ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲಿಚೆನ್ ಸ್ಟೈನ್ ಪ್ರಧಾನಮಂತ್ರಿ ಬ್ರಿಜಿಟ್ ಹಾಸ್ ಅವರೊಂದಿಗೆ ಕರ್ನಾಟಕ-ಲಿಚೆನ್ ಸ್ಟೈನ್ ಕೈಗಾರಿಕಾ ಮತ್ತು ಹೂಡಿಕೆ ಸಹಕಾರ ಸಂವಾದದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅವರು ಪಾಲ್ಗೊಂಡಿದ್ದರು.
ಲಿಚೆನ್ ಸ್ಟೈನ್ ನ ಪ್ರಧಾನಮಂತ್ರಿಯವರಾದ ಬ್ರಿಜಿಟ್ ಹಾಸ್ (Brigitte Haas) ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಈವ್ ಬೆಕ್ (Eve Beck) ಅವರೊಂದಿಗೆ ಲಿಚೆನ್ ಸ್ಟೈನ್ ಮತ್ತು ಕರ್ನಾಟಕ ನಡುವಿನ ಕೈಗಾರಿಕಾ ಹಾಗೂ ಹೂಡಿಕೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಾರ್ಥಕ ಸಂವಾದ ನಡೆಸಲಾಯಿತು ಎಂದು ಸಚಿವರು ತಿಳಿಸಿದರು.
ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಆಧಾರವಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರುವ ಲಿಚೆನ್ ಸ್ಟೈನ್ ನ ಆರ್ಥಿಕ ವ್ಯವಸ್ಥೆ, ಉನ್ನತ ಮತ್ತು ನಿಖರ ಉತ್ಪಾದನೆ, ಅಡ್ವಾನ್ಸ್ಡ್ ಮೆಷಿನರಿ ಮತ್ತು ವಿಶೇಷ ಕೈಗಾರಿಕೆಗಳಲ್ಲಿ ಹೊಂದಿರುವ ಬಲ, ಕರ್ನಾಟಕದ ಉತ್ಪಾದನೆ ಮತ್ತು ನವೀನತಾ ಪರಿಸರ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ.
ದ್ವಿಪಕ್ಷೀಯ ಹೂಡಿಕೆ ಒಪ್ಪಂದ (BIT) ಹಾಗೂ EFTA ಚೌಕಟ್ಟಿನಡಿ ಸಹಕಾರವನ್ನು ಗಾಢಗೊಳಿಸಲು ಕೈಗೊಳ್ಳಬಹುದಾದ ಪ್ರಾಯೋಗಿಕ ಮಾರ್ಗಗಳ ಕುರಿತು ಚರ್ಚಿಸಲಾಯಿತು. ಜೊತೆಗೆ, ನಮ್ಮ ಕೈಗಾರಿಕಾ ಹಾಗೂ ನವೀನತಾ ಪಾಲುದಾರರೊಂದಿಗೆ ಅವಕಾಶಗಳನ್ನು ಅನ್ವೇಷಿಸಲು ಪ್ರಧಾನಮಂತ್ರಿ ಮತ್ತು ನಿಯೋಗವನ್ನು ಕರ್ನಾಟಕಕ್ಕೆ ಭೇಟಿ ನೀಡುವಂತೆ ಆಹ್ವಾನಿಸಲಾಯಿತು ಎಂದು ಸಚಿವ ಪಾಟೀಲ್ ತಿಳಿಸಿದರು.

