ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ:
ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಪಾಸಣೆ ನೆಪದಲ್ಲಿ ದಕ್ಷಿಣ ಕೊರಿಯಾದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ಆರೋಪದ ಮೇಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ.
ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಜನವರಿ 19ರಂದು ಈ ಘಟನೆ ನಡೆದಿದೆ. ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಪ್ಘಾನ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ದೂರು:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 19-01-2026ರಂದು ಕೋರಿಯಾಗೆ ಹೋಗಲು ಬಂದಿದ್ದು, ನಂತರ ಇಮಿಗ್ರೇಷನ್ ತಪಾಸಣೆ ಮುಗಿಸಿ ಹೋಗುವ ಸಮಯದಲ್ಲಿ ವಿಮಾನ ನಿಲ್ದಾಣದ ಒಬ್ಬ ಪುರುಷ ಸಿಬ್ಬಂದಿ ಬಂದು ನನ್ನ ವಿಮಾನ ಟಿಕೆಟ್ ಪರಿಶೀಲನೆ ಮಾಡಿದರು.
ನಂತರ ನನ್ನ ಚೆಕ್ – ಇನ್ ಬ್ಯಾಗೇಜ್ ಕುರಿತು ಸಮಸ್ಯೆ ಇದೆ ಎಂದು ಹೇಳಿ, ಬ್ಯಾಗ್ ತಪಾಸಣೆ ಮಾಡಿ, ಅದರಲ್ಲಿ ಬೀಪ್ ಶಬ್ದ ಬಂದಿದೆ ಎಂದು ತಿಳಿಸಿ, ಮತ್ತೆ ತಪಾಸಣೆಗೆ ಹೋಗುವುದು ಸಮಯ ತೆಗೆದುಕೊಳ್ಳುತ್ತದೆ, ನಿಮ್ಮನ್ನು ವೈಯಕ್ತಿಕವಾಗಿ ತಪಾಸಣೆ ಮಾಡಬೇಕು ಎಂದು ಹೇಳಿ ಮೇನ್ಸ್ ವಾಶ್‌ರೂಮ್ ಬಳಿ ಕರೆದುಕೊಂಡು ಹೋಗಿದ್ದಾನೆ.
ಅಲ್ಲಿ ಆರೋಪಿಯು ನನ್ನ ಅನುಮತಿ ಪಡೆಯದೇ ನನ್ನ ಎದೆಯ ಭಾಗ ಮತ್ತು ಹಿಂಭಾಗವನ್ನು ಮುಟ್ಟಿದ್ದಾನೆ. ಇದಕ್ಕೆ ನಾನು ಒಪ್ಪದೇ ಇದ್ದಾಗ ಏಕಾಏಕಿ ನನ್ನನ್ನು ಅಪ್ಪಿಕೊಂಡು ಧನ್ಯವಾದಗಳು ಎಂದು ಹೇಳಿ ಕಳುಹಿಸಿ ಕೊಟ್ಟಿದ್ದಾನೆ. ಆರೋಪಿಯು ನನ್ನ ಒಪ್ಪಿಗೆ ಇಲ್ಲದೆ ಲೈಂಗಿಕವಾಗಿ ಸ್ಪರ್ಶಿಸಿದ್ದು, ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯು ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

