ನಾಯಕನಹಟ್ಟಿ ಜಾತ್ರೆ ಸಕಲ ಸಿದ್ದತೆಗೆ ಸಚಿವ ಡಿ. ಸುಧಾಕರ್ ಕಟ್ಟುನಿಟ್ಟಿನ ಸೂಚನೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಂಬರುವ ಫೆಬ್ರವರಿ
27 ರಿಂದ ಮಾರ್ಚ್ 9 ರವರೆಗೆ ಐತಿಹಾಸಿಕ ಪ್ರಸಿದ್ಧ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಜರುಗಲಿದೆ. ಮಾರ್ಚ್ 06 ರಂದು ದೊಡ್ಡ ರಥೋತ್ಸವ ನಡೆಯಲಿದ್ದು, ಅತ್ಯಂತ ವಿಜೃಂಭಣೆ ಮತ್ತು ಭಕ್ತಿಪೂರ್ವಕ ಹಾಗೂ ಶಿಸ್ತುಬದ್ಧವಾಗಿ ರಥೋತ್ಸವ ಜರುಗಿಸಲು ಅಗತ್ಯ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ರಾಜ್ಯ ಯೋಜನೆ, ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಚಳ್ಳಕೆರೆ ತಾಲ್ಲೂಕಿನ  ನಾಯಕನಹಟ್ಟಿಯ ಒಳಮಠದ ಆವರಣದಲ್ಲಿ ಸೋಮವಾರ ಜರುಗಿದ ನಾಯಕನಹಟ್ಟಿ ಜಾತ್ರಾ ಪೂರ್ವ ಸಿದ್ಧತಾ ಸಭೆಯಲ್ಲಿ  ಭಾಗವಹಿಸಿ ಅವರು ಮಾತನಾಡಿದರು.

- Advertisement - 

ನೆರೆ ಹೊರೆಯ ರಾಜ್ಯಗಳೂ ಸೇರಿದಂತೆ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುವುದರಿಂದ, ಯಾವುದೇ ಸಣ್ಣ ಲೋಪ-ದೋಷಗಳಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಭಕ್ತಾದಿಗಳಿಗೆ ಕುಡಿಯುವ ನೀರು, ಸ್ವಚ್ಛತೆ ಮತ್ತು ತುರ್ತು ವೈದ್ಯಕೀಯ ಸೇವೆಗಳಲ್ಲಿ ಯಾವುದೇ ಕೊರತೆಯಾಗದಂತೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಜಾತ್ರೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು  ಸಚಿವ ಡಿ.ಸುಧಾಕರ್ ಹೇಳಿದರು.

ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಮಾತನಾಡಿ, ಮೊಳಕಾಲ್ಮೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಮುಂಬರುವ ಐತಿಹಾಸಿಕ ಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಮೂಲಸೌಕರ್ಯಗಳ ಒದಗಿಸುವುದಾಗಿ ಭರವಸೆ ನೀಡಿದರು.

- Advertisement - 

ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ 10 ಲಕ್ಷ ರೂಪಾಯಿಗಳ ಅನುದಾನ ನೀಡುವುದಾಗಿ ಘೋಷಿಸಿದ ಶಾಸಕ ಗೋಪಾಲಕೃಷ್ಣ ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಸರ್ಕಾರಿ ಅನುದಾನ ವಿಳಂಬವಾದರೆ, ವೈಯಕ್ತಿಕವಾಗಿಯಾದರೂ ಈ ಮೊತ್ತವನ್ನು ಭರಿಸುವುದಾಗಿ ಅವರು ಸ್ಪಷ್ಟಪಡಿಸಿದರು.

          ಜಾತ್ರೆ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬ್ಯಾನರ್ ಮತ್ತು ಪೋಸ್ಟರ್‍ಗಳನ್ನು ಅಳವಡಿಸಿ ಪಟ್ಟಣದ ಅಂದಗೆಡಿಸುವುದನ್ನು ತಡೆಗಟ್ಟಲು ಪಟ್ಟಣ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಸೂಚಿಸಿದರು.

ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸುವುದರಿಂದ, ಮಾರ್ಚ್ ತಿಂಗಳ ಬಿಸಿಲನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ
, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

 ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಮಾತನಾಡಿ, ನಾಯಕನಹಟ್ಟಿ ಪಟ್ಟಣವನ್ನು ಸಂಪರ್ಕಿಸುವ ವಿವಿಧ ರಸ್ತೆಗಳಲ್ಲಿ ತಗ್ಗು ಗುಂಡಿಗಳಿದ್ದು, ಲೋಕೋಪಯೋಗಿ ಇಲಾಖೆಯವರು ಈ ರಸ್ತೆಗಳಲ್ಲಿನ ತಗ್ಗು ಗುಂಡಿಗಳನ್ನು ದುರಸ್ತಿಪಡಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು.  ಜಾತ್ರೆಯ ಒಳಗಾಗಿ ಎಲ್ಲ ರಸ್ತೆಗಳು ಅಚ್ಚುಕಟ್ಟಾಗಿರಬೇಕು ಎಂದು ಸೂಚನೆ ನೀಡಿದರು.

ಮೈಸೂರು ದಸರಾ ಮಾದರಿ ದೀಪಾಲಂಕಾರ:
ಜಾತ್ರೆಯ ಸೌಂದರ್ಯ ಮತ್ತು ಭಕ್ತರ ಉತ್ಸಾಹ ಹೆಚ್ಚಿಸಲು ಈ ಬಾರಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೈಸೂರು ದಸರಾ ಮಾದರಿಯಲ್ಲಿ ದೇವಸ್ಥಾನದ ಮುಖ್ಯ ದ್ವಾರದಿಂದ ರಥ ಬೀದಿಯವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಆಕರ್ಷಕ ದೀಪಾಲಂಕಾರ ಮಾಡಲಾಗುವುದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ತಿಳಿಸಿದರು.

ದೀಪಾಲಂಕಾರ ಜಾತ್ರೆಗೆ ಮತ್ತಷ್ಟು ಮೆರುಗು ನೀಡಲಿದೆ. ಜನರನ್ನು ಸಹ ಆಕರ್ಷಿಸಲಿದೆ. ದೀಪಾಲಂಕಾರದ ಕುರಿತು ದೇವಸ್ಥಾನ ಮಂಡಳಿ ಜೊತೆ ಬೆಸ್ಕಾಂ ಅಧಿಕಾರಿಗಳು ಚರ್ಚಿಸಿ ಯೋಜನೆ ರೂಪಿಸುವಂತೆ ಈ ವೇಳೆ ಅವರು ಸೂಚಿಸಿದರು.

ಐತಿಹಾಸಿಕ ಜಾತ್ರೆಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಾತ್ರಾ ಆವರಣದಲ್ಲಿ ಪ್ರಾಣಿಬಲಿ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಕೈಗೊಳ್ಳಬೇಕು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಈ ಬಾರಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯ ಶಾಶ್ವತ ಸಿಸಿ ಟಿವಿ ಕ್ಯಾಮೆರಾಗಳ ಜೊತೆಗೆ, 40 ರಿಂದ 50 ತಾತ್ಕಾಲಿಕ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿ ಪೆÇಲೀಸ್ ನಿಯಂತ್ರಣ ಕೊಠಡಿಯಿಂದ ಪ್ರತಿ ಕ್ಷಣದ ಮೇಲೆ ನಿಗಾ ಇರಿಸಬೇಕು ಎಂದು ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ:
ಜಾತ್ರೆಯ ಸಮಯದಲ್ಲಿ ಶಾಂತಿ ಕಾಪಾಡಲು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಅಬಕಾರಿ ಇಲಾಖೆಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.

ಇದೇ ವೇಳೆ ಲೋಕೋಪಯೋಗಿ ಇಲಾಖೆಯು ನಾಯಕನಹಟ್ಟಿ ಸಂಪರ್ಕಿಸುವ ರಸ್ತೆ ಬದಿಗಳಲ್ಲಿ ಜಂಗಲ್ ಕಟಿಂಗ್ ಮಾಡಬೇಕು.  ರಥ ಸಾಗುವ ಹಾದಿಯನ್ನು ಸರಿಪಡಿಸಬೇಕು. ಕೆಎಸ್‍ಆರ್‍ಟಿಸಿ ವತಿಯಿಂದ ವಿವಿಧ ತಾಲ್ಲೂಕುಗಳಿಂದಲೂ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದ ಅವರು, ಹಳೆಯ ದಾಸೋಹ ಭವನವನ್ನು ತೆರವುಗೊಳಿಸಲಾಗಿದ್ದು, ಈ ಸ್ಥಳದಲ್ಲಿ, ತಿರುಪತಿ ಮತ್ತು ಮಂತ್ರಾಲಯದ ಮಾದರಿಯಲ್ಲಿ ಸಕ್ರ್ಯುಲರ್ ಕ್ಯೂ ಲೈನ್ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಭಕ್ತರ ದಟ್ಟಣೆಯನ್ನು ಸುಗಮವಾಗಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದೇವಸ್ಥಾನದ ಕಲ್ಯಾಣ ಮಂಟಪ, ಹೊರಮಠದಲ್ಲಿರುವ ಕೊಠಡಿಗಳು ಅತ್ಯಂತ ಅಶುಚಿಯಾಗಿವೆ ಎಂದು ಭಕ್ತರು ದೂರಿದರು. ದೇವಸ್ಥಾನದ ಆವರಣದಲ್ಲಿರುವ ಸಿಸಿ ಟಿವಿ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಇದು ಭಕ್ತರ ಭದ್ರತೆಯ ಬಗ್ಗೆ ಆತಂಕ ಮೂಡಿಸಿದೆ.  ಅನಗತ್ಯವಾಗಿ ಬ್ಯಾನರ್ ಹಾಕಿ ಜಾತ್ರೆಯ ಸೌಂದರ್ಯಕ್ಕೆ ಧಕ್ಕೆ ತರಬಾರದು ತಡೆಯಬೇಕು ಎಂದು ಸಾರ್ವಜನಿಕರು ಸಭೆಯಲ್ಲಿ ಕೋರಿದರು.

ಮುಕ್ತಿ ಬಾವುಟ ಹರಾಜು : ಹಣ ವಸೂಲಿಗೆ ಕ್ರಮ
ಕಳೆದ
2021 ರಲ್ಲಿ  ಮುಕ್ತಿ ಬಾವುಟವನ್ನು 21 ಲಕ್ಷ ರೂ. ಗೆ ಪಡೆದಿದ್ದರು.  ಈ ಪೈಕಿ ಕಳೆದ ವರ್ಷ 04 ಲಕ್ಷ ರೂ. ನೀಡಿದ್ದು, ಕಳೆದ 15 ದಿನಗಳ ಹಿಂದೆ 12 ಲಕ್ಷ ರೂ. ನೀಡಿದ್ದಾರೆ.  ಬಾಕಿ ಉಳಿದ 5 ಲಕ್ಷ ರೂಪಾಯಿಗಳಿಗೂ ಈಗಾಗಲೆ ಚೆಕ್ ನೀಡಿದ್ದಾರೆ. ಬಾಕಿ ಮೊತ್ತವನ್ನು ಜಾತ್ರೆ ಆರಂಭದ ಒಳಗಾಗಿ ವಸೂಲಿ ಮಾಡುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಚಿತ್ರದುರ್ಗ ಶಾಸಕ ಕೆ.ಎಸ್.ವೀರೇಂದ್ರ ಪಪ್ಪಿಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ಬಾಮಿ, ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ನಾಯಕನಹಟ್ಟಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಗಂಗಾಧರ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಉಪಾಧ್ಯಕ್ಷೆ ಪಿ.ಬೋಸಮ್ಮ ಸ್ಥಾಯಿ ಸಮಿತಿಯ ಅಧ್ಯಕ್ಷ ಸೈಯದ್ ಅನ್ವರ್, ಸದಸ್ಯರಾದ ಜಿ.ಆರ್.ರವಿಕುಮಾರ್, ತಿಪ್ಪೇಶ್, ಈರಕ್ಕ, ಸುನೀತ, ಸರ್ವಮಂಗಳ, ಎಂ.ಟಿ.ಮಂಜುನಾಥ, ವಿನೂತ, ಗ್ರಾಮಸ್ಥರಾದ ಜೆ.ಪಿ ರವಿಶಂಕರ್, ಜಿಎಸ್ ಪ್ರಭುಸ್ವಾಮಿ, ಎಂ.ವೈ.ಟಿ.ಸ್ವಾಮಿ, ಎಸ್.ಉಮಾಪತಿ, ಬಾಲರಾಜ್ ಸೇರಿದಂತೆ ಮತ್ತಿತರರು ಇದ್ದರು.

Share This Article
error: Content is protected !!
";