ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸದುರ್ಗ ತಾಲ್ಲೂಕಿನ ಕಸಬಾ ಹೋಬಳಿಯ ಕುಂದೂರು ಗೊಲ್ಲರಹಟ್ಟಿ (ಶ್ರೀನಿವಾಸಪುರ) ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಕಳಶಾರೋಹಣ ಕಾರ್ಯಕ್ರಮವು ಫೆಬ್ರವರಿ 6 ರಿಂದ 10 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಫೆ.6ರಂದು ಶುಕ್ರವಾರ ಜಾಂಡೇವು ಹೊಡೆಯುವುದು, ಮೀಸಲು ಅಕ್ಕಿ ಅಳೆಯುವುದು, ಗಂಗಾಸ್ನಾನಕ್ಕೆ ಹೊರಡುವುದು. ಫೆ.7ರಂದು ಮುಂಜಾನೆಯಿಂದಲೇ ಗಂಗಾಸ್ನಾನ ಮತ್ತು ವಿವಿಧ ದೇವತೆಗಳ ಪೂರ್ಣಕುಂಭ ಸ್ವಾಗತದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಸಂಜೆ ವಾಸ್ತುಹೋಮ ಹಾಗೂ ರಕ್ಷಾಬಂಧನ ಕಾರ್ಯಕ್ರಮಗಳು ನಡೆಯಲಿವೆ.
ಫೆ.08ರಂದು ಬೆಳಿಗ್ಗೆ 9.30ರಿಂದ 10.30ರ ಒಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಉತ್ಸವದ ಪ್ರಮುಖ ಆಕರ್ಷಣೆಯಾದ ನೂತನ ದೇವಾಲಯದ “ಕಳಶಾರೋಹಣ” ಕಾರ್ಯಕ್ರಮವು ನೆರವೇರಲಿದೆ.
ನೆಲಮಂಗಲ ತಾಲ್ಲೂಕು ಡಾಬಸ್‍ಪೇಟೆ ವನಕಲ್ ಮಠದ ಡಾ.ಬಸವರಾಮಾನಂದ ಮಹಾಸ್ವಾಮಿಗಳವರು ಈ ಪುಣ್ಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಕಳಶಾರೋಹಣ ನೆರವೇರಿಸಲಿದ್ದಾರೆ.
ಅಂದು ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಸಂಜೆ 5 ಗಂಟೆಯಿಂದ ಕೋಲಾಟ, ಜಾನಪದ ನೃತ್ಯ ಹಾಗೂ ಭಜನೆಯಂತಹ ಸಾಂಸ್ಕøತಿಕ ಕಾರ್ಯಕ್ರಮಗಳು ಗ್ರಾಮದ ಕಳೆಯನ್ನು ಹೆಚ್ಚಿಸಲಿವೆ. ಫೆ.9ರಂದು ಸಂಜೆ 4 ಗಂಟೆಯಿಂದ ಹಿರಿಯರ ಪೂಜೆ, ಬಸವನ ಗುಡ್ಡೆಯ ಪೂಜೆ ಮತ್ತು ದಾಸೋಹ ನಡೆಯಲಿದೆ. ಫೆ. 10ರಂದು ದೇವಸ್ಥಾನದ ಸುತ್ತ ಕುರಿ ಕರೆಯುವ ವಿಶಿಷ್ಟ ಆಚರಣೆಯೊಂದಿಗೆ ಈ ಐದು ದಿನಗಳ ಧಾರ್ಮಿಕ ಉತ್ಸವ ಸಂಪನ್ನಗೊಳ್ಳಲಿದೆ.
ಧಾರ್ಮಿಕ ಸಮಾರಂಭ: ಫೆ.8ರಂದು ಮಧ್ಯಾಹ್ನ 2ಕ್ಕೆ ಹಿರಿಯ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಭವ್ಯ ಧಾರ್ಮಿಕ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕೃಷ್ಣ ಯಾದವಾನಂದ ಮಹಾಸ್ವಾಮಿಗಳು, ಶಿವಲಿಂಗಾನಂದ ಮಹಾಸ್ವಾಮಿಗಳು, ಪುರುಷೋತ್ತಮಾನಂದ ಮಹಾಸ್ವಾಮಿಗಳು ಹಾಗೂ ಬಸವ ರಮಾನಂದ ಮಹಾಸ್ವಾಮಿಗಳು, ಸದ್ಗುರು ತಿಮ್ಮಪ್ಪ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸುವರು. ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷರು ಹಾಗೂ ಹೊಸದುರ್ಗ ಶಾಸಕರಾದ ಬಿ.ಜಿ. ಗೋವಿಂದಪ್ಪ ಉದ್ಘಾಟನೆ ನೆರವೇರಿಸುವರು.
ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವರು ಹಾಗೂ ಮಧುಗಿರಿ ಶಾಸಕರಾದ ಕೆ.ಎನ್. ರಾಜಣ್ಣ ಭಾಗವಹಿಸುವರು. ಸಮಾಜ ಕಲ್ಯಾಣ ಇಲಾಖೆ ಎಂ.ಡಿ ಹಾಗೂ ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಸಿ.ಸತ್ಯಭಾವ ಶಿವಲಿಂಗಪ್ಪನವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರಾದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಡಿ.ಟಿ. ಶ್ರೀನಿವಾಸ್ ಸೇರಿದಂತೆ ಮಾಜಿ ಶಾಸಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

