಸರಿನಲ್ಲಿ ಬೆಂಬಲ ಕೊಡುತ್ತಾರಾ? ಅವರದ್ದು ಯಾವ ಜಮೀನಿಗೆ ಬೇಲಿ ಹಾಕಬೇಕು, ಯಾವ ರೀತಿ ಅಕ್ರಮವಾಗಿ ಸಂಪಾದನೆ ಮಾಡಬೇಕು ಎಂಬುದಾಗಿದೆ. ಇದಕ್ಕೆ ಜನರು ಬೆಂಬಲ ಕೊಡುತ್ತಾರಾ? ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದರು.
ಕುಮಾರಸ್ವಾಮಿ ಬಾಯಿಚಪಲಕ್ಕೆ ಮಾತನಾಡುತ್ತಾರೆ ಅಂತ ಅವರ ತಮ್ಮನೇ ಹೇಳಿದ್ದಾರೆ. ನಾನು ಬಾಯಿಚಪಲಕ್ಕೆ ಮಾತನಾಡುವುದಿಲ್ಲ. ನಿಮ್ಮ ಹಲವಾರು ಅಕ್ರಮಗಳ ಬಗ್ಗೆ ಜನರಿಗೆ ಹೇಳುತ್ತೇನೆ. ನನ್ನ ಹಾಗೂ ಜನರ ನಡುವೆ ಸಂಬಂಧ ಬೆಳೆಸಲಿಕ್ಕೆ ನಿಮ್ಮ ವೈಫಲ್ಯಗಳನ್ನು ಹೇಳುತ್ತೇನೆ. ನಿಮ್ಮದು ಒಂದು ರೀತಿ ಚಪಲ, ನಮ್ಮದು ಒಂದು ರೀತಿ ಚಪಲ. ನಿಮಗೆ ಹಣ ಮಾಡುವ ಚಪಲ, ನನಗೆ ಜನ ಬೆಂಬಲ ಪಡೆಯುವ ಚಪಲ. ಇದೇ ನಮ್ಮ ನಡುವೆ ಇರುವ ವ್ಯತ್ಯಾಸ ಎಂದು ಕುಮಾರಸ್ವಾಮಿ ಅವರು ಡಿಕೆ ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದರು.
ಎರಡು ದಿನನೋಡೋಣ:
ಕುಮಾರಸ್ವಾಮಿ ಅವರು ಮುಂದುವರೆದು ಮಾತನಾಡಿ ಶಿಡ್ಲಘಟ್ಟ ಪ್ರಕರಣ ವಿಚಾರವನ್ನು ಸಿಎಸ್ ಏನು ಮಾಡುತ್ತಾರೆ ಎಂದು ಎರಡು ದಿನ ಕಾಯ್ದು ನೋಡೋಣ. ಅವರು ಏನಾದರೂ ಸರ್ಕಾರದಲ್ಲಿ ಹೆಬ್ಬೆಟ್ಟು ಚೀಫ್ ಸೆಕ್ರೆಟರಿ ಆಗುತ್ತಾರಾ? ಇಲ್ಲವೇ ಅಧಿಕಾರಿಗಳಿಗೆ ರಕ್ಷಣೆ ಕೊಡುವ ಸಿಎಸ್ ಆಗುತ್ತಾರಾ ಅಂತ ನೋಡೋಣ. ನಾನೇ ಖುದ್ದು ಫೋನ್ ಮಾಡಿ ಮಾತನಾಡಿದ್ದೇನೆ, ಆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಕುಮಾರಸ್ವಾಮಿ ದೂರಿದರು.
ಮುಂಬೈನಂತೆಯೇ ಫಲಿತಾಂಶ:
ಮುಂಬೈನಲ್ಲಿ ಇವತ್ತು ಏನು ಫಲಿತಾಂಶ ಬಂದಿದೆಯೋ ಅದೇ ಫಲಿತಾಂಶಕರ್ನಾಟಕದಲ್ಲೂ ಮುಂದಿನ ಚುನಾವಣೆಯಲ್ಲಿ ಬರುತ್ತದೆ ಎಂದು ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದರು.
ಜೆಡಿಎಸ್ ನಿರ್ನಾಮ ಆಗಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ ಸರ್ಟಿಫಿಕೆಟ್ ಜೆಡಿಎಸ್ಗೆ ಬೇಕಿಲ್ಲ. ಇವಾಗ ಲೀಸ್ ಬೇಸ್ಡ್ ಇದ್ಯಲ್ಲಾ, ಅವರ ಅಪ್ಪನ ಕೇಳುವುದಕ್ಕೆ ಹೇಳಿ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಮಂತ್ರಿಗಳನ್ನು ಜೆಡಿಎಸ್ನಿಂದ ಲೀಸ್ ಮೇಲೆ ತಗೊಂಡ್ರಿ. ಸಿಎಂರಿಂದ ಹಿಡಿದು ಎಷ್ಟು ಜನರನ್ನು ಲೀಸ್ ಮೇಲೆ ನಿಮ್ಮಪಾರ್ಟಿಗೆ ತಗೊಂಡಿದ್ದೀರಾ? ಎಷ್ಟು ಜನ ಮಂತ್ರಿಗಳನ್ನು ಮಾಡಿಕೊಂಡಿದ್ದೀರಾ. ಒಬ್ಬರು ಲೀಸ್ ಅವದಿ ಮುಗಿದಿದೆ, ನನ್ನ ಸಿಎಂ ಮಾಡಿ ಅಂತಾರೆ. ಇನ್ನೊಬ್ಬರು ಲೀಸ್ ಅವದಿ ಮುಗಿದಿಲ್ಲ, ನಾನೇ ಮುಂದುವರೆಯುತ್ತೇನೆ ಅಂತಾರೆ. ಮೊದಲು ನಿಮ್ಮ ಪಾರ್ಟಿಯ ಹಣೆಬರಹ ನೋಡಿಕೊಳ್ಳಿ ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ಕರ್ನಾಟಕ ಕಾಂಗ್ರೆಸ್ ಪಕ್ಷದ ಹಣೆಬರಹ ಮುಂದಿನ ಚುನಾವಣೆಯಲ್ಲಿ ಮುಂಬೈನಲ್ಲಿ ಇವತ್ತು ಏನಾಗಿದೆ? ಇದೇ ರೀತಿ ಬರುತ್ತದೆ. ಬಿಹಾರದಲ್ಲಿ 6 ಸೀಟು ತಗೊಂಡಿದ್ದೀರಲ್ಲ. ಈ ದುರಂಹಕಾರ ಬಿಡದೇ ಇದ್ದರೆ ಇದೇ ಪರಿಸ್ಥಿತಿ ಬರುತ್ತದೆ. ಏನು ಅಭಿವೃದ್ಧಿ ಮಾಡಿದ್ದೀರಾ ಅಂತಾ ಜನರು ನಿಮಗೆ ಅಧಿಕಾರ ಕೊಡ್ತಾರೆ? ಅವರ ತಂದೆ ಮೊನ್ನೆ ಏನು ಮಾತನಾಡಿದ್ದಾರೆ? ಮೈಸೂರು ಕನಕಪುರದ ತರಹ ಅಭಿವೃದ್ಧಿ ಮಾಡಿಕೊಡಿಅಂದಿದ್ದಾರೆನೀವು ಮಾಡಿದ್ದು ಏನು? ಖರ್ಗೆ ಅವರು 40 ವರ್ಷ ರಾಜಕಾರಣದಲ್ಲಿ ಇದ್ದಾರೆ. ಪ್ರಿಯಾಂಕ್ ಖರ್ಗೆ 8/9 ವರ್ಷ ಮಂತ್ರಿ,ನೀವು ಮಾಡಿದ್ದು ಏನಪ್ಪ? ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ಈ ನಾಡಿನ ಜನತೆ ಸರ್ಟಿಫಿಕೆಟ್ ಕೊಡುವುದು ಖರ್ಗೆ ಅಲ್ಲ:
ಕರ್ನಾಟಕ ರಾಜ್ಯದಲ್ಲಿ ನಮ್ಮಪಕ್ಷ ಉಳಿದಿದೆಯಾ ಇಲ್ವಾ ಅನ್ನೋದನ್ನು ಜನ ತೀರ್ಮಾನ ಮಾಡುತ್ತಾರೆ. ನಿಮ್ಮ ಪರಿಸ್ಥಿತಿ ಎಲ್ಲಿಗೆ ಬರ್ತಿದೆ ಅಂತಾ ಸ್ವಲ್ಪ ಯೋಚನೆ ಮಾಡಿ. ಏನೇನು ಮಾಡ್ತಿದ್ದೀರಿ, ಜನನಿಮ್ಮನ್ನು ಎಲ್ಲಿಗೆ ತಗೊಂಡು ಹೋಗುತ್ತಾರೆ. ಅದನ್ನು ಸ್ವಲ್ಪ ಯೋಚಿಸಿ. ನನ್ನ ಪಕ್ಷದ ಬಗ್ಗೆ ಚಿಂತೆ ಮಾಡಬೇಡಿ.ಇಲ್ಲಿ ಇರುವ ಕಾಂಗ್ರೆಸ್ ನಾಯಕರಿಗೆ ಬೇರೆ ಪಕ್ಷದಿಂದ ತೊಂದರೆ ಇಲ್ಲ. ಅವರಿಗೆ ಇರುವುದೇ ಜೆಡಿಎಸ್, ಜನತಾದಳ ಫಿನಿಶ್ ಆದರೆ ಅವರು ಉಳಿಯುತ್ತಾರೆ. ಜನತಾದಳ ಮೇಲೆ ಬಂದರೆ ಅವರ ಲೈಫ್ ಏನು ಅಂತಾ ಗೊತ್ತಾ?
ಜಸ್ಟ್ ನಾವು ಬಿಜೆಪಿ ಜೊತೆ ಲೋಕಸಭೆಯಲ್ಲಿ ಮೈತ್ರಿ ಮಾಡಿಕೊಂಡಿದ್ದಕ್ಕೆ ನಿಮ್ಮ ಹಣೆಬರಹ ಏನಂತ ಗೊತ್ತಾಯ್ತು. ಇನ್ನೂ ನಾಲ್ಕೈದು ಸೀಟು ಬರಬೇಕಿತ್ತು. ನಮ್ಮಲ್ಲೇ ಕೆಲಲೋಪದೋಷಗಳಿಂದ ನೀವು 9 ಸೀಟು ಗೆದ್ದಿದ್ದಿರಾ? ಇಲ್ಲವೆಂದರೆ ಮೂರು, ನಾಲ್ಕಕ್ಕೆ ಬರುತ್ತಿದ್ರಿ. ಅದೂ ಸರ್ಕಾರ ಇದ್ದು. ಅದರಿಂದ ಜೆಡಿಎಸ್ ಉಳಿಯುತ್ತೋ, ನಾಶ ಆಗುತ್ತೋ ಅಂತ ಸರ್ಟಿಫಿಕೆಟ್ ಕೊಡುವುದು ಖರ್ಗೆ ಅಲ್ಲ. ಈ ನಾಡಿನ ಜನತೆ ಮುಂದೆ ಅದೇ ರೀತಿಯ ಫಲಿತಾಂಶ ಕೊಡುತ್ತಾರೆ, ಅಲ್ಲಿವರೆಗೆ ಇರಿ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ಮಾಡಿದರು.

