ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆ ಹೆಸರನ್ನು ಬದಲಾಯಿಸಿರುವ ಮೋದಿ ಸರ್ಕಾರ ಜನರ ಹಕ್ಕುಗಳನ್ನು ಕದಿಯುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಜನರಿಗೆ ಕೆಲಸ ನೀಡಿ, ಅವರುಗಳ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಟ್ಟಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ಮೋದಿಸರ್ಕಾರ ಮೊಟಕುಗೊಳಿಸಲುಮುಂದಾಗಿದೆ. ಅಲ್ಲದೆ ಆಯ್ಕೆ ಮಾಡಿದ ಹಳ್ಳಿಗಳಲ್ಲಿ ಮಾತ್ರ ಕೆಲಸ ಮಾಡಬೇಕಿದೆ. ಇದರಿಂದ ಬೇರೆ ಹಳ್ಳಿಗಳಲ್ಲಿ ಯಾವುದೇ ಕೆಲಸ ಮಾಡುವ ಆಗಿಲ್ಲ ಮತ್ತು ಅಲ್ಲಿನ ಜನರಿಗೂ ಕೆಲಸ ಇಲ್ಲದಂತಾಗಲಿದೆ ಎಂದು ನಾಯಕರು ಕಿಡಿಕಾರಿದರು.
ಇಲ್ಲಿಯವರೆಗೂ ಯಾವುದೇ ಗುತ್ತಿಗೆದಾರರನ್ನು ಬಳಸಿಕೊಳ್ಳದೆ ನೇರವಾಗಿ ಜನರಿಗೆ ಕೆಲಸ ನೀಡಿ ಅವರಿಗೆ ಹಣ ನೀಡಲಾಗುತ್ತಿತ್ತು. ಆದರೆ ಈಗ ಗುತ್ತಿಗೆದಾರರಿಗೆ ಕೆಲಸ ನೀಡಿ, ಜನರಿಗೆ ಕೆಲಸ ಇಲ್ಲದಂತೆ ಮಾಡಲಾಗಿದೆ. ಇದರಿಂದಾಗಿ ನಿರುದ್ಯೋಗ ಪ್ರಮಾಣ ಹೆಚ್ಚಾಗಲಿದೆ, ಕನಿಷ್ಟ ವೇತನದ ರಕ್ಷಣೆ ಇಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಕಾರ್ಮಿಕರ ಶೋಷಣೆ ಮತ್ತು ಒತ್ತಡ ಹೆಚ್ಚಾಗಿ, ಬಲವಂತದ ವಲಸೆ, ಗ್ರಾಮೀಣ ಜೀವನೋಪಾಯ ಕುಸಿತಗೊಳ್ಳಲಿದೆ. ಆದ್ದರಿಂದ ನಮ್ಮದೆ ಯೋಜನೆ, ನಮ್ಮದೇ ಆಡಳಿತ, ನಮ್ಮದೆ ಉದ್ಯೋಗ ಎನ್ನುವ ನರೇಗಾ ಯೋಜನೆಯನ್ನು ಮರು ಜಾರಿಗೆ ತರಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಜಿಲ್ಲಾ ಕಾಂಗ್ರೇಸ್ ಕಚೇರಿಯಿಂದ ಪಾದಯಾತ್ರೆ ಬಂದ ಕಾರ್ಯಕರ್ತರು ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಧರಣಿ ಕುಳಿತರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ ಪೀರ್, ಮಹಿಳಾ ಘಟನಕದ ಅಧ್ಯಕ್ಷೆ ಗೀತಾನಂದಿನಿಗೌಡ, ಮಾಜಿ ಸಂಸದ ಚಂದ್ರಪ್ಪ, ಓ.ಶಂಕರ್, ಹಾಲಸ್ವಾಮಿ, ಖಾದಿ ರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

