ಮನರೇಗಾ ಮರುಜಾರಿ ಮಾಡುವವರೆಗೂ ಹೋರಾಟ ಬಿಡಲ್ಲ-ಡಿಸಿಎಂ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮನರೇಗಾ ಮರುಜಾರಿ ಮಾಡುವವರೆಗೂ ಹೋರಾಟ ಬಿಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಸಿದರು.

ಮನರೇಗಾ ಹೆಸರು ಬದಲಾವಣೆ ವಿರೋಧಿಸಿ ಫ್ರೀಡಂಪಾರ್ಕ್‌ನಿಂದ ರಾಜಭವನದವರೆಗೆ ರಾಜಭವನ ಚಲೋ – ಮನರೇಗಾ ಬಚಾವೋ ಸಂಗ್ರಾಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

- Advertisement - 

ಮನರೇಗಾ ಯೋಜನೆ ಇದು ಬಡವರ ಹಕ್ಕು ಹಾಗೂ ಉದ್ಯೋಗ.  ಬಡವರ ಹಕ್ಕಿಗೋಸ್ಕರ ನಾವು ಹೋರಾಟ ಮಾಡುತ್ತಿದ್ದೇವೆ. ಬಡವರಿಗೆ ಮನರೇಗಾ ಅಡಿ ಕೂಲಿ ಕೆಲಸ ಕೊಟ್ಟಿದ್ದು ಮನಮೋಹನ್‌ಸಿಂಗ್‌ಅವರ ಸರ್ಕಾರ.

2013ರಲ್ಲಿ ಮನರೇಗಾ ಒಂದು ಉತ್ತಮವಾದ ಯೋಜನೆ ಎಂದು ವಿಶ್ವಬ್ಯಾಂಕ್‌ಪ್ರಮಾಣಪತ್ರವನ್ನು ಕೊಟ್ಟಿತ್ತು.  6000 ಪಂಚಾಯಿತಿಗಳಿಗೆ 6000 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿತ್ತು. ಮೊದಲು ಯಾವ ಕೆಲಸ ಮಾಡಿಸಬೇಕು ಎಂದು ಪಂಚಾಯಿತಿ ಸದಸ್ಯರುಗಳು ತೀರ್ಮಾನ ಮಾಡುತ್ತಿದ್ದರು.

- Advertisement - 

ಆದರೆ ಈಗ ಕೇಂದ್ರ ಸರ್ಕಾರ ಮನರೇಗಾ ಹೆಸರು ತೆಗೆದು ಹಾಕಿ ಈ ಯೋಜನೆಗೆ ಹೊಸ ರೂಪ ಕೊಟ್ಟಿದೆ. ಇದರಲ್ಲಿ ಶೇ. 60ರಷ್ಟು ಕೇಂದ್ರ ಹಾಗೂ ಶೇ. 40ರಷ್ಟು ಅನುದಾನವನ್ನು ನಾವು ಕೊಡಬೇಕಂತೆ. ಇದರ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ಮಾಡುವ ಸಲುವಾಗಿ ನಾವು ಅಧಿವೇಶನವನ್ನು ಕರೆದಿದ್ದೇವೆ ಎಂದು ಡಿಸಿಎಂ ತಿಳಿಸಿದರು.

ಬಿಜೆಪಿಯವರು ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಮಾಡುವ ಹಕ್ಕು ಇಲ್ಲ. ಕಚೇರಿಗಳಲ್ಲಿ ಗಾಂಧಿ ಫೋಟೋ ಇಟ್ಟುಕೊಳ್ಳಲು ಆಗುವುದಿಲ್ಲ. ಗಾಂಧೀಜಿಯನ್ನು ಗೋಡ್ಸೇ ಅಲ್ಲ, ಬಿಜೆಪಿ ಹಾಗೂ ಎನ್‌ಡಿಎ ಅವರು ಸೇರಿ ಕೊಲ್ಲುತ್ತಿದ್ದೀರಿ. ಆದರೆ ಯಾವುದೇ ಕಾರಣಕ್ಕೂ ಗಾಂಧೀಜಿ ಅವರನ್ನು ಕೊಲ್ಲಲು ಸಾಧ್ಯವಿಲ್ಲ.

ಮನರೇಗಾ ಹಳ್ಳಿಗಳ ಉದ್ಧಾರದ ಯೋಜನೆ. ಗಾಂಧೀಜಿಯವರನ್ನು ನೀವು ದ್ವೇಷದಿಂದ ಕಾಣುತ್ತಿದ್ದೀರಿ. ಅದಕ್ಕೆ ನಮಗೆ ನಿಮ್ಮ ಕಾಯ್ದೆ ಬೇಡವಾಗಿದೆ. ಮನರೇಗಾ ಮರು ಜಾರಿ ಮಾಡುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ. ನಮ್ಮನ್ನು ಜೈಲಿಗೆ ಹಾಕಿದ್ರೂ ನಾವು ಹೆದರುವುದಿಲ್ಲ. ಗಾಂಧೀಜಿ ಅವರ ಹೆಸರು ಶಾಶ್ವತವಾಗಿ ಉಳಿಯಬೇಕು. ಹಳ್ಳಿಗೊಂದು ಶಾಲೆ, ಸಹಕಾರ ಸಂಘ ಹಾಗೂ ಹಳ್ಳಿಗೊಂದು ಪಂಚಾಯಿತಿ ಇರಬೇಕು ಎಂಬುದು ಗಾಂಧೀಜಿಯವರ ಸಂಕಲ್ಪವಾಗಿತ್ತು.

ಮನರೇಗಾ ಮರುಜಾರಿಗಾಗಿ ನಾವು ಹೋರಾಟ ಮುಂದುವರಿಸುತ್ತೇವೆ, ರಾಜ್ಯಪಾಲರವರೆಗೆ ನಿಯೋಗ ಹೋಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ 5 ಕಿ.ಮೀ ಪಾದಯಾತ್ರೆ ಮಾಡುತ್ತೇವೆ. ಇದರಲ್ಲಿ ಎಲ್ಲ ಶಾಸಕರು, ಮಂತ್ರಿಗಳು, ಸಂಸದರು ಭಾಗವಹಿಸುತ್ತಾರೆ. ಎಲ್ಲರೂ ಸೇರಿಕೊಂಡು ಗಾಂಧೀಜಿ ಅವರ ಹೆಸರನ್ನು ಉಳಿಸಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಡಿ.ಕೆ ಶಿವಕುಮಾರ್ ಕರೆ ನೀಡಿದರು.

Share This Article
error: Content is protected !!
";