ಚಂದ್ರವಳ್ಳಿ ನ್ಯೂಸ್, ಉಡುಪಿ:
ವಿದ್ಯಾರ್ಥಿಗಳಲ್ಲಿರುವ ಸಾಧನೆ, ಸಾಧ್ಯತೆ ತೆರೆದಿಡುವ ಜವಾಬ್ದಾರಿ ಶಿಕ್ಷಕರಿಗಿದೆ. ಶಿಕ್ಷಣದಲ್ಲಿ ಮಕ್ಕಳು ಕುಸಿದಾಗ ಅವರ ಕೈಹಿಡಿದು ಮುನ್ನಡೆಸಬೇಕು. ಎಲ್ಲ ಶಿಕ್ಷಕರೂ ತಂಡವಾಗಿ ಕೆಲಸ ಮಾಡಬೇಕು. ಸಣ್ಣ ಗುರುತಿಸುವಿಕೆ, ಧನಾತ್ಮಕ ಅಂಶಗಳು ಶಿಕ್ಷಣದಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದರೆ, ಸಾಮಾಜಿಕ ಮನ್ನಣೆಯ ಕೊರತೆಯಿಂದ ಶಿಕ್ಷಕರಾಗಲು ಯುವ ಸಮುದಾಯ ಹಿಂದೇಟು ಹಾಕುತ್ತಿದೆ ಎಂದು ಶಿಕ್ಷಣ ತಜ್ಞ, ಉಡುಪಿಯ ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ‘ಸಂಸ್ಕೃತಿ ಉತ್ಸವ‘ದ ನಿಮಿತ್ತ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸೋಮವಾರ (ಜ.26) ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದು ಲಕ್ಷ ರೂ. ಮೌಲ್ಯದ ‘ವಿಶ್ವಪ್ರಭಾ‘ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮಾದರಿ ಪ್ರತಿಷ್ಠಾನ:
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಸಾಲುಮರದ ತಿಮ್ಮಕ್ಕ ಅವರಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉದ್ಘಾಟನೆಗೊಂಡಿರುವುದು ಹೆಮ್ಮೆಯ ಸಂಗತಿ. ಸಾಂಸ್ಕೃತಿಕವಾಗಿ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಕಲೆ ಹಾಗೂ ಕಲಾವಿದರನ್ನು ಗೌರವಿಸುತ್ತಿದ್ದಾರೆ. ಸಾಧಕರಿಗೆ ಉತ್ತಮ ಮೊತ್ತದ ಪ್ರಶಸ್ತಿಯೊಂದಿಗೆ ಸಮಾಜಕ್ಕೆ ಅವರನ್ನು ಗುರುತಿಸುವ ಕಾರ್ಯ ಮಾದರಿ ಹಾಗೂ ಅರ್ಥಪೂರ್ಣ ಎಂದರು.
ಶಿಕ್ಷಕ, ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಕೆ. ಅವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ, ಶೈಕ್ಷಣಿಕ ಕ್ಷೇತ್ರದ ಸಾಧನೆ ವಿವರಿಸಿ ಅಭಿನಂದನಾ ಮಾತುಗಳನ್ನಾಡಿದರು. ಸಂಧ್ಯಾ ಶೆಣೈ ಪ್ರಶಸ್ತಿ ಪತ್ರ ವಾಚಿಸಿದರು.
ಕಲಾ ಪೋಷಕ ಸಿ.ಎಸ್. ರಾವ್, ವೋಲ್ವೋ ಕೇರ್ ಉಡುಪಿಯ ಕೃಷ್ಣರಾಜ ತಂತ್ರಿ, ಪ್ರತಿಷ್ಠಾನದ ಸಂಸ್ಥಾಪಕ ಯು.ವಿಶ್ವನಾಥ್ ಶೆಣೈ, ಪ್ರಭಾವತಿ ಶೆಣೈ, ಉದ್ಯಮಿ ಪ್ರಶಾಂತ್ ಕಾಮತ್, ಪ್ರತಿಷ್ಠಾನದ ಅಧ್ಯಕ್ಷ ಪ್ರೊಫೆಸರ್ ಶಂಕರ್ ಉಪಸ್ಥಿತರಿದ್ದರು.
ಐದನೇ ತರಗತಿ ವಿದ್ಯಾರ್ಥಿನಿ ಧೃತಿ ಪ್ರಾರ್ಥಿಸಿದಳು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವಿಶ್ವಸ್ಥ ವಿಘ್ನೇಶ್ವರ ಅಡಿಗ ಸ್ವಾಗತಿಸಿದರು. ಪ್ರತಿಷ್ಠಾನದ ವಿಶ್ವಸ್ಥ ಮರವಂತೆ ನಾಗರಾಜ್ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ವಂದಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ ಶ್ರೀಕಾಂತ್ ಎನ್.ವಿ. ನಿರ್ದೇಶನದಲ್ಲಿ ಯಕ್ಷ ರಂಗಾಯಣ ರೆಪರ್ಟರಿ ಕಲಾವಿದರು ‘ಮಹಾತ್ಮಾರ ಬರವಿಗಾಗಿ‘ ಎಂಬ ನಾಟಕ ಪ್ರದರ್ಶಿಸಿದರು.
“ಸಾಧನೆ ಗುರುತಿಸಿ ನೀಡಲ್ಪಡುವ ಪ್ರಶಸ್ತಿಯಿಂದ ಕಾರ್ಯಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೇರಲು ಪೂರಕ ಪ್ರೋತ್ಸಾಹ ಲಭಿಸುತ್ತದೆ. ಸಂಸ್ಕೃತಿ ವಿಶ್ವ ಪ್ರತಿಷ್ಠಾನವು ಶಿಕ್ಷಕನಿಗೆ ಪ್ರಶಸ್ತಿ ನೀಡಿರುವುದು ಸಮಸ್ತ ಶಿಕ್ಷಕರ ಸಮೂಹಕ್ಕೆ ಗೌರವ ನೀಡಿದಂತಾಗಿದೆ. ನನಗೆ ಲಭಿಸಿರುವ 1 ಲಕ್ಷ ರೂ. ಪ್ರಶಸ್ತಿ ಮೊತ್ತವನ್ನು ಬ್ರಹ್ಮಾವರದ ಸರ್ಕಾರಿ ಪ್ರೌಢಶಾಲೆ ಹಾಗೂ ಉಡುಪಿಯ ಒಳಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ‘ವಿಶ್ವ ಪ್ರಭಾ‘ ಹೆಸರಿನಲ್ಲೇ ದತ್ತಿ ನಿಧಿ ಸ್ಥಾಪಿಸುತ್ತೇನೆ”.
ಡಾ. ಅಶೋಕ್ ಕಾಮತ್. ಶಿಕ್ಷಣ ತಜ್ಞ.

