ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಮಹಾಯೋಗಿ ವೇಮನ್ ರಡ್ಡಿ ಜಯಂತಿಯನ್ನು ಅಚರಣೆ ಮಾಡಲಾಯಿತು.
ವೇಮನ್ ರಡ್ಡಿ ಭಾವಚಿತ್ರ ಪುಷ್ಷಾಚನೆ ಮಾಡಿ ಮಾತನಾಡಿದ ತಾಲ್ಲೂಕು ದಂಡಾಧಿಕಾರಿ ಮಲ್ಲಪ್ಪ ಕೆ.ಯರಗೋಳ ರವರು ವೇಮನರು ಸರಳ ಭಾಷೆಗಳಲ್ಲಿ ನುಡಿಗಟ್ಟುಗಳನ್ನು ರಚಿಸಿ, ಜನರಿಗೆ ಮನವರಿಕೆ ಮಾಡಿಕೊಡುತ್ತಾ ಸಮಾಜ ಸುಧಾರಣೆಗೆ ಶ್ರಮಿಸಿದ್ದರು.
ಜಾತಿ, ಧರ್ಮ ಭೇದ ಭಾವವನ್ನು ತೊರೆದು ಎಲ್ಲರೂ ಒಂದು ಗೂಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎನ್ನುವುದನ್ನು ಪ್ರತಿಪಾದಿಸಿದ್ದರು. ತಮ್ಮ ವಚನಗಳಲ್ಲಿ ಬದುಕಿನ ಮೌಲ್ಯಗಳನ್ನು ತಿಳಿಸಿ ಸಮಾಜ ಮತ್ತು ಸಮುದಾಯವನ್ನು ಎಚ್ಚರಿಸಿದ್ದರು. ಕ್ಷಣಿಕ ಸುಖಕ್ಕಾಗಿ ಸಮಾಜದ ಹಿತವನ್ನು ಬಲಿಕೊಡದೇ ಮಾನವರೆಲ್ಲಾ ಒಂದೇ ಎಂದು ಹೇಳಿದ್ದ ವೇಮನರಂತಹ ಮಹನೀಯರ ವಿಚಾರಧಾರೆಗಳನ್ನು ಇಂತಹ ಸಂದರ್ಭದಲ್ಲಿ ಸ್ಥರಿಸುವುದು ಅರ್ಥಪೂರ್ಣವಾಗಿದೆ.ವೇಮನರ ಕುರಿತು ಧಾರವಾಡದ ಕರ್ನಾಟಕ ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪಿಸಿರುವುದು ಉತ್ತಮ ಬೆಳವಣಿಗೆ ಎಂದರು.
ನಂತರ ವೇಮನ ರೆಡ್ಡಿ ಜನ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್.ಹನುಮಂತ ರೆಡ್ಡಿ ಮಾತನಾಡಿ ವೇಮನರು 17ನೇ ಶತಮಾನದ ಮಹಾಯೋಗಿ, ತತ್ವಜ್ಞಾನಿ ಮತ್ತು ಕವಿ, ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗಂಡಿಕೋಟ ಮೂಲದವರು, ಅವರು ತಮ್ಮ ಸರಳ ತೆಲುಗು ಪದ್ಯಗಳ ಮೂಲಕ ಸಾಮಾಜಿಕ ನೀತಿ, ವಿಶ್ವ ಮಾನವೀಯತೆ ಮತ್ತು ಆತ್ಮಜ್ಞಾನದ ಸಂದೇಶವನ್ನು ಸಾರಿದ್ದಾರೆ, ಆರಂಭದಲ್ಲಿ ಲೌಕಿಕ ಭೋಗಾಸಕ್ತನಾಗಿ ಇದ್ದವರು, ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಪ್ರೇರಣೆಯಿಂದ ಜ್ಞಾನೋದಯ ಗೊಂಡು ವೈರಾಗ್ಯ ಮಾರ್ಗವನ್ನು ಅನುಸರಿಸಿ ಯೋಗಿ ಯಾಗುತ್ತಾರೆ, ಅವರ ಪದ್ಯಗಳು ‘ವಿಶ್ವದಾಭಿರಾಮ ಕೇಳು ವೇಮ‘ ಎಂಬ ಅಂಕಿತನಾಮದಿಂದ ಪ್ರಸಿದ್ಧವಾಗಿವೆ.
ಕನ್ನಡ ಸಾಹಿತ್ಯದಲ್ಲಿ ತ್ರಿಪದಿಗಳ ಮೂಲಕ ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸಿದ ಸರ್ವಜ್ಞಕವಿಯಂತೆ ತೆಲುಗಿನಲ್ಲಿ ವೇಮನ ಕವಿ ತಮ್ಮ ವಚನಗಳಲ್ಲಿ ಬದುಕಿನ ಸಿದ್ಧಾಂತಗಳನ್ನು ತಿಳಿಸಿದ್ದರು. ಅವರ ತತ್ವಾದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ. ರೆಡ್ಡಿ ಸಮುದಾಯಕ್ಕೆ ಸಾಕಷ್ಟು ವರ್ಷಗಳ ಇತಿಹಾಸವಿದ್ದು, ವೇಮನರ ವಿಚಾರಧಾರೆಗಳು ಪ್ರಚಾರವಾಗಬೇಕಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವೇಮನ ರೆಡ್ಡಿ ಜನ ಸಂಘದ ಗೌರವ ಅಧ್ಯಕ್ಷ ವೈ.ಜಗನ್ನಾಥ ರೆಡ್ಡಿ ಉಪಾಧ್ಯಕ್ಷ ಎನ್.ಶಿವಾರೆಡ್ಡಿ, ಕಾರ್ಯಾಧ್ಯಕ್ಷ ಜಯಶಂಕರ ರೆಡ್ಡಿ, ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಹಾಜರಿದ್ದರು.

