ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆಜ್ಜೆಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಗ್ರಾಮ ಪಂಚಾಯಿತಿಯನ್ನ ಮದ್ದೂರು ನಗರಸಭೆಗೆ ಸೇರಿಸಿರುವುದನ್ನ ವಿರೋಧಿಸಿ 32 ದಿನಗಳಿಂದ ಗ್ರಾಮಸ್ಥರು ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪಾಲ್ಗೊಂಡು, ಅವರ ಮನವಿಯನ್ನು ಆಲಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು.
ರಾಜ್ಯ ಕಾಂಗ್ರೆಸ್ ರೈತರರನ್ನು ಒಕ್ಕಲೆಬ್ಬಿಸುವ ಕಾರ್ಯವನ್ನು ಬಿಟ್ಟು ರೈತರ ಅಭಿವೃದ್ಧಿ ಮಾಡಬೇಕು, ಜೊತೆಗೆ ಹಳ್ಳಿಯ ಸೊಗಡನ್ನು ಉಳಿಸಿ, ವಾಸ್ತವ ಅಂಶಗಳನ್ನು ಅರಿತು ಕೆಲಸ ಮಾಡಬೇಕು. ಈ ವಿಷಯವನ್ನು ಅಧಿವೇಶನದಲ್ಲಿ ಚರ್ಚೆ ಮಾಡಿ ಈ ಪ್ರತಿಭಟನೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಭರವಸೆ ನೀಡಿದರು.
ಈ ವಿಷಯವನ್ನು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರೊಂದಿಗೆ ಗಂಭೀರವಾಗಿ ಚರ್ಚಿಸುತ್ತೇನೆ. ಈ ಹೋರಾಟವನ್ನ ಅರ್ಧ ದಾರಿಯಲಿ ಬಿಟ್ಟು ಹೋಗುವ ಕೆಲಸ ನಾವು ಮಾಡುವುದಿಲ್ಲ, ಯಾವ ರೀತಿ ಪರಿಹಾರ ಮಾಡಬೇಕು ಎಂಬುದನ್ನು ಚರ್ಚಿಸಿ, ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಧರಣಿ ನಿರತ ಗ್ರಾಮಸ್ಥರಿಗೆ ನಿಖಿಲ್ ಕುಮಾರಸ್ವಾಮಿ ಅವರು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಡಿಸಿ. ತಮ್ಮಣ್ಣ, ಜಿಲ್ಲಾಧ್ಯಕ್ಷ ಡಿ. ರಮೇಶ್, ರೈತ ಹೋರಾಟಗಾರರಾದ ಸುನಂದಾ ಜಯರಾಂ, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣರು, ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು, ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ್, ತಾಲ್ಲೂಕು ಅಧ್ಯಕ್ಷ ಚಿಕ್ಕ ತಿಮ್ಮೆಗೌಡ, ಮಹಿಳಾ ತಾಲ್ಲೂಕು ಅಧ್ಯಕ್ಷೆ ದಿವ್ಯ ರಾಮಚಂದ್ರ ಶೆಟ್ಟಿ, ಮುಖಂಡರುಗಳಾದ ಪುಟ್ಟಸ್ವಾಮಿ, ಕೆ.ಟಿ ರಾಜಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ರವಿ, ಯೋಗೇಶ್, ವಿರೇಶ್ ಅವರು ಸೇರಿದಂತೆ ಅನೇಕ ರೈತ ಹೋರಾಟಗಾರರು ಉಪಸ್ಥಿತರಿದ್ದರು.

