ಗಣರಾಜ್ಯೋತ್ಸವದ ಭಾಷಣವೇ ಹೊಸ ವಿವಾದ ಆಗುವ ಸಾಧ್ಯತೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುತ್ತಿರುವ ಸೂಚನೆಗಳು ಕಂಡುಬರುತ್ತಿದೆ. ಈ ಬಾರಿ ಗಣರಾಜ್ಯೋತ್ಸವದ ಭಾಷಣವೇ ಹೊಸ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ರಾಜ್ಯಪಾಲರು ಸಂಪ್ರದಾಯದಂತೆ ಗಣರಾಜ್ಯೋತ್ಸವದಂದು ಓದುವ ಭಾಷಣವನ್ನು ರಾಜ್ಯ ಸರ್ಕಾರವೇ ತಯಾರಿಸಿ ನೀಡುತ್ತದೆ. ಆದರೆ ಈ ಬಾರಿ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಕೇಂದ್ರ ಸರ್ಕಾರದ ನೀತಿಗಳ ಕುರಿತು ತೀವ್ರ ಟೀಕೆಗಳಿರುವುದು ರಾಜ್ಯಪಾಲರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

- Advertisement - 

ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯ, ಅನುದಾನ ಹಂಚಿಕೆಯಲ್ಲಿ ನಡೆಯುತ್ತಿರುವ ತಾರತಮ್ಯ, ಮಲತಾಯಿ ಧೋರಣೆ ಸೇರಿದಂತೆ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಈ ಅಂಶಗಳು ಕೇಂದ್ರ ಸರ್ಕಾರವನ್ನು ಟೀಕಿಸುವಂತಿರುವುದರಿಂದ, ಅಂತಹ ಭಾಷಣವನ್ನು ಓದುವುದಿಲ್ಲ ಎಂದು ರಾಜ್ಯಪಾಲರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಪಾಲರ ಪಟ್ಟು:
ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವ ಅಂಶಗಳಿದ್ದರೆ ಅದನ್ನು ಓದಲು ಸಾಧ್ಯವಿಲ್ಲ. ಸರ್ಕಾರ ತಿದ್ದುಪಡಿ ಮಾಡದಿದ್ದರೆ, ನಾನೇ ಸಿದ್ಧಪಡಿಸಿದ ಭಾಷಣ ಓದುತ್ತೇನೆ ಎಂದು ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಪಟ್ಟುಹಿಡಿದಿದ್ದಾರೆ ಎನ್ನಲಾಗಿದೆ. ಈ ವಿಚಾರ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎನ್ನಲಾಗುತ್ತಿದೆ.

- Advertisement - 

ವಿಧಾನಸಭೆಯಲ್ಲಿ ಹೈಡ್ರಾಮಾ:
ಕರ್ನಾಟಕ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಭಾರಿ ಗದ್ದಲ ಉಂಟಾಗಿತ್ತು. ಭಾಷಣದ ಕೆಲವು ಭಾಗಗಳನ್ನು ಕೈಬಿಡುವಂತೆ ಸರ್ಕಾರಕ್ಕೆ ರಾಜ್ಯಪಾಲರು ಮೊದಲೇ ಸೂಚಿಸಿದ್ದರು. ಆದರೆ, ರಾಜ್ಯಪಾಲರಿಂದ ಭಾಷಣ ಓದಿಸಿಯೇ ಸಿದ್ಧ ಎಂದು ಸರ್ಕಾರ ಪಟ್ಟು ಹಿಡಿದಿತ್ತು. ಕೊನೆಗೆ ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣದ ಮೊದಲ ಮತ್ತು ಕೊನೆಯ ಪ್ಯಾರದ ಒಂದೆರಡು ಲೈನ್ ಮಾತ್ರ ಓದಿ, ಶುಭಾಶಯ ಕೋರಿ ಸರ್ಕಾರಕ್ಕೆ ಶಾಕ್ ಕೊಟ್ಟು ವಿಧಾನಸಭೆಯಿಂದ ಹೊರನಡೆದಿದ್ದರು.

ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಾಯಕರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿತ್ತು.ಆ ಘಟನೆಯ ಬಳಿಕವೂ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಪರಿಸ್ಥಿತಿ ತಿಳಿಯಾಗಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಈಗ ಗಣರಾಜ್ಯೋತ್ಸವದ ಭಾಷಣದ ವಿಷಯವೇ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಕಿಡಿ ಹಚ್ಚಿದೆ. ಇದರಿಂದ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರ ನಡುವಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಸರ್ಕಾರ ತನ್ನ ನಿಲುವಿನಲ್ಲಿ ಬದಲಾವಣೆ ಮಾಡುತ್ತದೆಯೇ? ಅಥವಾ ರಾಜ್ಯಪಾಲರು ಸ್ವತಂತ್ರವಾಗಿ ಭಾಷಣ ಸಿದ್ಧಪಡಿಸುವರೇ? ಎಂಬುದು ಈಗ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

 

 

 

 

Share This Article
error: Content is protected !!
";