ಚಂದ್ರವಳ್ಳಿ ನ್ಯೂಸ್, ನವದೆಹಲಿ:
ನವದೆಹಲಿಯಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸುತ್ತಿದ್ದಂತೆ ರಕ್ಷಣಾ ಸಚಿವ ರಾಜನಾಥ್ಸಿಂಗ್ಬರಮಾಡಿಕೊಂಡರು.
ರಕ್ಷಣಾ ಸಿಬ್ಬಂದಿ ಮತ್ತು ಮೂರು ಪಡೆಗಳ ಮುಖ್ಯಸ್ಥರ ನೇತೃತ್ವದಲ್ಲಿ, ಪ್ರಧಾನಿ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಿ, ಪುಷ್ಪಗುಚ್ಛ ಸಮರ್ಪಿಸುವ ಮೂಲಕ ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಸಮವಸ್ತ್ರದಲ್ಲಿದ್ದ ಅಧಿಕಾರಿಗಳು ಕೂಡ ಗೌರವ ಸಲ್ಲಿಸಿದರು.
ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವುದು ಸಂಪ್ರದಾಯ. ಅದರಂತೆ ಗಣರಾಜ್ಯೋತ್ಸವದ ಆರಂಭಕ್ಕೂ ಮುನ್ನ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.
ಈ ಗಂಭೀರ ಕ್ಷಣಗಳಲ್ಲಿ ಪ್ರಧಾನಿ ಜತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸೇವೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿಎಸ್ ಸಿಂಗ್ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಉಪಸ್ಥಿತರಿದ್ದರು.
ದೇಶದ ಬಲಿಷ್ಠ ಪಡೆಗಳಾದ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯಿಂದ ತಲಾ ಏಳು ಸದಸ್ಯರನ್ನೊಳಗೊಂಡ 21 ಒಳಗಾವಲುಗಾರರು ಹಾಗೂ ಆರು ಮಂದಿ ಬಿಗಲ್ ವಾದಕರು ಈ ಸಮಾರಂಭದ ಭಾಗವಾಗಿದ್ದರು.
ಗೌರವ ವಂದನೆಯ ನೇತೃತ್ವವನ್ನು ಭಾರತೀಯ ವಾಯುಪಡೆಯು ವಹಿಸಿಕೊಂಡಿದ್ದು, ಸ್ಕ್ವಾಡ್ರನ್ ಲೀಡರ್ ಹೇಮಂತ್ ಸಿಂಗ್ ಕನ್ಯಾಲ್ ತಂಡ ಮುನ್ನಡೆಸಿದರು.
ಇದು ಭಾರತೀಯ ಸಶಸ್ತ್ರ ಪಡೆಗಳ ಒಗ್ಗಟ್ಟು ಮತ್ತು ಜಂಟಿ ತತ್ವವನ್ನು ಪ್ರತಿಬಿಂಬಿಸಿತು. ಪುಷ್ಪಗುಚ್ಛ ಅರ್ಪಿಸಿದ ನಂತರ ‘ಸಲಾಮಿ ಶಸ್ತ್ರ’ ಮತ್ತು ‘ಶೋಕ ಶಸ್ತ್ರ’ ಗೌರವಗಳನ್ನು ಕೂಡ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ‘ಲಾಸ್ಟ್ ಪೋಸ್ಟ್’ ಧ್ವನಿಯು ಸ್ಮಾರಕದ ಆವರಣದಲ್ಲಿ ಮೊಳಗುತ್ತಿದ್ದಂತೆ, ಸಮವಸ್ತ್ರಧಾರಿ ಅಧಿಕಾರಿಗಳು ಸೆಲ್ಯೂಟ್ ಮಾಡುವ ಮೂಲಕ ಹಾಗೂ ಇತರರು ಎದ್ದು ನಿಂತು ಮೌನವಾಗಿ ಗೌರವ ಸಲ್ಲಿಸಿದರು.
ಬಳಿಕ ಕರ್ತವ್ಯ ಪಥಕ್ಕೆ ಆಗಮಿಸಿದರು. ಕರ್ತವ್ಯ ಪಥದಲ್ಲಿ ವಂದನಾ ವೇದಿಕೆಗೆ ತೆರಳುವುದಕ್ಕೂ ಮುನ್ನ ಪ್ರಧಾನಿ ಮೋದಿ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದರು. ಕರ್ತವ್ಯ ಪಥದ ಪರೇಡ್ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯ ಅತಿಥಿಗಳಾಗಿದ್ದ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಹಾಗೂ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರೂ ಹಾಜರಿದ್ದರು.
ಇಂಡಿಯಾ ಗೇಟ್ ಸಂಕೀರ್ಣದಲ್ಲಿರುವ ಈ ಐತಿಹಾಸಿಕ ಸ್ಮಾರಕವನ್ನು ಮೋದಿ 2019ರಲ್ಲಿ ಉದ್ಘಾಟಿಸಿದ್ದಾರೆ. ಇದನ್ನು 1962ರ ಭಾರತ-ಚೀನಾ ಯುದ್ಧ, 1947, 1965 ಮತ್ತು 1971ರ ಭಾರತ-ಪಾಕಿಸ್ತಾನ ಯುದ್ಧ, ಶ್ರೀಲಂಕಾದಲ್ಲಿ ಮತ್ತು 1999 ರ ಕಾರ್ಗಿಲ್ ಸಂಘರ್ಷದ ಸಮಯದಲ್ಲಿ ಭಾರತೀಯ ಶಾಂತಿಪಾಲನಾ ಪಡೆ ಕಾರ್ಯಾಚರಣೆ ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿದ್ದ ಸೈನಿಕರಿಗೆ ಸಮರ್ಪಿಸಲಾಗಿದೆ. ಸರಿಸುಮಾರು 40 ಎಕರೆ ಪ್ರದೇಶದಲ್ಲಿ ಹರಡಿರುವ ರಾಷ್ಟ್ರೀಯ ಯುದ್ಧ ಸ್ಮಾರಕವು ನಾಲ್ಕು ಕೇಂದ್ರೀಕೃತ ವೃತ್ತಗಳನ್ನು ಒಳಗೊಂಡಿದೆ.

