ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕೀಯದಲ್ಲಿ ಅಧಿಕಾರವೂ ಶಾಶ್ವತ ಅಲ್ಲ, ತಾಳ್ಮೆನೂ ಶಾಶ್ವತ ಅಲ್ಲ, ಯಾವುದು ಶಾಶ್ವತ ಅಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸೂಚ್ಯವಾಗಿ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಯಾರಿಗೂ ಸುಲಭವಾಗಿ ಬರಲ್ಲ. ಬಂದ ಅಧಿಕಾರವೂ ಶಾಶ್ವತವಲ್ಲ, ತಾಳ್ಮೆಯೂ ಶಾಶ್ವತ ಅಲ್ಲ. ಸಿಎಂ ಹುದ್ದೆ ಅಷ್ಟು ಸುಲಭವಾಗಿ ಸಿಗೋದಲ್ಲ. ಎಲ್ಲರೂ ಸೇರಿ ಭಾಗಿಯಾಗಬೇಕು. 2028ರ ಚುನಾವಣೆ ನಮ್ಮ ಗುರಿಯಾಗಿದೆ ಎಂದು ಸುರೇಶ್ ತಿಳಿಸಿದರು.
ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರು. ಎಲ್ಲ ದೃಷ್ಟಿಯಿಂದ ಅವರು ಯೋಚನೆ ಮಾಡ್ತಾರೆ. ನಾನು ಡಿಕೆ ಶಿವಕುಮಾರ್ ದೃಷ್ಟಿಯಿಂದ ಮಾತ್ರ ಯೋಚಿಸುತ್ತೇನೆ. ಇನ್ನೊಬ್ಬರು ಸಚಿವರಾಗುವ ದೃಷ್ಟಿ ಇಟ್ಟುಕೊಳ್ತಾರೆ. ರಾಹುಲ್ ಗಾಂಧಿ ಎಲ್ಲವನ್ನೂ ಯೋಚನೆ ಮಾಡ್ತಾರೆ. ಅಧಿಕಾರ ಬಿಟ್ಟು ಕೊಡೋದು ಬಹಳ ಕಷ್ಟ. ಅವರು ಯೋಚನೆ ಮಾಡುವ ವಿಶ್ವಾಸವಿದೆ ಎಂದು ಮಾರ್ಮಿಕವಾಗಿ ಅವರು ತಿಳಿಸಿದರು.
ಜನವರಿ ಅಂತ್ಯಕ್ಕೆ ದೆಹಲಿಗೆ ಬುಲಾವ್ ಇದೆಯಾ ಎಂಬ ಪ್ರಶ್ನೆಗೆ ಜ.29ಕ್ಕೆ ಅಧಿವೇಶನ ಇದೆ. ಅಧಿವೇಶನ ನಡೆಯುತ್ತಿರುವಾಗ ಹೇಗೆ?. ರಾಜಕಾರಣಿಗಳಿಗೆ ಬಿಡುವೇ ಇರಲ್ಲ, ನಿದ್ದೆ ಇರಲ್ಲ, ಊಟ ಇರಲ್ಲ, ನೆಮ್ಮದಿ ಇರಲ್ಲ ಎಂದರು.
ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಪಕ್ಷ ಒಗ್ಗಟ್ಟಾಗಿ ಹೋಗಬೇಕಿದೆ. ಅವರು ಪಕ್ಷದ ಅಧ್ಯಕ್ಷರೂ ಕೂಡ ಇದ್ದಾರೆ. ಹಾಗಾಗಿ ತಾಳ್ಮೆ ಕೂಡ ಇರುವುದು ಮುಖ್ಯ. ಅನಿವಾರ್ಯವಾಗಿ ತುರ್ತು ಅಧಿವೇಶನ ಇದೆ. ದೇಶದಲ್ಲಿ ಉದ್ಯೋಗ ಕಿತ್ತುಕೊಳ್ಳುವ ಕೆಲಸ ಆಗ್ತಿದೆ. ಆ ನಡೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಬೇಸಿಗೆ ಆರಂಭವಾಗುತ್ತಿದೆ. ಉದ್ಯೋಗ ಬೇಕು. ಇಂತಹ ಸಂದರ್ಭದಲ್ಲಿ ಕೇಂದ್ರದ ನಿರ್ಧಾರ ಸರಿಯಲ್ಲ. ಅದನ್ನು ಕಾಂಗ್ರೆಸ್ ಸರ್ಕಾರ ವಿರೋಧಿಸುತ್ತದೆ. ರಾಜ್ಯಪಾಲರು ಭಾಷಣ ಮಾಡಬೇಕಾಗುತ್ತದೆ. ಮನರೇಗಾ ಚರ್ಚೆ ಅಧಿವೇಶನದಲ್ಲಿ ಆಗಲಿದೆ. ನಂತರ ಕಾದುನೋಡೋಣ ಎಂದು ಡಿಕೆ ಸುರೇಶ್ ತಿಳಿಸಿದರು.
ಜಾತಿ ಮೇಲೆ ನಡೆಯೋ ರಾಜಕಾರಣ ದೇಶಕ್ಕೆ, ರಾಜ್ಯಕ್ಕೆ ಅತ್ಯಂತ ಮಾರಕವಾಗಿದೆ. ಕಾಂಗ್ರೆಸ್ಗೆ ಎಲ್ಲ ವೋಟ್ಗಳು ಬೇಕು. ಕೆಲವರು ವ್ಯಕ್ತಿಗೆ ನಿಷ್ಠೆ ಇರುತ್ತಾರೆ. ಕೆಲವರು ಪಕ್ಷಕ್ಕೆ ನಿಷ್ಠೆಯಿಂದ ಇರುತ್ತಾರೆ. ಡಿಕೆ ಶಿವಕುಮಾರ್ ಅವರು ಅನೇಕ ನೋವು ನಲಿವು ಎಲ್ಲವನ್ನೂ ತಡೆದು ಪಕ್ಷದಲ್ಲಿದ್ದಾರೆ ಎಂದು ಮಾರ್ಮಿಕವಾಗಿ ತಿಳಿಸಿದರು.
ಡಿಜಿಪಿ ರಾಮಚಂದ್ರ ರಾವ್ ವಿಡಿಯೋ ವೈರಲ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಂಸದ ಸುರೇಶ್, ಈ ಬಗ್ಗೆ ಸಿಎಂ ಅವರನ್ನು ಕೇಳಬೇಕು. ಕರ್ನಾಟಕ ಪೊಲೀಸ್ ಅತ್ಯಂತ ದಕ್ಷ ಇಲಾಖೆ. ಆ ಘನತೆಗೆ ಯಾವುದೇ ಧಕ್ಕೆ ತರದಂತೆ, ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಬ್ಯಾಲೆಟ್ ಪೇಪರ್ ಬೇಕಿಲ್ಲ: ಸ್ಥಳೀಯ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದು ಅವಶ್ಯಕತೆ ಇಲ್ಲ ಅನ್ನಿಸುತ್ತೆ. ಬ್ಯಾಲೆಟ್ ಮತ್ತೆ ತರೋದು ಬೇಡ. ಈಗಾಗಲೇ ಒಂದು ಹೆಜ್ಜೆಮುಂದೆ ಹೋಗಿದ್ದೇವೆ. ಈಗೆಲ್ಲ ಕರ್ನಾಟಕ ಸರ್ಕಾರದಲ್ಲೇ ಇರುತ್ತೆ ಅಲ್ವ ಎಂದು ವ್ಯತಿರಿಕ್ತ ಹೇಳಿಕೆ ನೀಡುವ ಮೂಲಕ ಡಿ.ಕೆ ಸುರೇಶ್ ಅವರು ಅಚ್ಚರಿ ಮೂಡಿಸಿದರು.

