ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ಎಲ್ಲ ಒಪ್ಪಂದಗಳ ತಾಯಿ‘ ಎಂದೇ ಕರೆಯಲಾಗುತ್ತಿರುವ ಭಾರತ ಹಾಗೂ ಯುರೋಪಿಯನ್‌ಯೂನಿಯನ್‌ನಡುವೆ ಬಹುನಿರೀಕ್ಷಿತ ಮುಕ್ತ ವಾಣಿಜ್ಯ ಒಪ್ಪಂದ, ವಿಕಸಿತ ಭಾರತ 2047 ಕಡೆಗೆ ರಾಷ್ಟ್ರದ ಮುನ್ನಡೆಗೆ ದೊಡ್ಡ ಶಕ್ತಿ ತುಂಬಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ-ಯುರೋಪಿಯನ್ ಯೂನಿಯನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಘೋಷಣೆಯು, ಭಾರತದ ಆರ್ಥಿಕತೆಯ ಐತಿಹಾಸಿಕ ಮತ್ತು ಮಹತ್ವಪೂರ್ಣ ಮೈಲಿಗಲ್ಲಾಗಿದೆ.
ಜಾಗತಿಕ ಡಿಜಿಪಿಯ 25% ಮತ್ತು ಜಾಗತಿಕ ವ್ಯಾಪಾರದ ಸುಮಾರು ಮೂರನೇ ಒಂದು ಭಾಗದ ಆರ್ಥಿಕತೆಗಳನ್ನು ಒಳಗೊಂಡಿರುವ ಈ ಬಹುನಿರೀಕ್ಷಿತ ಒಪ್ಪಂದವನ್ನು “ಎಲ್ಲಾ ಒಪ್ಪಂದಗಳ ತಾಯಿ” ಎಂದು ಅನ್ವರ್ಥವಾಗಿ ಕರೆಯಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ದೇಶದಲ್ಲಿ ವ್ಯಾಪಾರ, ಹೂಡಿಕೆ, ಉದ್ಯೋಗಗಳು ಮತ್ತು ನಾವೀನ್ಯತೆಗಾಗಿ ಅಭೂತಪೂರ್ವ ಅವಕಾಶಗಳನ್ನು ತೆರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಮಹತ್ವಪೂರ್ಣ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ರಫ್ತು ವಲಯಕ್ಕೆ ಸುಮಾರು 6.4 ಲಕ್ಷ ಕೋಟಿ ರೂ. ಉತ್ತೇಜನ ಸಿಗಲಿದ್ದು, ಇದರಿಂದ ನಮ್ಮ ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ನೇರ ಲಾಭವಾಗಲಿದೆ.
ರಾಜ್ಯದ ಕೈಗಾರಿಕಾ ವಲಯದ ಎಲೆಕ್ಟ್ರಾನಿಕ್ಸ್, ಎಂಜಿನಿಯರಿಂಗ್ ಮತ್ತು ಫಾರ್ಮಾ ರಫ್ತಿಗೆ ವಿಫುಲ ಅವಕಾಶ ದೊರೆಯಲಿದೆ, ಜವಳಿ, ಚರ್ಮ, ಕೃಷಿ ಮತ್ತು ರತ್ನಾಭರಣ ವಲಯಗಳಿಗೆ ಯುರೋಪ್ ಮಾರುಕಟ್ಟೆಯಲ್ಲಿ ಶೂನ್ಯ ಸುಂಕದ ಪ್ರವೇಶ ಸಿಗಲಿದೆ. ಈ ಮೂಲಕ ಪ್ರಮುಖ ಜಾಗತಿಕ ಮಾರುಕಟ್ಟೆಗಳೊಂದಿಗೆ ಭಾರತದ ಏಕೀಕರಣವನ್ನು ಈ ಒಪ್ಪಂದ ಮತ್ತಷ್ಟು ಬಲಪಡಿಸುತ್ತದೆ.
ಇದು ಪ್ರಗತಿಯ ಹಾದಿಯಲ್ಲಿ ಭಾರತದ ಸ್ಥಿರ ಮುನ್ನಡೆಯನ್ನು ಮತ್ತು ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ ದೂರದೃಷ್ಟಿಯ ನಾಯಕತ್ವಕ್ಕೆ ನಿದರ್ಶನವಾಗಿದೆ. ಅವರ ನೇತೃತ್ವದಲ್ಲಿ ಭಾರತ ಜಾಗತಿಕ ಆರ್ಥಿಕ ರಂಗದಲ್ಲಿ ನಿರ್ಣಾಯಕ ಸ್ಥಾನ ಪಡೆದಿದ್ದು, ವಿಕಸಿತ ಭಾರತ 2047 ಕಡೆಗೆ ಅತ್ಯಂತ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ ಎಂದು ವಿಜಯೇಂದ್ರ ತಿಳಿಸಿದರು.

